ಬೆಂಗಳೂರು: ಶಿಕ್ಷಣ ಸಂಸ್ಥೆಗಳಿಗೆ ಆಸ್ತಿ ತೆರಿಗೆಯಲ್ಲಿ ನೀಡುತ್ತಿದ್ದ ಶೇ 75ರಷ್ಟು ರಿಯಾಯಿತಿಯನ್ನು ಬಿಬಿಎಂಪಿ 2021–22ನೇ ಸಾಲಿನಿಂದ ಸಂಪೂರ್ಣ ಸ್ಥಗಿತಗೊಳಿಸಿದೆ. 2020ರ ಬಿಬಿಎಂಪಿ ಕಾಯ್ದೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಆಸ್ತಿ ತೆರಿಗೆಯಲ್ಲಿ ರಿಯಾಯಿತಿ ನೀಡಿಲ್ಲ. ಹಾಗಾಗಿ ಈ ಆರ್ಥಿಕ ವರ್ಷದಿಂದ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಆಸ್ತಿ ತೆರಿಗೆಯನ್ನು ಪೂರ್ಣಪ್ರಮಾಣದಲ್ಲಿ ವಸೂಲಿ ಮಾಡಲು ಬಿಬಿಎಂಪಿ ಸಿದ್ಧತೆ ನಡೆಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 615 ಶಿಕ್ಷಣ ಸಂಸ್ಥೆಗಳು ಅಧಿಕೃತ ಘೋಷಣೆ ಮಾಡಿಕೊಂಡು ಬಿಬಿಎಂಪಿಯಿಂದ ಆಸ್ತಿ ತೆರಿಗೆಯಲ್ಲಿ ವಿನಾಯಿತಿ ಪಡೆಯುತ್ತಿದ್ದವು. ಇನ್ನು ಕೆಲವು ಶಿಕ್ಷಣ ಸಂಸ್ಥೆಗಳು ಬಿಬಿಎಂಪಿಯ ಅನುಮೋದನೆ ಇಲ್ಲದಿದ್ದರೂ ಪೂರ್ತಿ ಆಸ್ತಿ ತೆರಿಗೆ ಪಾವತಿಸುತ್ತಿರಲಿಲ್ಲ. 1976ರ ಕೆಎಂಸಿ ಕಾಯ್ದೆಯಲ್ಲಿದ್ದ ಲೋಪವನ್ನು ಬಳಸಿಕೊಂಡು ಪೂರ್ತಿ ಆಸ್ತಿ ತೆರಿಗೆ ಪಾವತಿಸಲು ನಿರಾಕರಿಸುತ್ತಿದ್ದವು.
‘ಕಾನೂನು ಲೋಪಗಳನ್ನು ಸರಿಪಡಿಸಿದ್ದೇವೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಬಿಬಿಎಂಪಿಯ ಅನುಮೋದನೆ ಪಡೆದು ಆಸ್ತಿ ತೆರಿಗೆಯಲ್ಲಿ ವಿನಾಯಿತಿ ಪಡೆಯಲು 1976ರ ಕೆಎಂಸಿ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಬಿಬಿಎಂಪಿ ಕಾಯ್ದೆಯ ಸೆಕ್ಷನ್ 152 (ಐ) (ಬಿ) ಪ್ರಕಾರ ಸರ್ಕಾರಿ ಅಥವಾ ಸ್ಥಳೀಯ ಪ್ರಾಧಿಕಾರದ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಆಸ್ತಿ ತೆರಿಗೆಯಲ್ಲಿ ವಿನಾಯಿತಿ ನೀಡಬಹುದು. ಹಾಗಾಗಿ ಇತರ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಈ ಅವಕಾಶ ಇಲ್ಲ. ಅವುಗಳು ಪ್ರಸಕ್ತ ಸಾಲಿನಿಂದ ಪೂರ್ಣ ಪ್ರಮಾಣದಲ್ಲಿ ಆಸ್ತಿ ತೆರಿಗೆ ಪಾವತಿಸಬೇಕಾಗುತ್ತದೆ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಕಂದಾಯ) ಎಸ್.ಬಸವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.
‘ಸಂಪನ್ಮೂಲ ಸಂಗ್ರಹದ ಗುರಿ ಸಾಧನೆ ಬಗ್ಗೆ ಚರ್ಚಿಸಲು ಇತ್ತೀಚೆಗೆ ಎಲ್ಲ ವಲಯಗಳ ಜಂಟಿ ಆಯುಕ್ತರು, ಉಪ ಆಯುಕ್ತರು (ಕಂದಾಯ), ಕಂದಾಯ ಅಧಿಕಾರಿಗಳು ಹಾಗೂ ಸಹಾಯಕ ಕಂದಾಯ ಅಧಿಕಾರಿಗಳ ಸಭೆ ನಡೆಸಿದ್ದೇವೆ. ಈ ವೇಳೆ ಅವರ ವ್ಯಾಪ್ತಿಯಲ್ಲಿರುವ ಶಿಕ್ಷಣ ಸಂಸ್ಥೆಗಳಿಗೆ ತೆರಿಗೆ ಬೇಡಿಕೆಯ ನೋಟಿಸ್ ಜಾರಿ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ’ ಎಂದರು.
