ADVERTISEMENT

ಚುನಾವಣಾ ಬಾಂಡ್ ಮೂಲಕ ಸುಲಿಗೆ ಆರೋಪ: ನಿರ್ಮಲಾ ವಿರುದ್ಧದ FIRನಲ್ಲಿ ಏನಿದೆ?

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2024, 13:23 IST
Last Updated 28 ಸೆಪ್ಟೆಂಬರ್ 2024, 13:23 IST
<div class="paragraphs"><p>ನಿರ್ಮಲಾ ಸೀತಾರಾಮನ್‌ </p></div>

ನಿರ್ಮಲಾ ಸೀತಾರಾಮನ್‌

   

ಪಿಟಿಐ ಚಿತ್ರ

ಬೆಂಗಳೂರು: ಚುನಾವಣಾ ಬಾಂಡ್‌ಗಳ ಮೂಲಕ ಬಹುಕೋಟಿ ದೇಣಿಗೆ ಪಡೆಯಲು ಜಾರಿ ನಿರ್ದೇಶನಾಲಯ ದುರ್ಬಳಕೆ ಮಾಡಿಕೊಂಡ ಆರೋಪದಡಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಬಿಜೆಪಿಯ ರಾಷ್ಟ್ರೀಯ ಪದಾಧಿಕಾಇಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲು ತಿಲಕ್‌ ನಗರ ಪೊಲೀಸರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.

ADVERTISEMENT

'ಜನಾಧಿಕಾರ ಸಂಘರ್ಷ ಪರಿಷತ್‌' ಸಹ ಅಧ್ಯಕ್ಷ ಆದರ್ಶ್‌ ಆರ್‌.ಐಯ್ಯರ್‌ ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ, "ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ"ಯ ವಿಶೇಷ ನ್ಯಾಯಾಲಯದ ಮ್ಯಾಜಿಸ್ಟ್ರೇಟ್‌ ಕೆ.ಎನ್‌. ಶಿವಕುಮಾರ್‌ ಶುಕ್ರವಾರ (ಸೆ.27) ಎಫ್ಐಆರ್ ದಾಖಲಿಸಲು ನಿರ್ದೇಶಿಸಿದ್ದು, ವಿಚಾರಣೆಯನ್ನು ಅಕ್ಟೋಬರ್‌ 10ಕ್ಕೆ ಮುಂದೂಡಿದ್ದಾರೆ.

ಪ್ರಕರಣದ ಆರೋಪಿಗಳನ್ನಾಗಿ ನಿರ್ಮಲಾ ಸೀತಾರಾಮನ್‌, ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು, ಜೆ.ಪಿ.ನಡ್ಡಾ ಮತ್ತು ಬಿಜೆಪಿ ಪದಾಧಿಕಾರಿಗಳು, ರಾಜ್ಯ ಬಿಜೆಪಿ ಘಟಕದ ಈ ಹಿಂದಿನ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಮತ್ತು ಹಾಲಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಬಿಜೆಪಿ ರಾಜ್ಯ ಘಟಕದ ಪದಾಧಿಕಾರಿಗಳನ್ನು ದೂರಿನಲ್ಲಿ ಹೆಸರಿಸಲಾಗಿದೆ.

ದೂರಿನಲ್ಲಿ ಏನಿದೆ?

