ನವದೆಹಲಿ: ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ತಮ್ಮ ವಿರುದ್ಧ ತನಿಖಾ ಸಂಸ್ಥೆ ಆರಂಭಿಸಿರುವ ತನಿಖೆಯನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಲ್ಲಿಸಿರುವ ಅರ್ಜಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಬುಧವಾರ ವಿರೋಧಿಸಿದೆ.
ಈ ಸಂಬಂಧ ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿರುವ ಇ.ಡಿ ಅರ್ಜಿಯನ್ನು ವಜಾಗೊಳಿಸುವಂತೆ ಮನವಿ ಮಾಡಿದೆ. ‘ಶಿವಕುಮಾರ್ ಅವರ ಅರ್ಜಿ ಆತುರದಿಂದ ಕೂಡಿದೆ ಹಾಗೂ ಅಪಕ್ವವಾದುದು. ಇವರ ಯಾವುದೇ ಮೂಲಭೂತ ಹಕ್ಕುಗಳ ಉಲ್ಲಂಘನೆ ಆಗಿಲ್ಲ’ ಎಂದು ತಿಳಿಸಿದೆ.
‘ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ 2018ರಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ. ಈ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಇದೇ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು 2020ರಲ್ಲಿ ತನಿಖಾ ಪ್ರಕ್ರಿಯೆ ಆರಂಭಿಸಿದೆ. ಜಾರಿ ನಿರ್ದೇಶನಾಲಯವು ಇದೇ ಪ್ರಕರಣದಲ್ಲಿ ಮರು ತನಿಖೆ (ಇಸಿಐಆರ್) ನಡೆಸುತ್ತಿದೆ’ ಎಂದು ಆರೋಪಿಸಿ ಶಿವಕುಮಾರ್ ಅವರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
‘ಶಿವಕುಮಾರ್ ವಿರುದ್ಧ 2018 ಹಾಗೂ 2020ರಲ್ಲಿ ದಾಖಲಿಸಿರುವ ಪ್ರಕರಣಗಳು ವಿಭಿನ್ನ ಅಪರಾಧಗಳಿಗೆ ಸಂಬಂಧಿಸಿದವು. ಆದಾಯ ತೆರಿಗೆ ಇಲಾಖೆಯ ದೂರಿನ ಮೇರೆಗೆ ಮೊದಲ ಪ್ರಕರಣ (ಅಪಾರ್ಟ್‌ಮೆಂಟ್‌ನಲ್ಲಿ
₹8.59 ಕೋಟಿ ಪತ್ತೆ ಪ್ರಕರಣ) ದಾಖಲಿಸಲಾಗಿತ್ತು. ಶಿವಕುಮಾರ್ 2013ರ ಏಪ್ರಿಲ್ 1ರಿಂದ 2018ರ ಏಪ್ರಿಲ್ 30ರ ಅವಧಿಯಲ್ಲಿ ಅಕ್ರಮ ಆಸ್ತಿ ಸಂಪಾದಿಸಿರುವ ಆರೋಪದ ಮೇಲೆ 2020ರ ಮಾರ್ಚ್‌ನಲ್ಲಿ ಸಿಬಿಐ ಪ್ರಾಥಮಿಕ ವಿಚಾರಣೆ ಆರಂಭಿಸಿತ್ತು. ₹ 74.93 ಕೋಟಿ ಅಕ್ರಮ ಆಸ್ತಿ ಹೊಂದಿರುವ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿತ್ತು. ಈ ಪ್ರಕರಣದಲ್ಲಿ ಇ.ಡಿ. ಇಸಿಐಆರ್ ದಾಖಲಿಸಿದೆ. ಸಿಬಿಐ ಪ್ರಾಥಮಿಕ ತನಿಖೆ ನಡೆಸಿದ ಬಳಿಕವಷ್ಟೇ ಇದನ್ನು ದಾಖಲಿಸಲಾಗಿದೆ. ಇವೆರಡು ಪ್ರತ್ಯೇಕ ಪ್ರಕರಣಗಳು. ಇದನ್ನು ಮರು ತನಿಖೆ ಎಂಬಂತೆ ಬಿಂಬಿಸುವುದು ಸರಿಯಲ್ಲ’ ಎಂದೂ ತನಿಖಾ ಸಂಸ್ಥೆ ಹೇಳಿದೆ.
ಇ.ಡಿ.ಪರ ವಕೀಲರು, ‘ಶಿವಕುಮಾರ್ ವಿರುದ್ಧ ಸದ್ಯಕ್ಕೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ’ ಎಂದು ಸ್ಪಷ್ಟಪಡಿಸಿದರು. ವಿಚಾರಣೆಯನ್ನು ಡಿ. 2ಕ್ಕೆ ಮುಂದೂಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.