ADVERTISEMENT

ವಾಲ್ಮೀಕಿ ನಿಗಮ ಹಗರಣ | ಸಿಎಂ, ಡಿಸಿಎಂ ಹೆಸರು ಹೇಳುವಂತೆ ಇ.ಡಿ. ಒತ್ತಡ: ನಾಗೇಂದ್ರ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2024, 23:30 IST
Last Updated 16 ಅಕ್ಟೋಬರ್ 2024, 23:30 IST
ಬಿ.ನಾಗೇಂದ್ರ
ಬಿ.ನಾಗೇಂದ್ರ   

ಬೆಂಗಳೂರು: ‘ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್‌ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೆಸರು ಹೇಳುವಂತೆ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಒತ್ತಡ ಹೇರಿದ್ದರು’ ಎಂದು ಕಾಂಗ್ರೆಸ್‌ ಶಾಸಕ ಬಿ.ನಾಗೇಂದ್ರ ಆರೋಪಿಸಿದರು.

ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್‌ ಖಾತೆಯಿಂದ ₹94.73 ಕೋಟಿಯನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಇ.ಡಿ.ಯಿಂದ ಬಂಧನಕ್ಕೆ ಒಳಗಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ನಾಗೇಂದ್ರ ಅವರು ಬುಧವಾರ ಬೆಳಿಗ್ಗೆ ಬಿಡುಗಡೆಯಾದರು.

ಕಾರಾಗೃಹದಿಂದ ಹೊರಬಂದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಇ.ಡಿ. ಅಧಿಕಾರಿಗಳು ಯಾರದ್ದೋ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ವಿಚಾರಣೆ ವೇಳೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹೆಸರು ಹೇಳುವಂತೆ ಪದೇಪದೇ ನನಗೆ ಕಿರುಕುಳ ನೀಡುತ್ತಿದ್ದರು’ ಎಂದು ಆರೋಪಿಸಿದರು.

ADVERTISEMENT

‘ವಾಲ್ಮೀಕಿ ನಿಗಮದ ಹಗರಣದಲ್ಲಿ ನನ್ನಿಂದ ಯಾವುದೇ ತಪ್ಪು ನಡೆದಿಲ್ಲ. ಆದರೂ, ನನ್ನನ್ನು ಬಂಧಿಸಿದ್ದರು’ ಎಂದರು.

‘ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಇ.ಡಿ.ಯ ಅಸ್ತ್ರ ಬಳಸಿ ಸರ್ಕಾರವನ್ನು ಅಸ್ಥಿರಗೊಳಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಅಭಿವೃದ್ಧಿ ಕೆಲಸ ಬಿಟ್ಟು ಬಿಜೆಪಿ ಕೀಳುಮಟ್ಟದ ರಾಜಕಾರಣ ನಡೆಸುತ್ತಿದೆ’ ಎಂದು ಆಪಾದಿಸಿದರು.

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ಇದೇ ರೀತಿ ಕೀಳುಮಟ್ಟದ ರಾಜಕಾರಣ ನಡೆಸಿದರೆ ರಾಜ್ಯದಲ್ಲಿ ಆ ಪಕ್ಷದ ಶಾಸಕರ ಸಂಖ್ಯೆ 40ಕ್ಕೆ ಇಳಿಯಲಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿವೇಶನ ಹಂಚಿಕೆ ಪ್ರಕರಣದಲ್ಲೂ ಮುಖ್ಯಮಂತ್ರಿ ಅವರನ್ನು ಸಿಲುಕಿಸಲು ಷಡ್ಯಂತ್ರ ನಡೆಸಲಾಗುತ್ತಿದೆ. ಸಿದ್ದರಾಮಯ್ಯ ಅವರು ಯಾವುದೇ ತಪ್ಪು ಮಾಡಿಲ್ಲ. ಬಿಜೆಪಿ– ಜೆಡಿಎಸ್‌ ಮುಖಂಡರ ಹುನ್ನಾರ ಯಶಸ್ವಿಯಾಗುವುದಿಲ್ಲ’ ಎಂದು ನಾಗೇಂದ್ರ ಹೇಳಿದರು.

ಬಿ.ನಾಗೇಂದ್ರ ಅವರನ್ನು ಇ.ಡಿ. ಅಧಿಕಾರಿಗಳು ಜುಲೈ 12ರಂದು ಬಂಧಿಸಿ ವಿಚಾರಣೆ ನಡೆಸಿದ್ದರು. ನಂತರ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ನಾಗೇಂದ್ರ ಅವರಿಗೆ ಜನಪ್ರತಿನಿಧಿಗಳ ಪ್ರಕರಣಗಳ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಪರಪ್ಪನ ಅಗ್ರಹಾರ ಜೈಲು ಸಮೀಪ ಜಮಾಯಿಸಿದ್ದ ನಾಗೇಂದ್ರ ಅವರ ಬೆಂಬಲಿಗರು ಹೂಮಾಲೆ ಹಾಕಿ ಸ್ವಾಗತಿಸಿದರು. ಬಿಡುಗಡೆ ಬಳಿಕ ನಾಗೇಂದ್ರ ಅವರು ಸಚಿವ ಜಮೀರ್ ಅಹ್ಮದ್‌ ಖಾನ್‌ ಅವರ ಮನೆಗೆ ಭೇಟಿ ನೀಡಿದ್ದರು.

‘ಇ.ಡಿಯಿಂದ ಹುನ್ನಾರ’
‘ಇ.ಡಿ. ಅಧಿಕಾರಿಗಳು ಹುನ್ನಾರ ನಡೆಸಿ ಬಿ.ನಾಗೇಂದ್ರ ಅವರನ್ನು ಬಂಧಿಸಿದ್ದರು. ನ್ಯಾಯಾಲಯದ ಮೇಲೆ ವಿಶ್ವಾಸವಿದ್ದು ನಾಗೇಂದ್ರ ಅವರು ಆರೋಪದಿಂದ ಮುಕ್ತ ಆಗಲಿದ್ದಾರೆ’ ಎಂದು ಸಚಿವ ಜಮೀರ್‌ ಅಹ್ಮದ್‌ ಖಾನ್‌ ತಿಳಿಸಿದರು. ‘ಹುಲಿ ವಾಪಸ್ ಬಂದಿದೆ. ಈ ಹುಲಿಯ ನೇತೃತ್ವದಲ್ಲೇ ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯನ್ನು ಎದುರಿಸಲಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.