ಚಿತ್ರದುರ್ಗ: ನ್ಯಾಷನಲ್ ಹೆರಾಲ್ಡ್ ಪ್ರಕರಣ ತೀರಾ ಹಳೆಯದು. ರಾಜಕೀಯ ಪ್ರತಿಕಾರಕ್ಕಾಗಿ ಜಾರಿ ನಿರ್ದೇಶನಾಲಯ (ಇ.ಡಿ) ವಿಚಾರಣೆ ನಡೆಸುತ್ತಿಲ್ಲ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.
‘ಆದಾಯ ತೆರಿಗೆ (ಐಟಿ) ಹಾಗೂ ಜಾರಿ ನಿರ್ದೇಶನಾಲಯದ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರು, ಇತಿಹಾಸ ಮರೆತಿರುವಂತೆ ಕಾಣುತ್ತಿದೆ. ರಾಜಕೀಯ ಬೆಳವಣಿಗೆಗಾಗಿ ಕಾಂಗ್ರೆಸ್ ಎಂಥಹ ಕೆಲಸ ಮಾಡಿದೆ ಎಂಬುದು ನಮಗೂ ಗೊತ್ತಿದೆ. ರಾಜಕೀಯ ಲಾಭಕ್ಕಾಗಿ ಬಿಜೆಪಿ ವಿರುದ್ಧ ಆರೋಪ ಮಾಡಲಾಗುತ್ತಿದೆ. ಇದರ ಹಿಂದಿನ ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ’ ಎಂದು ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
‘ಅಧಿಕಾರದಲ್ಲಿದ್ದ ಅಷ್ಟೂ ದಿನವೂ ಇತರ ಪಕ್ಷಗಳಿಗೆ ಕಾಂಗ್ರೆಸ್ ಕಿರುಕುಳ ನೀಡಿದೆ. ನೋವು ಏನು ಎಂಬುದು ಕಾಂಗ್ರೆಸ್ ನಾಯಕರಿಗೂ ಗೊತ್ತಾಗಬೇಕು. ಕಾಲಚಕ್ರದಲ್ಲಿ ಬಿಜೆಪಿಗೆ ಮೇಲುಗೈಯಾಗಿದೆ. ಕಾಂಗ್ರೆಸ್ ಸಂಸ್ಕೃತಿಯನ್ನು ಬಿಜೆಪಿ ಪಾಲಿಸುವುದಿಲ್ಲ. ತಪ್ಪು ಮಾಡಿದವರ ವಿರುದ್ಧ ಕಾನೂನು ಕ್ರಮ ಸಹಜ. ಇದಕ್ಕೆ ರಾಜಕೀಯ ಆಯಾಮ ನೀಡುವುದು ತಪ್ಪು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.