'ರಾಷ್ಟ್ರೀಯ, ಬಹುರಾಷ್ಟ್ರೀಯ ಮತ್ತು ಒಂದಕ್ಕಿಂತ ಹೆಚ್ಚು ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರು, ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಗಳನ್ನು ಚುನಾವಣಾ‌ ದೇಣಿಗೆಯ ಹೆಸರಿನಲ್ಲಿ; ಸಚಿವೆ ನಿರ್ಮಲಾ ಸೀತಾರಾಮನ್‌, ಇಡಿ ಅಧಿಕಾರಿಗಳು, ಜೆ.ಪಿ.ನಡ್ಡಾ, ನಳಿನ್‌ ಕುಮಾರ್ ಕಟೀಲ್, ವಿಜಯೇಂದ್ರ ಹಾಗೂ ಸಾಂವಿಧಾನಿಕ ಹುದ್ದೆಯಲ್ಲಿರುವ ಹಲವರು ಸುಲಿಗೆ ಮಾಡಿದ್ದಾರೆ. ಕಂಪನಿಗಳಿಂದ ಚುನಾವಣಾ ಬಾಂಡ್‌ ಖರೀದಿಸಿ ಸುಮಾರು ₹ 8 ಸಾವಿರ ಕೋಟಿಗೂ ಅಧಿಕ ಲಾಭ ಮಾಡಿಕೊಂಡಿದ್ದಾರೆ' ಎಂದು ದೂರಿನಲ್ಲಿ ಆರೋಪಿಸಲಾಗಿದೆ.

'ನಿರ್ಮಲಾ ಸೀತಾರಾಮನ್‌ ಅವರು ಇಡಿ ಅಧಿಕಾರಿಗಳ ಮುಖಾಂತರ ಹಲವು ಕಾರ್ಪೊರೇಟ್‌ ಕಂಪನಿಗಳ ಸಿಇಒ, ಎಂಡಿಗಳ ಮೇಲೆ ದಾಳಿ ನಡೆಸುವ ಬೆದರಿಕೆ ಹಾಕಿದ್ದಾರೆ. ನಳಿನ್‌ ಕುಮಾರ್‌ ಕಟೀಲ್‌ ಮತ್ತು ಬಿ.ವೈ.ವಿಜಯೇಂದ್ರ ಅವರೂ ಈ ಪಿತೂರಿಯ ಭಾಗವಾಗಿದ್ದಾರೆ. ಇವರೆಲ್ಲರ ನಡೆಯಿಂದ ವಿಚಲಿತಗೊಂಡ ಕಾರ್ಪೊರೇಟ್‌ ಕಂಪನಿಗಳು ಬಹುಕೋಟಿ ಚುನಾವಣಾ ಬಾಂಡ್‌ಗಳನ್ನು ಖರೀದಿಸಿ ರಾಷ್ಟ್ರೀಯ ಮತ್ತು ರಾಜ್ಯ ಬಿಜೆಪಿಗೆ ದೇಣಿಗೆಯಾಗಿ ನೀಡಿವೆ. ಬಿಜೆಪಿ‌ ಇವನ್ನೆಲ್ಲಾ ನಗದಾಗಿ ಪರಿವರ್ತನೆ ಮಾಡಿಸಿಕೊಂಡಿದೆ. ಈ ಮೂಲಕ ನಿರ್ಮಲಾ ಸೀತಾರಾಮನ್‌ ಇಡಿಯನ್ನು ದುರ್ಬಳಕೆ ಮಾಡಿಕೊಂಡು ಕೋಟ್ಯಂತರ ರೂಪಾಯಿ ಸುಲಿಗೆ ಮಾಡಿ ರಾಷ್ಟ್ರೀಯ ಮತ್ತು ರಾಜ್ಯ ಘಟಕದ ಬಿಜೆಪಿಯ ಬೊಕ್ಕಸ ತುಂಬಿಸಿದ್ದಾರೆ' ಎಂದು ದೂರಿನಲ್ಲಿ ವಿವರಿಸಲಾಗಿದೆ.

