ADVERTISEMENT

ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುವ ಬಿಜೆಪಿಯವರಿಗೆ ಕೆಲಸವಿಲ್ಲ: ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2024, 10:56 IST
Last Updated 6 ಅಕ್ಟೋಬರ್ 2024, 10:56 IST
ಮಧು ಬಂಗಾರಪ್ಪ
ಮಧು ಬಂಗಾರಪ್ಪ   

ಮೈಸೂರು: ‘ಬಿಜೆಪಿ ನಾಯಕರಿಗೆ ಮಾಡಲು ಕೆಲಸವಿಲ್ಲ. ಆದ್ದರಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುತ್ತಿದ್ದಾರೆ’ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಟೀಕಿಸಿದರು.

ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎಫ್ಐಆರ್ ದಾಖಲಾದಾಕ್ಷಣ ರಾಜೀನಾಮೆ ನೀಡಬೇಕೆಂಬ ಕಾನೂನಿದೆಯೇ? ಬಿಜೆಪಿಯವರು ಸುಮ್ಮನೆ ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಅವರಲ್ಲಿ ಎಷ್ಟು ಜನರು ಜಾಮೀನಿನ ಮೇಲಿಲ್ಲ? ಆ ಪಕ್ಷದ ಎಷ್ಟೋ ಮಂದಿಗೆ ರಾಜಕಾರಣಿ ಆಗಲು ಯೋಗ್ಯತೆ ಇದೆಯೇ? ಅವರು ರಾಜಕಾರಣ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘12 ವರ್ಷದ ಹಳೆಯ ಕೇಸನ್ನು ಬಿಜೆಪಿಯವರು ಸ್ವಾರ್ಥಕ್ಕಾಗಿ ಈಗ ಎಳೆಯುತ್ತಿದ್ದಾರೆ. ಜನರು ಕಾಂಗ್ರೆಸ್ ಮೇಲೆ ವಿಶ್ವಾಸವಿಟ್ಟು ಅಧಿಕಾರ ನೀಡಿದ್ದಾರೆ. ಬಿಜೆಪಿಯವರು ಇದನ್ನು ಹಾಳು ಮಾಡುತ್ತಿದ್ದಾರೆ. ಅವರಿಗೆ ಪ್ರಜಾಪ್ರಭುತ್ವದ ಅರ್ಥವೇ ಗೊತ್ತಿಲ್ಲ’ ಎಂದು ಆರೋಪಿಸಿದರು.

ADVERTISEMENT

‘ಸಿದ್ದರಾಮಯ್ಯ ಅವರಿಗೆ ಇನ್ನೂ ಆಯ್ಕೆಗಳಿವೆ. ಕಾನೂನು ಹೋರಾಟ ಮಾಡುತ್ತಾರೆ. ನಿರಪರಾಧಿ ಎಂಬುದು ಸಾಬೀತಾದಾಗ ಬಿಜೆಪಿಯ ಎಲ್ಲರೂ ರಾಜೀನಾಮೆ ಕೊಡುತ್ತಾರೆಯೇ? ಬಿಜೆಪಿಯವರು ಇನ್ನು ನಾಲ್ಕು ವರ್ಷ ಇದನ್ನೇ ಮಾಡಿಕೊಂಡು ಕೂರಲಿ’ ಎಂದರು.

‘ಎಐಸಿಸಿ ಅಧ್ಯಕ್ಷ ಎಂ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಚಿವ ಸತೀಶ ಜಾರಕಿಹೊಳಿ ಭೇಟಿಯಾಗಿದ್ದಾರೆ. ಇದರಲ್ಲಿ ತಪ್ಪೇನಿಲ್ಲ. ನಾನೂ ಭೇಟಿಯಾಗುತ್ತಿರುತ್ತೇನೆ. ಅದಕ್ಕೆ ಬೇರೆ ಅರ್ಥ ಕೊಡುವುದು ಸರಿಯಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.