‘ಖಾಸಗಿ ಸಂಸ್ಥೆಗಳಿಂದ ಪೂರ್ಣ ಪ್ರಮಾಣದಲ್ಲಿ ಆಸ್ತಿ ತೆರಿಗೆ ವಸೂಲಿ ಮಾಡುವುದರಿಂದ ಎಷ್ಟು ಹೆಚ್ಚು ಸಂಪನ್ಮೂಲ ಸಂಗ್ರಹವಾಗಲಿದೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ಶಿಕ್ಷಣ ಸಂಸ್ಥೆಗಳಿರುವ ಕಟ್ಟಡ ಇರುವ ಸ್ಥಳದ ಮಾರ್ಗಸೂಚಿ ಮೌಲ್ಯದ ಪ್ರಕಾರ ಅದು ಎ, ಬಿ, ಸಿ ಅಥವಾ ಡಿ ವರ್ಗಗಳಲ್ಲಿ ಯಾವುದರ ವ್ಯಾಪ್ತಿಯಲ್ಲಿ ಬರುತ್ತದೆ ಎಂಬ ಆಧಾರದಲ್ಲಿ ಅದರ ಆಸ್ತಿ ತೆರಿಗೆ ಮೌಲ್ಯ ನಿರ್ಧಾರವಾಗುತ್ತದೆ’ ಎಂದರು.
‘ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾವಿರಾರು ಶಿಕ್ಷಣ ಸಂಸ್ಥೆಗಳಿವೆ. ಆದರೆ, 615 ಶಿಕ್ಷಣ ಸಂಸ್ಥೆಗಳು ಮಾತ್ರ ಬಿಬಿಎಂಪಿಯಿಂದ ಅನುಮೋದನೆ ಪಡೆದು ಆಸ್ತಿ ತೆರಿಗೆಯಲ್ಲಿ ರಿಯಾಯಿತಿ ಪಡೆಯುವ ಅರ್ಹತೆ ಹೊಂದಿದ್ದವು. ಇನ್ನು ಕೆಲವು ಟ್ರಸ್ಟ್‌ಗಳೂ ಶಿಕ್ಷಣ ಸಂಸ್ಥೆಗಳನ್ನು ನಡೆಸುವ ನೆಪದಲ್ಲಿ ಆಸ್ತಿ ತೆರಿಗೆಯನ್ನು ಪೂರ್ಣ ಪ್ರಮಾಣದಲ್ಲಿ ಪಾವತಿಸುತ್ತಿರಲಿಲ್ಲ. ಯಾವೆಲ್ಲ ಶಿಕ್ಷಣ ಸಂಸ್ಥೆಗಳು ಈ ಹಿಂದೆ ಬಿಬಿಎಂಪಿ ಅನುಮೋದನೆ ಪಡೆದು ತೆರಿಗೆಯಲ್ಲಿ ರಿಯಾಯಿತಿ ಪಡೆಯುತ್ತಿದ್ದವೋ ಅವುಗಳು ಈ ಆರ್ಥಿಕ ವರ್ಷದಿಂದ ಪೂರ್ಣ ಪ್ರಮಾಣದ ಆಸ್ತಿ ತೆರಿಗೆ ಪಾವತಿಸಿದರೆ ಸಾಕು’ ಎಂದರು.
‘ಶಿಕ್ಷಣ ಸಂಸ್ಥೆಗಳ ಹಿಂಬಾಕಿಯೂ ವಸೂಲಿ’
‘ಬಿಬಿಎಂಪಿಯಿಂದ ಅನುಮೋದನೆ ಪಡೆಯದೆಯೇ ಕೆಲವು ಶಿಕ್ಷಣ ಸಂಸ್ಥೆಗಳು ಶೇ 25ರಷ್ಟು ಆಸ್ತಿ ತೆರಿಗೆಯನ್ನು ಮಾತ್ರ ಪಾವತಿಸುತ್ತಿದ್ದವು. ಅಂತಹ ಸಂಸ್ಥೆಗಳು ಕಾರ್ಯಾರಂಭ ಮಾಡಿದ ವರ್ಷದಿಂದಲೂ ಆಸ್ತಿ ತೆರಿಗೆಯನ್ನು ಪೂರ್ಣ ಪ್ರಮಾಣದಲ್ಲಿ ಪಾವತಿಸಬೇಕಾಗುತ್ತದೆ. ಅವುಗಳ ಹಿಂಬಾಕಿಯನ್ನು ಸೇರಿಸಿ ಪೂರ್ಣ ಪ್ರಮಾಣದ ತೆರಿಗೆಯನ್ನು ವಸೂಲಿ ಮಾಡುತ್ತೇವೆ’ ಎಂದು ಎಸ್.ಬಸವರಾಜು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.