ಬೆಂಗಳೂರು: ಈದ್ ಹಬ್ಬದ ಪ್ರಯುಕ್ತ ರಾಜ್ಯದ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಭಾಶಯ ಕೋರಿದ್ದಾರೆ.
ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಸಿದ್ದರಾಮಯ್ಯ, 'ಶ್ರದ್ಧಾ ಭಕ್ತಿಯ ಪ್ರತೀಕವಾದ ರಂಜಾನ್ ಹಬ್ಬವು ನಾಡಿನಲ್ಲಿ ಸುಖ, ಶಾಂತಿ, ಸೌಹಾರ್ದತೆಯು ನೆಲೆಗೊಳ್ಳಲು ಪ್ರೇರಣೆಯಾಗಲಿ ಎಂದು ಹಾರೈಸುತ್ತೇನೆ. ಸಮಸ್ತ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯಗಳು' ಎಂದು ಹಾರೈಸಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಪವಿತ್ರ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ. 'ತ್ಯಾಗ, ಪ್ರೀತಿ, ಸೌಹಾರ್ದತೆಯ ಸಂಕೇತವಾದ ಈ ಹಬ್ಬವು ಎಲ್ಲರಿಗೂ ಸುಖ, ಸಂತೋಷ ಕರುಣಿಸಲಿ' ಎಂದು ಹಾರೈಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಂಜಾನ್ ಹಬ್ಬದ ಶುಭಾಶಯ ತಿಳಿಸಿದ್ದಾರೆ. 'ಪವಿತ್ರ ತಿಂಗಳು ರಂಜಾನ್ ತಿಂಗಳ ಆಚರಿಸಲಾಗುತ್ತಿರುವ ಈ ಹಬ್ಬವು ಏಕತೆ, ಸೌಹಾರ್ದತೆ ಮತ್ತು ಸಹೋದರತ್ವನ್ನು ಸಾರುತ್ತದೆ. ಸಂತೋಷವನ್ನು ಹಂಚಿಕೊಳ್ಳುವ ಈ ಹಬ್ಬವು ಕ್ಷಮೆ ಹಾಗೂ ದಾನವನ್ನು ಪ್ರೇರೇಪಿಸುತ್ತದೆ. ಈ ಶುಭ ಸಂದರ್ಭದಲ್ಲಿ ದೇಶ ಪ್ರಗತಿಯ ಹಾದಿಯಲ್ಲಿ ಮುಂದುವರಿಯಲಿ' ಎಂದು ಅವರು ಹಾರೈಸಿದ್ದಾರೆ.
ದೇಶದಲ್ಲಿ ಇಂದು ಮುಸ್ಲಿಂ ಬಾಂಧವರು ಸಂಭ್ರಮದಿಂದ ಈದ್-ಉಲ್-ಫಿತ್ರ್ ಹಬ್ಬದ ಆಚರಣೆ ಮಾಡುತ್ತಿದ್ದಾರೆ. ಈ ವಿಶೇಷ ದಿನ ಪ್ರಾರ್ಥನೆ ಸಲ್ಲಿಸುವ ಮೂಲಕ ಪರಸ್ಪರ ಶುಭಾಶಯ ಕೋರುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.