'ಈ ಸಂಬಂಧ 2024ರ ಮಾರ್ಚ್ 30ರಂದು ತಿಲಕ್‌ ನಗರ ಪೊಲೀಸ್ ಠಾಣಾಧಿಕಾರಿಗೆ, ತದನಂತರ 2024ರ ಏಪ್ರಿಲ್ 2ರಂದು ಬೆಂಗಳೂರು ದಕ್ಷಿಣ ಡಿಸಿಪಿಗೆ ದೂರು ನೀಡಲಾಗಿತ್ತು. ಆದರೆ, ಅವರು ಯಾವುದೇ ಕ್ರಮ ಕೈಗೊಳ್ಳದ ಕಾರಣ ಈ ಖಾಸಗಿ ದೂರು ಸಲ್ಲಿಸಲಾಗುತ್ತಿದ್ದು, ನಿರ್ಮಲಾ ಸೀತಾರಾಮನ್‌, ಜೆ‌.ಪಿ.ನಡ್ಡಾ, ನಳಿನ್‌ ಕುಮಾರ್‌ ಕಟೀಲ್‌, ವಿಜಯೇಂದ್ರ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ-1860ರ (ಐಪಿಸಿ) ಕಲಂ 384 (ಸುಲಿಗೆ), 120ಬಿ (ಕ್ರಿಮಿನಲ್‌ ಪಿತೂರಿ) ಜೊತೆಗೆ 34ರ ಅಡಿ ಪ್ರಕರಣ ದಾಖಲಿಸಲು ತಿಲಕ್‌ ನಗರ ಪೊಲೀಸರಿಗೆ ನಿರ್ದೇಶಿಸಬೇಕು' ಎಂದು ಕೋರಿದ್ದರು.

ಕಂಪನಿಗಳ ಮೇಲೆ ದಾಳಿ

'ಮೆಸರ್ಸ್‌ ಸ್ಟರ್ಲೈಟ್‌ ಮತ್ತು ವೇದಾಂತ ಕಂಪನಿಗಳ ಮುಖ್ಯಸ್ಥ ಅನಿಲ್‌ ಅಗರ್ ವಾಲ್‌ ಅವರ ಮೇಲೆ ಇಡಿ ಹಲವು ಬಾರಿ ದಾಳಿ ಮಾಡಿತ್ತು. ಇದರಿಂದ ಕಂಗೆಟ್ಟಿದ್ದ ಅಗರ್ ವಾಲ್‌ 2019ರ ಏಪ್ರಿಲ್‌ನಿಂದ 2022ರ ಆಗಸ್ಟ್‌ ಅವಧಿಯಲ್ಲಿ ಮತ್ತು 2023ರ ನವೆಂಬರ್‌ನಲ್ಲಿ ಒಟ್ಟು ₹ 230.15 ಕೋಟಿ ಮೌಲ್ಯದ ಚುನಾವಣಾ ಬಾಂಡ್‌ ಖರೀದಿಸಿದ್ದಾರೆ. ಅಂತೆಯೇ, ಮೆಸರ್ಸ್‌ ಅರಬಿಂದೊ ಫಾರ್ಮಾದ ಮೇಲೂ ದಾಳಿ ನಡೆಸಿದ್ದ ಇಡಿ, ದಾಖಲೆಗಳನ್ನು ಜಪ್ತಿ ಮಾಡಿತ್ತು. ಇದರಿಂದ ಬೆದರಿದ್ದ ಅರಬಿಂದೊ ಫಾರ್ಮಾ ಸಮೂಹ ಸಂಸ್ಥೆಗಳು 2023ರ ಜನವರಿ 5 ಮತ್ತು ನವೆಂಬರ್‌ 8, 2022ರ ಜುಲೈ 2 ಮತ್ತು ನವೆಂಬರ್ 15ರಂದು ಒಟ್ಟು ₹ 49.5 ಕೋಟಿ ಮೌಲ್ಯದ ಚುನಾವಣಾ ಬಾಂಡ್‌ ಖರೀದಿಸಿದೆ. ಇಡಿ ದಾಳಿಗೆ ಬೆದರಿದ್ದ ಅರಬಿಂದೊ ಫಾರ್ಮಾ ಖಾತರಿದಾರ ಆಗಲು (ಅಪ್ರೂವರ್) ಒಪ್ಪಿತ್ತು' ಎಂದು ದೂರಿನಲ್ಲಿ ವಿವರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.