ADVERTISEMENT

ಅನರ್ಹರೂ ನಾಮಪತ್ರ ಸಲ್ಲಿಸಬಹುದು: ಆಯೋಗ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2019, 5:50 IST
Last Updated 26 ಸೆಪ್ಟೆಂಬರ್ 2019, 5:50 IST
ಕರ್ನಾಟಕ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್ –ಪ್ರಜಾವಾಣಿ ಚಿತ್ರ/ಆನಂದ ಬಕ್ಷಿ
ಕರ್ನಾಟಕ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್ –ಪ್ರಜಾವಾಣಿ ಚಿತ್ರ/ಆನಂದ ಬಕ್ಷಿ   

ಬೆಂಗಳೂರು: ‘ವಿಧಾನಸಭೆ ಉಪಚುನಾವಣೆಯಲ್ಲಿ ಅನರ್ಹ ಶಾಸಕರು ಸ್ಪರ್ಧಿಸಬಹುದು. ನಾಮಪತ್ರ ಸಲ್ಲಿಸಲು ಯಾವುದೇ ಅಭ್ಯಂತರವಿಲ್ಲ’ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಇಲ್ಲಿ ಮಂಗಳವಾರ ಸ್ಪಷ್ಟಪಡಿಸಿದರು.

ಚುನಾವಣೆಗೆ ಯಾರು ಬೇಕಾದರೂ ಸ್ಪರ್ಧಿಸಬಹುದು. ನಾಮಪತ್ರಗಳನ್ನು ಅಂಗೀಕರಿಸುವುದು ಅಥವಾ ತಿರಸ್ಕರಿಸುವುದು ಆಯಾ ಕ್ಷೇತ್ರಗಳ ಚುನಾವಣೆ ಅಧಿಕಾರಿಗಳಿಗೆ ಬಿಟ್ಟ ವಿಚಾರ. ನಿರ್ಧಾರ ಕೈಗೊಳ್ಳುವ ಅಧಿಕಾರ ಚುನಾವಣೆ ಅಧಿಕಾರಿಗಳಿಗೆ ಇರುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಅನರ್ಹರು ಸ್ಪರ್ಧೆ ಮಾಡುವಂತಿಲ್ಲ ಎಂದು ಹೇಳಿಲ್ಲ. ಮಾಧ್ಯಮಗಳಲ್ಲಿ ತಪ್ಪಾಗಿ ಅರ್ಥೈಸಲಾಗಿದೆ. ನಾಮಪತ್ರ ಸಲ್ಲಿಸುವುದನ್ನು ತಡೆಯಲು ಯಾರಿಗೂ ಅಧಿಕಾರವಿಲ್ಲ. ಎಲ್ಲವೂ ನಿಯಮಾನುಸಾರ ನಡೆಯುತ್ತದೆ’ ಎಂದು ತಿಳಿಸಿದರು.

ADVERTISEMENT

ಅನರ್ಹ ಶಾಸಕರ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿದ್ದು, ಸ್ಪರ್ಧೆಗೆ ಅವಕಾಶ ನೀಡಬೇಕು ಎಂದು ಅನರ್ಹರು ಕೋರ್ಟ್‌ನಲ್ಲಿ ಮನವಿ ಮಾಡಿದ್ದರು. ವಿಚಾರಣೆ ಸಂದರ್ಭದಲ್ಲಿ ಹಾಜರಿದ್ದ ಚುನಾವಣಾ ಆಯೋಗದ ವಕೀಲರು, ‘ಅನರ್ಹ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸಬಹುದು’ ಎಂದು ಸ್ಪಷ್ಟನೆ ನೀಡಿದ್ದರು.

ಮುಖ್ಯ ಚುನಾವಣಾಧಿಕಾರಿಯ ಈ ಹೇಳಿಕೆ ಅನರ್ಹ ಶಾಸಕರಲ್ಲಿ ಆಶಾಭಾವನೆ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.