ADVERTISEMENT

ಮನೆ ನಿರ್ಮಾಣದ ಬಗ್ಗೆ ಯಾರೋ ಕೊಟ್ಟ ದೂರಿನ ಹಿನ್ನೆಲೆಯಲ್ಲಿ ಇ.ಡಿ ದಾಳಿ: ಜಮೀರ್

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 5:58 IST
Last Updated 6 ಆಗಸ್ಟ್ 2021, 5:58 IST
ಜಮೀರ್ ಅಹ್ಮದ್ ಖಾನ್
ಜಮೀರ್ ಅಹ್ಮದ್ ಖಾನ್   

ಬೆಂಗಳೂರು: ಶಾಸಕ ಜಮೀರ್ ಅಹ್ಮದ್ ಖಾನ್ ಮತ್ತು ಮಾಜಿ ಸಚಿವ ರೋಷನ್‌ ಬೇಗ್‌ ಮನೆ ಮೇಲೆ ಜಾರಿ ನಿರ್ದೇಶನಾಲಯದ(ಇ.ಡಿ) ಅಧಿಕಾರಿಗಳು ನಡೆಸಿದ್ದ ದಾಳಿ ಶುಕ್ರವಾರ ಬೆಳಗಿನ ಜಾವ ಮುಕ್ತಾಯಗೊಂಡಿದೆ.

ಸತತ 23 ಗಂಟೆಗಳ ಕಾಲ ದಾಖಲೆಗಳ ಹುಡುಕಾಟ ನಡೆಸಿ ಬೆಳಗಿನ ಜಾವ ಅಧಿಕಾರಿಗಳ ತಂಡ ವಾಪಸ್ ಹೋಗಿದೆ. ಕೆಲ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ.

ದಾಳಿ ಬಗ್ಗೆ ಹೇಳಿಕೆ ನೀಡಿದ ಜಮೀರ್ ಅಹ್ಮದ್ ಖಾನ್ , ‘ಮನೆ ನಿರ್ಮಾಣಕ್ಕೆ ಆಗಿರುವ ವೆಚ್ಚದ ಬಗ್ಗೆ ಯಾರೋ ನೀಡಿರುವ ದೂರು ಆಧರಿಸಿ ಇ.ಡಿ ಅಧಿಕಾರಿಗಳು ಬಂದಿದ್ದರು. ಅವರು ಕೇಳಿರುವ ಎಲ್ಲಾ ಮಾಹಿತಿಯನ್ನೂ ನೀಡಿದ್ದೇನೆ’ ಎಂದರು.

ADVERTISEMENT

‘ಇಷ್ಟು ದೊಡ್ಡ ಮನೆ ನಿರ್ಮಾಣಕ್ಕೆ ಹಣ ಎಲ್ಲಿಂದ ಬಂತು, ಎಷ್ಟು ಖರ್ಚು ಮಾಡಲಾಗಿದೆ ಎಂಬುದರ ಬಗ್ಗೆ ಪ್ರಶ್ನೆ ಮಾಡಿದರು. ಎಲ್ಲಾ ವ್ಯವಹಾರವನ್ನೂ ಬ್ಯಾಂಕ್ ಮೂಲಕವೇ ಮಾಡಿದ್ದೇವೆ. ಆ ಎಲ್ಲಾ ದಾಖಲೆಗಳನ್ನೂ ಒದಗಿಸಿದ್ದೇವೆ. ಅವರೂ ಬ್ಯಾಂಕ್‌ಗಳಿಗೆ ಹೋಗಿ ಮಾಹಿತಿ ಪಡೆದುಕೊಂಡರು. ಅವರು ನಿರೀಕ್ಷೆ ಮಾಡಿದಂತೆ ಯಾವ ಲೋಪವೂ ಕಂಡು ಬರಲಿಲ್ಲ. ನಮ್ಮ ಉತ್ತರಗಳಿಗೆ ತೃಪ್ತರಾಗಿ ಹೋಗಿದ್ದಾರೆ’ ಎಂದು ವಿವರಿಸಿದರು.

‘ಐಎಂಎ ಹಗರಣದ ಬಗ್ಗೆ ಯಾವುದೇ ಪ್ರಶ್ನೆ ಅಥವಾ ಮಾಹಿತಿಯನ್ನೂ ಅವರು ಕೇಳಲಿಲ್ಲ. ಮುಂದಿನ ದಿನಗಳಲ್ಲಿ ಕರೆದಾಗ ಕಚೇರಿಗೆ ಬಂದು ಸ್ಪಷ್ಟನೆ ನೀಡಬೇಕು ಎಂದು ತಿಳಿಸಿದ್ದಾರೆ. ಆದರೆ, ಯಾವುದೇ ನೋಟಿಸ್ ನೀಡಿಲ್ಲ. ಯಾರನ್ನೂ ವಶಕ್ಕೆ ಪಡೆದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ದೊಡ್ಡ ಮನೆ ನಿರ್ಮಾಣ ಮಾಡಿರುವುದು ರಾಜಕೀಯ ವಿರೋಧಿಗಳ ಕಣ್ಣು ಕುಕ್ಕಿತ್ತು.ದೂರು ನೀಡಿದವರು ಯಾರು ಎಂದು ಹೇಳಲು ಇ.ಡಿ ಅಧಿಕಾರಿಗಳು ನಿರಾಕರಿಸಿದರು. ಇ.ಡಿ ಅಧಿಕಾರಿಗಳು ಶೋಧ ನಡೆಸಿ ಯಾವುದೇ ತಪ್ಪುಗಳಿಲ್ಲ ಎಂದು ಮನವರಿಕೆ ಮಾಡಿಕೊಂಡು ಹೋಗಿರುವುದು ನಮಗೂ ನಿರಾಳ ಆಗಿದೆ’ ಎಂದರು.

ದಾಳಿ ಬಗ್ಗೆ ಪ್ರತಿಕ್ರಿಯಿಸಿದ ರೋಷನ್ ಬೇಗ್‌, ‘ಅಕ್ರಮ ಹಣಕಾಸು ವ್ಯವಹಾರ(ಮನಿ ಲಾಂಡ್ರಿಂಗ್) ನಡೆದಿದೆಯೇ ಎಂಬುದರ ಬಗ್ಗೆ ಇ.ಡಿ ಅಧಿಕಾರಿಗಳು ಶೋಧ ನಡೆಸಿದರು. ಎರಡು–ಮೂರು ಗಂಟೆಗಳಲ್ಲೇ ನಡೆಯಬೇಕಿದ್ದ ಶೋಧವನ್ನು ಅನಗತ್ಯವಾಗಿ ವಿಳಂಬ ಮಾಡಿದರು. ಕೇಳಿದ ಪ್ರಶ್ನೆಗಳನ್ನೇ ಪದೇ ಪದೇ ಕೇಳಿ ಕಾಲಹರಣ ಮಾಡಿದರು. 2004ರಿಂದ ಚುನಾವಣಾ ಆಯೋಗಕ್ಕೆ, ಪ್ರತಿವರ್ಷ ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಕೆ ಮಾಡಿದ್ದೇವೆ. ಆ ಎಲ್ಲಾ ದಾಖಲೆಗಳನ್ನು ಅವರಿಗೆ ಹಾಜರುಪಡಿಸಿದ್ದೇವೆ. ಯಾವುದೇ ತಪ್ಪಿಲ್ಲ ಎಂಬುದು ಅವರಿಗೆ ಮನವರಿಕೆ ಆಗಿದೆ’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.