ಬೆಂಗಳೂರು: ‘ಆರ್‌ಟಿಇ ಶುಲ್ಕ ಸಂಪೂರ್ಣ ಮರುಪಾವತಿ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ನೀಡಿರುವ ಹೇಳಿಕೆ ಅಪ್ಪಟ ಸುಳ್ಳು’ ಎಂದು ರಾಜ್ಯ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಪ್ರತಿಕ್ರಿಯಿಸಿದ್ದಾರೆ.
‘ಈ ವಿಷಯದಲ್ಲಿ ಸಚಿವರು ಅಧಿಕಾರಿಗಳಿಂದ ಸರಿಯಾದ ಮಾಹಿತಿ ಪಡೆದುಕೊಂಡು ಹೇಳಿಕೆ ನೀಡಬೇಕು. ಜನರ ಕಣ್ಣಿಗೆ ಮಣ್ಣೆರಚುವ ಕೆಲಸವನ್ನು ಸಚಿವರು ಮಾಡಬಾರದು’ ಎಂದೂ ಅವರು ಹೇಳಿದ್ದಾರೆ.
‘ಸಚಿವರು ಹೇಳಿರುವ ಆರ್‌ಟಿಇ ಶುಲ್ಕ ಮರುಪಾವತಿ ₹ 550 ಕೋಟಿ ಬಿಡುಗಡೆ ಮಾಡಿರುವುದು ಹೋದ ವರ್ಷದ ಶುಲ್ಕ. 2018–19ರ ಲೆಕ್ಕಪತ್ರಕ್ಕೆ ಅನುಗುಣವಾಗಿ 2019– 20ನೇ ಸಾಲಿನ ಶುಲ್ಕಮರುಪಾವತಿಯ ಬಾಕಿ ಸಾಲವನ್ನು ಈ ವರ್ಷ ಕೊಟ್ಟಿದ್ದಾರೆ. 2019–20ರ ಅಡಿಟ್ ಪ್ರಕಾರ 2020– 2021ನೇ ಸಾಲಿಗೆ ಸೆಪ್ಟೆಂಬರ್ 30ರ ಒಳಗೆ ನಮಗೆ ಮೊದಲ ಕಂತು ಬಿಡುಗಡೆ ಆಗಬೇಕಿತ್ತು. ಆದರೆ ನಯಾಪೈಸೆ ಬಿಡುಗಡೆ ಆಗಿಲ್ಲ. ಜನವರಿಗೆ ಎರಡನೇ ಕಂತು ಬಿಡುಗಡೆ ಆಗಬೇಕು. ಅದೂ ನಯಾಪೈಸೆ ಬಂದಿಲ್ಲ’ ಎಂದಿದ್ದಾರೆ.
‘ಈ ವರ್ಷದ ಬಜೆಟ್‌ನಲ್ಲಿ ಹೋದ ವರ್ಷದ ಆರ್‌ಟಿಇ ಶುಲ್ಕ ಮರುಪಾವತಿಯ ಸಾಲವನ್ನು ತೀರಿಸಿದ್ದಾರೆಯೇ ಹೊರತು ಈ ವರ್ಷದ ಒಂದು ನಯಾ ಪೈಸೆ ಕೂಡಾ ನೀಡಿಲ್ಲ. ಸಾರ್ವಜನಿಕರಿಗೆ ಈ ರೀತಿ ಕಣ್ಣಿಗೆ ಮಣ್ಣೆರಚುವ ಕೆಲಸ ಆಗಬರದು. ಹೀಗಾಗಿ ಇಲಾಖೆಯಲ್ಲಿ ಏನು ಆಗುತ್ತಿದೆ ಎಂದು ಅರ್ಥ ಮಾಡಿಕೊಂಡು ಹೇಳಿಕೆಗಳನ್ನು ಕೊಡಿ’ ಎಂದೂ ಶಿಕ್ಷಣ ಸಚಿವರಲ್ಲಿ ಶಶಿಕುಮಾರ್ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.