ADVERTISEMENT

ಇ.ಡಿ. ದಾಳಿ ಬಿಜೆಪಿಯ ಹಳೇ ಚಾಳಿ: ಸಚಿವ ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 7:13 IST
Last Updated 10 ಜುಲೈ 2024, 7:13 IST
ಮಧು ಬಂಗಾರಪ್ಪ
ಮಧು ಬಂಗಾರಪ್ಪ   

– ಪ್ರಜಾವಾಣಿ ಚಿತ್ರ

ಕೊಪ್ಪಳ: ಶಾಸಕರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ದಾಳಿ ನಡೆಸಿದ ಬಗ್ಗೆ ನನಗೆ ಮಾಹಿತಿಯಿಲ್ಲ. ಆದರೆ, ಈ‌ ರೀತಿಯ ದಾಳಿ ನಡೆಸುವುದು ಬಿಜೆಪಿಯವರ ಹಳೇ ಚಾಳಿ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ಹೇಳಿದರು‌.

ಕುಕನೂರು ತಾಲ್ಲೂಕಿನ ಕೋಮಲಾಪುರ ಗ್ರಾಮದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು , ತನಿಖಾ ಸಂಸ್ಥೆಗಳಿಂದ ಹೀಗೆ ದಾಳಿ ಮಾಡಿಸುವುದು ಬಿಜೆಪಿ ಕೆಲಸ ಎಂದು ಆರೋಪಿಸಿದರು.

ADVERTISEMENT

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅವ್ಯವಹಾರ ಪ್ರಕರಣ ಕುರಿತು ಕೇಳಲಾದ ಪ್ರಶ್ನೆಗೆ ಸಚಿವ ಸ್ಥಾನಕ್ಕೆ ಗೌರವ ನೀಡಿ ನಾಗೇಂದ್ರ ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಇದರ ಬಗ್ಗೆ ಹಾದಿಬೀದಿಯಲ್ಲಿ ಮಾತನಾಡಬಾರದು. ಈ ಬಗ್ಗೆ ತನಿಖೆ ನಡೆಯುತ್ತಿದೆ. ವರದಿ ಬಂದ ಮೇಲೆ ಗೊತ್ತಾಗಲಿದೆ ಎಂದರು.

ಶಿಕ್ಷಕರ ನೇಮಕಕ್ಕೂ ಆದ್ಯತೆ:

ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ‌ವಿಚಾರದಲ್ಲಿ ಕಲ್ಯಾಣ ‌ಕರ್ನಾಟಕ ಭಾಗಕ್ಕೆ ಆದ್ಯತೆ ನೀಡಲಾಗುತ್ತಿದೆ. ಶಾಲಾ ಕಾಲೇಜುಗಳ ಸ್ಥಾಪನೆಗೆ ಮಾತ್ರವಲ್ಲ, ಶಿಕ್ಷಕರ ನೇಮಕಕ್ಕೂ ಹಂತಹಂತವಾಗಿ ಆದ್ಯತೆ‌ ನೀಡಲಾಗುತ್ತಿದೆ ಎಂದರು.

ಈ ಸಲದ ಎಸ್ಎಸ್ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲಾಗಿದೆ. ಇದರಿಂದ ಫಲಿತಾಂಶ ಕುಸಿದಿದೆ. ಮಕ್ಕಳ ಕಲಿಕಾ ಗುಣಮಟ್ಟ ಸುಧಾರಿಸಲು ಕಠಿಣ ಕ್ರಮ ಅಗತ್ಯ. ಶಿಕ್ಷಕರ ಕೊರತೆ ಮೊದಲಿನಿಂದಲೂ ಇದೆ. ಶಿಕ್ಷಕರ ನೇಮಕಾತಿ ಹಾಗೂ ಇರುವ ಶಿಕ್ಷಕರಿಂದ ಇನ್ನಷ್ಟು ಕೆಲಸ ತೆಗೆದುಕೊಳ್ಳಲು ಕ್ರಮ ವಹಿಸಲಾಗುತ್ತಿದೆ. ಈನಿಟ್ಟಿನಲ್ಲಿ‌ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ನಾನು ಇಲಾಖೆಯ ಜವಾಬ್ದಾರಿ ವಹಿಸಿಕೊಂಡಾಗ 53 ಸಾವಿರ ಶಿಕ್ಷಕರ ‌ಕೊರತೆಯಿತ್ತು. ಹಿಂದಿನ ಬಿಜೆಪಿ ಸರ್ಕಾರ ಮೂರೂವರೆ ವರ್ಷಗಳಲ್ಲಿ 4,900 ಕಾಯಂ ಶಿಕ್ಷಕರನ್ನು ಮಾತ್ರ ನೇಮಿಸಿಕೊಂಡಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಹತ್ತು ತಿಂಗಳ ಒಳಗೆ ಈಗಾಗಲೇ 12,000 ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗಿದೆ. ಮತ್ತೆ ಹತ್ತು ಸಾವಿರ ಶಿಕ್ಷಕರ ನೇಮಕಕ್ಕೆ ಮುಖ್ಯಮಂತ್ರಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಸರ್ಕಾರದಿಂದಲೇ ನೀಟ್ ತರಬೇತಿ ನೀಡಲು ನಿರ್ಧರಿಸಲಾಗಿದೆ. ಮೊದಲ ಹಂತದಲ್ಲಿ 20 ಸಾವಿರ ವಿದ್ಯಾರ್ಥಿಗಳಿಗೆ ಇದರ ಸೌಲಭ್ಯ ಸಿಗಲಿದೆ ಎಂದರು.

ಶಾಲೆ ಉದ್ಘಾಟನೆ

ಕೋಮಲಾಪುರಲ್ಲಿ ನೂತನ ಸರ್ಕಾರಿ ಪ್ರೌಢಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಸಚಿವರು ಭಾಗಿಯಾದರು.

ಗ್ರಾಮಕ್ಕೆ ‌ಬಂದ ಸಚಿವರಿಗೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಮೆರವಣಿಗೆ ‌ಮೂಲಕ ಕರೆ ತಂದು ಹೂಮಳೆಗೆರೆದು ಸ್ವಾಗತಿಸಿದರು.

ಮುಖ್ಯಮಂತ್ರಿ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಸಹಾಯಕ ಆಯುಕ್ತ ಕ್ಯಾಪ್ಟನ್ ‌ಮಹೇಶ ಮಾಲಗಿತ್ತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕ ಶ್ರೀಶೈಲ ಬಿರಾದಾರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.