ಬೆಂಗಳೂರು: ಅನಧಿಕೃತ ಶಾಲೆಗಳ ಹಾವಳಿಗೆ ಸಂಪೂರ್ಣ ಕಡಿವಾಣ ಹಾಕಲು ಸರ್ಕಾರ ದಿನಕ್ಕೆ ₹10 ಸಾವಿರ ದಂಡ ವಿಧಿಸುವಂತಹ ಕಠಿಣ ನಿಯಮಗಳನ್ನು ರೂಪಿಸಬೇಕು ಎಂದು ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿ, ಬೋಧಕರು ಮತ್ತು ಬೋಧಕತರ ಸಿಬ್ಬಂದಿ ಸಮನ್ವಯ ಸಮಿತಿ ಆಗ್ರಹಿಸಿದೆ.
ಸರ್ಕಾರ ಅನಧಿಕೃತ ಪೂರ್ವ ಪ್ರಾಥಮಿಕ ಶಾಲೆಗಳ ಬಗ್ಗೆ ಅನುಸರಿಸುತ್ತಿರುವ ಮೃದು ಧೋರಣೆ ಬಿಡಬೇಕು. ಅಂತಹ ಶಾಲೆಗಳಿಗೆ ₹10 ಸಾವಿರ ದಂಡ ವಿಧಿಸಬೇಕು. ನಂತರವೂ ನಿಯಮ ಪಾಲಿಸದಿದ್ದರೆ ದಿನಕ್ಕೆ ₹10 ಸಾವಿರ ಹಾಕಬೇಕು. ಪೂರ್ವ ಪ್ರಾಥಮಿಕ, ಪ್ರಾಥಮಿಕ ಸೇರಿದಂತೆ ಯಾವುದೇ ಹಂತದ ಶಾಲೆ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದರೂ ಕ್ರಮ ಕೈಗೊಳ್ಳದ ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸಮಿತಿಯ ಸಂಚಾಲಕ ಡಿ. ಶಶಿಕುಮಾರ್ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಕುಸಿದಿರುವ ಶಿಕ್ಷಣದ ಗುಣಮಟ್ಟ ಹೆಚ್ಚಳಕ್ಕೆ ಶಿಕ್ಷಣ ಇಲಾಖೆ ಪರಿಣಾಮಕಾರಿ ರೂಪುರೇಷೆ ಸಿದ್ಧಪಡಿಸಬೇಕು. ಸರ್ಕಾರಿ ಶಾಲೆಗಳ ಶಿಕ್ಷಣದ ಗುಣಮಟ್ಟ ಹೆಚ್ಚಿಸದೇ ದಿನಕ್ಕೊಂದು ನಿಯಮ ಮಾಡುತ್ತಾ ಖಾಸಗಿ ಶಾಲೆಗಳಿಗೆ ಕಿರುಕುಳ ನೀಡುತ್ತಾ ಲಾಭ ಮಾಡಿಕೊಳ್ಳುತ್ತಿದ್ದಾರೆ. 5, 8ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ನಡೆಸದೇ, ಆಯಾ ಶಾಲೆಗಳ ಮಟ್ಟದಲ್ಲೇ ಮೌಲ್ಯಾಂಕನ ನಡೆಸಿ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಉತ್ತೇಜನ ನೀಡಬೇಕು. ಗುಣಮಟ್ಟದ ಪಠ್ಯಪುಸ್ತಕ ರೂಪಿಸಬೇಕು. ಶಾಲೆ ತೊರೆಯುವ ಮಕ್ಕಳನ್ನು ಗುರುತಿಸಿ, ಬಾಲ್ಯ ವಿವಾಹ ತಡೆಯಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.