ಬೆಂಗಳೂರು: ಐಎಂಎ ವಂಚನೆ ಪ್ರಕರಣದಲ್ಲಿ ಸಚಿವ ಜಮೀರ್ ಅಹಮದ್ ಖಾನ್‌ಗೆ ಜಾರಿ ನಿರ್ದೇಶನಾಲಯ (ಇ.ಡಿ) ನೋಟಿಸ್ ನೀಡಿದೆ. ಇನ್ನೊಂದು ಪ್ರಕರಣದಲ್ಲಿ, ಐ.ಟಿ ದಾಳಿ ವೇಳೆ ಸಾಕ್ಷ್ಯ ನಾಶಪಡಿಸಿದ ಆರೋಪ ಸಂಬಂಧ ಸಚಿವ ಡಿ.ಕೆ. ಶಿವಕುಮಾರ್‌ಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
‘ಜುಲೈ 5ರಂದು ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ಆಹಾರ ಮತ್ತು ನಾಗರಿಕ ಸಚಿವ ಜಮೀರ್ ಅಹಮದ್ ಖಾನ್‌ಗೆ ನೋಟಿಸ್‌ನಲ್ಲಿ ತಿಳಿಸಲಾಗಿದೆ. ರಿಚ್ಮಂಡ್ ಸರ್ಕಲ್‌ನಲ್ಲಿದ್ದ ನನ್ನ ಆಸ್ತಿಯನ್ನು ಮನ್ಸೂರ್ ಖಾನ್‌ಗೆ 2017ರಲ್ಲಿ ಮಾರಾಟ ಮಾಡಿದ್ದೆ. ಈ ಬಗ್ಗೆ ವಿವರ ಪಡೆಯಲು ಇ.ಡಿ ಅಧಿಕಾರಿಗಳು ಕರೆದಿದ್ದಾರೆ’ ಎಂದು ಜಮೀರ್ ಅಹಮದ್ ತಿಳಿಸಿದರು.
ಈ ಪ್ರಕರಣದಲ್ಲಿ ಶಿವಾಜಿ ನಗರ ಶಾಸಕ ರೋಷನ್ ಬೇಗ್ ಅವರಿಗೂ ಇ.ಡಿ ನೋಟಿಸ್ ನೀಡುವ ಸಾಧ್ಯತೆಯಿದೆ.
ಅಲ್ಲದೆ, ಬಿಡದಿ ಬಳಿಯ ಈಗಲ್‌ಟನ್ ರೆಸಾರ್ಟ್‌ನಲ್ಲಿ ಆದಾಯ ತೆರಿಗೆ (ಐ.ಟಿ) ಅಧಿಕಾರಿಗಳು 2017ರ ಆಗಸ್ಟ್ 2ರಂದು ನಡೆಸಿದ್ದ ದಾಳಿ ವೇಳೆ ಸಾಕ್ಷ್ಯ ನಾಶಪಡಿಸಿದ ಪ‍್ರಕರಣದಲ್ಲಿ ಸಚಿವ ಶಿವಕುಮಾರ್‌ಗೆ ನೋಟಿಸ್ ಜಾರಿಗೊಳಿಸಲಾಗುತ್ತಿದೆ.
ಆರ್ಥಿಕ ಅಪರಾಧಗಳ ನ್ಯಾಯಾಲಯದಲ್ಲಿ ಐ.ಟಿ. ದಾಖಲಿಸಿದ್ದ ಖಾಸಗಿ ದೂರನ್ನು ‘ಜನಪ್ರತಿನಿಧಿಗಳ ಕೋರ್ಟ್’ ವಿಚಾರಣೆ ನಡೆಸಿತ್ತು. ಜನ ಪ್ರತಿನಿಧಿಗಳ ಕೋರ್ಟ್‌ನ ಈ ಹಿಂದಿನ ನ್ಯಾಯಾಧೀಶ ಬಿ.ವಿ.ಪಾಟೀಲ, ಶಿವಕುಮಾರ್ ಅವರನ್ನು ಆರೋಪದಿಂದ ಕೈಬಿಟ್ಟಿದ್ದರು. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.