ಪರಶುರಾಂಪುರ (ಚಿತ್ರದುರ್ಗ): ವೇದಾ ವತಿ ನದಿ ನೀರನ್ನು ವಿವಿಧ ಕೆರೆಗಳಿಗೆ ಹರಿಸುವ ಬೆಳಗೆರೆ ನಾರಾಯಣಪುರ ಬಲದಂಡೆ ಕಾಲುವೆಯಲ್ಲಿ ತುಂಬಿ ಕೊಂಡಿರುವ ಹೂಳು ಮತ್ತು ಕಸ–ಕಡ್ಡಿಯನ್ನು ಅಚ್ಚುಕಟ್ಟು ಭಾಗದ ರೈತರೇ ಸ್ವಯಂ ಪ್ರೇರಣೆಯಿಂದ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದಾರೆ.
ವಾಣಿವಿಲಾಸ (ವಿ.ವಿ) ಸಾಗರ ಜಲಾಶಯದಲ್ಲಿ ಸಂಗ್ರಹವಾದ ನೀರನ್ನು ವೇದಾವತಿ ನದಿಗೆ ಬಿಟ್ಟಾಗ ಹಿರಿಯೂರು ತಾಲ್ಲೂಕಿನ ಸಿಡ್ಲಯ್ಯನ ಕೋಟೆ ಬಳಿಯಿಂದ ಸಮೀಪದ ತಿಮ್ಮಣ್ಣ ನಾಯಕನಕೋಟೆ, ಗೋಸಿಕೆರೆ, ಚೌಳೂರು, ದೊಡ್ಡಬೀರನಹಳ್ಳಿ, ಹೊನ್ನಯ್ಯನರೊಪ್ಪ, ಓಬಳಾಪುರ, ಕೊನಿಗರಹಳ್ಳಿ ಮತ್ತಿತರ ಗ್ರಾಮಗಳ ರೈತರಿಗೆ ಅನುಕೂಲ ಕಲ್ಪಿಸಲು ಈ ಕಾಲುವೆ ತೋಡಲಾಗಿದೆ.
ಆದರೆ, ಕೆಲವು ವರ್ಷಗಳಿಂದ ನೈಸರ್ಗಿಕವಾದ ಈ ಕಾಲುವೆಯು ಸಂಪೂರ್ಣ ಹಾಳಾಗಿದ್ದು, ಗ್ರಾಮಸ್ಥರೇ ಸ್ವಚ್ಛಗೊಳಿಸುತ್ತಿದ್ದಾರೆ.
ಕಾಲುವೆ ಹಾಳಾಗಿರುವ ಕಾರಣ ಬೇಸಿಗೆ ವೇಳೆ ಕೆರೆಗಳನ್ನು ತುಂಬಿಸಲೂ ಆಗುತ್ತಿಲ್ಲ. ಅಂದಾಜು 45 ಕಿ.ಮೀ. ವ್ಯಾಪ್ತಿಯ ಈ ಕಾಲುವೆಯಲ್ಲಿ ಹೂಳು ತುಂಬಿದ್ದು, ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನ ಆಗಿರಲಿಲ್ಲ.
2022ರಲ್ಲಿ ಭಾರಿ ಮಳೆಯಾಗಿದ್ದ ರಿಂದ ಕೆರೆಗಳು ತುಂಬಿ ಈವರೆಗೆ ನೀರಿನ ಸಮಸ್ಯೆ ತಲೆದೊರಿರಲಿಲ್ಲ. ಪ್ರಸಕ್ತ ವರ್ಷ ಮಳೆಯ ಕೊರತೆ ಆಗಿದ್ದು, ಕೆರೆಗಳಲ್ಲಿ ನೀರು ಖಾಲಿಯಾಗಿದೆ. ಅಂತರ್ಜಲ ಮಟ್ಟ ಕುಸಿದಿದೆ. ರೈತರು ಅಡಿಕೆ, ತೆಂಗು, ದಾಳಿಂಬೆ, ಪಪ್ಪಾಯ ತೋಟ ಉಳಿಸಿಕೊಳ್ಳುವುದರ ಜೊತೆಗೆ ರಾಗಿ, ಶೇಂಗಾ, ಮೆಕ್ಕೆಜೋಳ ಬೆಳೆಯಲು ಹೆಣಗಾಡಬೇಕಾದ ಸ್ಥಿತಿ ಇದೆ. ಕೆಲವೇ ದಿನಗಳಲ್ಲಿ ನದಿಗೆ ನೀರು ಹರಿಸಲಿರುವ ಕಾರಣ ಗ್ರಾಮಸ್ಥರು ಕಾಲುವೆಯಲ್ಲಿ ಬೆಳೆದಿರುವ ಗಿಡ–ಗಂಟಿ, ತುಂಬಿಕೊಂಡಿರುವ ಹೂಳು, ಕಸ–ಕಡ್ಡಿ ತೆರವು ಕಾರ್ಯದಲ್ಲಿ ನಿರತರಾಗಿದ್ದಾರೆ.
ದೊಡ್ಡಬೀರನ ಹಳ್ಳಿಯಿಂದ ಜೆಸಿಬಿ ಯಂತ್ರ, ತಿಮ್ಮಣ್ಣ ನಾಯಕನಕೋಟೆ ಯಿಂದ ಹುಲ್ಲು ಕಟಾವು ಯಂತ್ರ,
ಹೊನ್ನಯ್ಯನರೊಪ್ಪ ಮತ್ತು ಓಬಳಾಪುರದಿಂದ ಇತರೆ ಸಾಧನ ಗಳ ವ್ಯವಸ್ಥೆ ಮಾಡಿಕೊಂಡು ಸಾಮೂಹಿಕ ವಾಗಿ ಸ್ವಚ್ಛತಾ ಕೆಲಸ ಕೈಗೊಂಡಿದ್ದೇವೆ ಎಂದು ರೈತರಾದ ದೇವರಾಜ, ಗುರುಸ್ವಾಮಿ, ಪಟೇಲ್, ರವಿ, ಪ್ರಮೋದ್, ತಿಪ್ಪೇಸ್ವಾಮಿ, ನರೇಂದ್ರ, ಉಮಾಮಹೇಶ್ವರಪ್ಪ ತಿಳಿಸಿದರು.
‘ರೈತರೆಲ್ಲಾ ಸೇರಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆಯನ್ನು ಸಂಪರ್ಕಿಸಿ ಕಾಲುವೆ ಅಭಿವೃದ್ಧಿಗಾಗಿ ಮನವಿ ಸಲ್ಲಿಸಿದ್ದೆವು. ಆದರೆ, ಅದಕ್ಕೆ ಅನುದಾನ ಇಲ್ಲ ಎಂದು ಅಧಿಕಾರಿಗಳು ಕೈಚೆಲ್ಲಿದರು. ಸುಮ್ಮನೆ ಕುಳಿತರೆ ಅಲ್ಪಸ್ವಲ್ಪ ನೀರೂ ದಕ್ಕುವುದಿಲ್ಲ ಎಂದು ಊರವರೇ ಹಣ ಸಂಗ್ರಹಿಸಿ ಯಂತ್ರಗಳನ್ನು ಬಾಡಿಗೆಗೆ ತಂದಿದ್ದೇವೆ. ನಿತ್ಯವೂ 40-50 ಜನ ಶ್ರಮದಾನ
ವನ್ನೂ ಮಾಡುತ್ತಿದ್ದೇವೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.