ADVERTISEMENT

ವರ್ಷಕ್ಕೆ ಎರಡು ಬಾರಿ ಗ್ರಾಮಸಭೆ ನಡೆಸಿ: ಮಕ್ಕಳ ಮನವಿ

ರಾಜ್ಯಮಟ್ಟದ ಸಮಾಲೋಚನೆ ಸಭೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2024, 16:06 IST
Last Updated 18 ಸೆಪ್ಟೆಂಬರ್ 2024, 16:06 IST
<div class="paragraphs"><p>ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಉಪನಿರ್ದೇಶಕಿ ನಾಗವೇಣಿ ಅವರು (ಎಡದಿಂದ ಐದನೆಯವರು) ‘ಮಕ್ಕಳ ಹಕ್ಕುಗಳ ಗ್ರಾಮಸಭೆ’ ಯೋಜನೆಯ ಸಾಧ್ಯತೆಗಳು ಮತ್ತು ಸಾಧನೆಗಳನ್ನು ಪರಿಚಯಿಸುವ ಪುಸ್ತಕಗಳನ್ನು ಬಿಡುಗಡೆ ಮಾಡಿದರು. </p></div>

ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಉಪನಿರ್ದೇಶಕಿ ನಾಗವೇಣಿ ಅವರು (ಎಡದಿಂದ ಐದನೆಯವರು) ‘ಮಕ್ಕಳ ಹಕ್ಕುಗಳ ಗ್ರಾಮಸಭೆ’ ಯೋಜನೆಯ ಸಾಧ್ಯತೆಗಳು ಮತ್ತು ಸಾಧನೆಗಳನ್ನು ಪರಿಚಯಿಸುವ ಪುಸ್ತಕಗಳನ್ನು ಬಿಡುಗಡೆ ಮಾಡಿದರು.

   

ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಮಕ್ಕಳ ಹಕ್ಕುಗಳ ಗ್ರಾಮಸಭೆಯಿಂದ ನಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಮುಂದೆ ಹೇಳಿಕೊಳ್ಳಲು ಸಾಧ್ಯವಾಗುತ್ತಿದೆ. ಈ ಸಭೆಯು ವರ್ಷಕ್ಕೆ ಎರಡರಿಂದ ಮೂರು ಬಾರಿಯಾದರೂ ನಡೆಯಬೇಕು...’

ADVERTISEMENT

–ಹೀಗೆ ಮನವಿ ಮಾಡಿಕೊಂಡಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಪೆರುವಾಜೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಆತ್ಮೀಯ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತಾಲಯ, ಎಡುಕೊ ಮತ್ತು ಚೈಲ್ಡ್‌ ರೈಟ್ಸ್‌ ಟ್ರಸ್ಟ್‌ ಜಂಟಿಯಾಗಿ ನಗರದಲ್ಲಿ ಬುಧವಾರ ಹಮ್ಮಿಕೊಂಡ ‘ಮಕ್ಕಳ ಹಕ್ಕುಗಳ ಗ್ರಾಮಸಭೆಯ ಪರಿಣಾಮಕಾರಿ ಆಯೋಜನೆ ಮತ್ತು ಜಾರಿ’ ಕುರಿತ ರಾಜ್ಯ ಮಟ್ಟದ ಸಮಾಲೋಚನೆ ಸಭೆಯಲ್ಲಿ ಮಕ್ಕಳು ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆಯಲ್ಲಿ ಇಲಾಖೆ ಅಧಿಕಾರಿಗಳು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು, ಶಿಕ್ಷಕರು, ವಕೀಲರು, ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು, ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.  

‘ವರ್ಷಕ್ಕೆ ಒಮ್ಮೆ ನಡೆಯುತ್ತಿರುವ ಮಕ್ಕಳ ಹಕ್ಕುಗಳ ಗ್ರಾಮಸಭೆಯು ನಮ್ಮ ಸಮಸ್ಯೆಗಳಿಗೆ ವೇದಿಕೆ ಕಲ್ಪಿಸುತ್ತಿದೆ. ಈ ಸಂದರ್ಭದಲ್ಲಿ ನಮ್ಮ ಸಹಪಾಠಿಗಳು ಬಾಲಕಾರ್ಮಿಕ ಪದ್ಧತಿಗೆ, ಬಾಲ್ಯವಿವಾಹಕ್ಕೆ ಒಳಗಾಗಿದ್ದನ್ನೂ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಇದರಿಂದ ಅವರು ಶಾಲೆಗೆ ಮತ್ತೆ ಮರಳಲು ಸಾಧ್ಯವಾಗಿದೆ. ಶಾಲಾ ಕಾಂಪೌಂಡು, ಶೌಚಾಲಯ ಸೇರಿ ವಿವಿಧ ಮೂಲಸೌಕರ್ಯದ ಬಗ್ಗೆಯೂ ಪ್ರಸ್ತಾಪಿಸಿದ್ದೇವೆ. ಈ ಸಭೆಯು ವರ್ಷಕ್ಕೆ ಎರಡು ಅಥವಾ ಮೂರು ಬಾರಿ ನಡೆದರೆ ಅನುಕೂಲ ಆಗಲಿದೆ’ ಎಂದು ವಿವಿಧ ಶಾಲೆಗಳ ಮಕ್ಕಳು ಅಭಿಪ್ರಾಯ ವ್ಯಕ್ತಪಡಿಸಿದರು. 

