ಬೆಂಗಳೂರು: ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ವಾರದಲ್ಲಿ ಆರು ದಿನ ಬೇಯಿಸಿದ ಮೊಟ್ಟೆ ಪೂರೈಸಲು ಶಾಲಾ ಶಿಕ್ಷಣ ಇಲಾಖೆಯೊಂದಿಗೆ ‘ಅಜೀಂ ಪ್ರೇಮ್‌ಜೀ ಫೌಂಡೇಷನ್’ ಕೈಜೋಡಿಸಿದೆ.
ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆಗಾಗಿ ಒಂದರಿಂದ ಹತ್ತನೇ ತರಗತಿವರೆಗಿನ ಮಕ್ಕಳಿಗೆ ವಾರಕ್ಕೆ ಎರಡು ದಿನ ಮೊಟ್ಟೆ ವಿತರಣೆ ಮಾಡಲಾಗುತ್ತಿದೆ. ಕಳೆದ ಶೈಕ್ಷಣಿಕ ಸಾಲಿನಲ್ಲಿ 38.37 ಲಕ್ಷ ಮಕ್ಕಳು ಮೊಟ್ಟೆಗೆ ಬೇಡಿಕೆ ಸಲ್ಲಿಸಿದ್ದರು. ಉಳಿದ ಮಕ್ಕಳಿಗೆ ಶೇಂಗಾ ಚಿಕ್ಕಿ, ಬಾಳೆ ಹಣ್ಣು ನೀಡಲಾಗಿತ್ತು.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ರಜಾ ದಿನಗಳನ್ನು ಹೊರತುಪಡಿಸಿ ವಾರದ ಎಲ್ಲ ಶಾಲಾ ದಿನಗಳಲ್ಲೂ ಮೊಟ್ಟೆ ವಿತರಿಸಲು ಶಾಲಾ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈ ಯೋಜನೆಗೆ ಹಣಕಾಸಿನ ನೆರವು ನೀಡಲು ವಿಪ್ರೊ ಸಂಸ್ಥಾಪಕ ಅಜೀಂ ಪ್ರೇಮ್‌ಜಿ ಮುಂದೆ ಬಂದಿದ್ದಾರೆ. ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ನೆರವು ನೀಡುತ್ತಿರುವ ತಮ್ಮ ಅಜೀಂ ಪ್ರೇಮ್‌ಜೀ ಫೌಂಡೇಷನ್ ಮೂಲಕ ₹1,500 ಕೋಟಿ ದೇಣಿಗೆ ನೀಡುತ್ತಿದ್ದಾರೆ. ವಾರದಲ್ಲಿ ಎರಡು ದಿನಗಳ ಮೊಟ್ಟೆ ವೆಚ್ಚವನ್ನು ಸರ್ಕಾರ ಹಾಗೂ ನಾಲ್ಕು ದಿನಗಳ ವೆಚ್ಚವನ್ನು ಫೌಂಡೇಷನ್ ಭರಿಸಲಿವೆ.
ಪ್ರಸ್ತುತ ಶೈಕ್ಷಣಿಕ ವರ್ಷದ ಜೂನ್‌ನಿಂದ ಸುಮಾರು 42.57 ಲಕ್ಷ ಮಕ್ಕಳಿಗೆ ಮೊಟ್ಟೆ ನೀಡಲಾಗುತ್ತಿದೆ. ಪ್ರತಿ ಮಗುವಿಗೆ ವಾರಕ್ಕೆ ಎರಡು ಬಾರಿಯಂತೆ ವರ್ಷಕ್ಕೆ ಸರಾಸರಿ 100 ಮೊಟ್ಟೆಗಳು ಸಿಗುತ್ತಿವೆ. ಸರ್ಕಾರದ ನಿರ್ಧಾರ ಜಾರಿಯಾದ ನಂತರ ಪ್ರತಿ ಮಗುವಿಗೂ ವರ್ಷಕ್ಕೆ 300 ಮೊಟ್ಟೆಗಳು ದೊರಕಲಿವೆ.
ಒಂದು ಮೊಟ್ಟೆಗೆ ₹6 ನಿಗದಿ ಮಾಡಲಾಗಿದೆ. ಈ ಹಣವನ್ನು ಶಾಲಾ ಶಿಕ್ಷಣ ಇಲಾಖೆ ಆಯಾ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿಯ ಜಂಟಿ ಖಾತೆಗೆ ಹಾಕುತ್ತದೆ. ಅದರಲ್ಲಿ ಮೊಟ್ಟೆ ಬೇಯಿಸಲು ಇಂಧನ ವೆಚ್ಚ 30 ಪೈಸೆ, ಮೊಟ್ಟೆಯ ಗಟ್ಟಿಪದರ(ವೋಡು) ಸುಲಿದು ಕೊಡುವ ಬಿಸಿಯೂಟ ತಯಾರಕರು ಮತ್ತು ಸಹಾಯಕರಿಗೆ 30 ಪೈಸೆ, ಸಾಗಣೆ ವೆಚ್ಚ 20 ಪೈಸೆ ನೀಡಲಾಗುತ್ತಿದೆ. ಮೊಟ್ಟೆಗೆ ತಗುಲುವ ಒಟ್ಟು ವೆಚ್ಚದಲ್ಲಿ ಇನ್ನು ಮುಂದೆ ಮೂರನೇ ಎರಡು ಭಾಗವನ್ನು ಅಜೀಂ ಪ್ರೇಮ್‌ಜಿ ಫೌಂಡೇಷನ್ ಭರಿಸಲಿದೆ.
‘ಮೊಟ್ಟೆ ವಿತರಣೆಗೆ ನೆರವು ನೀಡುವ ಕುರಿತು ಸರ್ಕಾರದ ಜೊತೆ ಜುಲೈ 20ರಂದು ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಆಗಸ್ಟ್ 1ರಿಂದ ಯೋಜನೆ ಜಾರಿಯಾಗಲಿದ್ದು, ಈ ಒಪ್ಪಂದ ಮೂರು ವರ್ಷಗಳವರೆಗೆ ಜಾರಿಯಲ್ಲಿರುತ್ತದೆ’ ಎಂದು ಫೌಂಡೇಷನ್‌ನ ಪ್ರಮುಖರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.