‘ಗ್ರಾಮ ಸಭೆಗಳಲ್ಲಿ ಶಾಲೆಗೆ ಅಗತ್ಯವಿರುವ ಮೂಲಸೌಕರ್ಯದ ಬಗ್ಗೆ ಚರ್ಚಿಸುವ ಬದಲು, ಮಕ್ಕಳ ಸಮಸ್ಯೆ ಹಾಗೂ ಅವರ ಅಹವಾಲುಗಳಿಗೆ ವೇದಿಕೆ ಕಲ್ಪಿಸಬೇಕು. ಮೂಲಸೌಕರ್ಯ ಒದಗಿಸುವುದು ಇಲಾಖೆಗಳ ಹೊಣೆಯಾಗಿದೆ. ಹಾಗಾಗಿ, ಈ ಬಗ್ಗೆ ಒತ್ತಾಯಿಸಲು ನವೆಂಬರ್‌ವರೆಗೆ ಕಾಯಬೇಕಾಗಿಲ್ಲ’ ಎಂಬ ಅಭಿಪ್ರಾಯವನ್ನು ಸರ್ಕಾರೇತರ ಸಂಸ್ಥೆಗಳ ಪ್ರಮುಖರು ತಿಳಿಸಿದರು. 

ಮಕ್ಕಳಿಗೆ ನ್ಯಾಯ ಒದಗಿಸಬೇಕು: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್, ‘ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು ಸೇರಿ ಸಂಬಂಧಪಟ್ಟವರು ಮಕ್ಕಳ ಹಕ್ಕುಗಳ ಗ್ರಾಮಸಭೆಯಲ್ಲಿ ಪರಿಣಾಮಕಾರಿಯಾಗಿ ತಮ್ಮನ್ನು ತೊಡಗಿಸಿಕೊಂಡು, ಮಕ್ಕಳಿಗೆ ನ್ಯಾಯ ಒದಗಿಸಬೇಕು. ಶಾಲೆ ಬಿಡುತ್ತಿರುವುದು, ವಲಸೆ ಸೇರಿ ವಿವಿಧ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚೆಗಳು ನಡೆಯಬೇಕು’ ಎಂದರು. 

ವಕೀಲ ಅನಿಲ್, ‘ರಸ್ತೆ ಸೇರಿ ವಿವಿಧ ಮೂಲಭೂತ ಸೌಕರ್ಯಗಳ ಬಗ್ಗೆ ಶಾಲೆಯ ಮುಖ್ಯ ಶಿಕ್ಷಕರು ಇಲಾಖೆಗಳ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು. ಇದನ್ನು ಮಕ್ಕಳ ಬಳಿ ಹೇಳಿಸುವುದು ಸರಿಯಲ್ಲ. ಈಗಲೂ ಬೆಂಗಳೂರಿನಲ್ಲಿಯೇ ವಿವಿಧ ಗ್ಯಾರೇಜ್, ಬಾರ್‌ಗಳಲ್ಲಿ ಮಕ್ಕಳು ಕೆಲಸ ಮಾಡುತ್ತಿದ್ದಾರೆ. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಈ ಬಗ್ಗೆ ದೂರು ನೀಡಿದರೂ ಯಾವುದೇ ಕ್ರಮವಾಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ದಕ್ಷಿಣ ಕನ್ನಡ, ಬಳ್ಳಾರಿ, ಚಿಕ್ಕಬಳ್ಳಾಪುರ ಹಾಗೂ ಗದಗ ಜಿಲ್ಲೆಯ ಆಯ್ದ 11 ತಾಲ್ಲೂಕಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. 

ಮಕ್ಕಳ ಹಕ್ಕುಗಳ ಗ್ರಾಮಸಭೆಯು ಮಕ್ಕಳ ನೋವು ದುಃಖ ಸಮಸ್ಯೆಗಳನ್ನು ಅರಿಯಲು ಸಹಕಾರಿಯಾಗಿದೆ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸಿ ಮಕ್ಕಳಿಗೆ ಉತ್ತಮ ವಾತಾವರಣ ನಿರ್ಮಿಸಿಕೊಡಬೇಕಿದೆ.
–ವಾಸುದೇವ ಶರ್ಮಾ ಎನ್‌.ವಿ., ಚೈಲ್ಡ್‌ ರೈಟ್ಸ್‌ ಟ್ರಸ್ಟ್ ಕಾರ್ಯಕಾರಿ ನಿರ್ದೇಶಕ

ಸಭೆಯ ಪ್ರಮುಖ ಶಿಫಾರಸುಗಳು

  • ಮಕ್ಕಳ ಹಕ್ಕುಗಳ ಗ್ರಾಮಸಭೆಯು ವರ್ಷಕ್ಕೆ ಎರಡು ಸಲ ನಡೆಯಬೇಕು

  • ಗ್ರಾಮೀಣ ಮಕ್ಕಳ ದಿನ ಆಚರಿಸಬೇಕು

  • ಶಾಲಾ ಪಠ್ಯಕ್ಕೆ ಮಕ್ಕಳ ಹಕ್ಕುಗಳ ಗ್ರಾಮಸಭೆ ವಿಷಯ ಸೇರ್ಪಡೆ ಮಾಡಬೇಕು

  • ಮಕ್ಕಳ ಬಗೆಗಿನ ದತ್ತಾಂಶವನ್ನು ‘ಪಂಚತಂತ್ರ’ ತಂತ್ರಾಂಶದಲ್ಲಿ ಅಪ್ಡೇಟ್ ಮಾಡಬೇಕು

  • ಮಕ್ಕಳ ಹಕ್ಕುಗಳ ಗ್ರಾಮಸಭೆಯ ಬಗ್ಗೆ ನಿಗಾ ವ್ಯವಸ್ಥೆ ರೂಪಿಸಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.