ADVERTISEMENT

ಮತದಾನದ ದಿನ ಅಂಗವಿಕಲರಿಗೆ ವಾಹನ ಸೇವೆ

ಆ್ಯಪ್‌ ಮೂಲಕ ಹೆಸರು ನೋಂದಾಯಿಸಬಹುದು

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2018, 20:20 IST
Last Updated 29 ಅಕ್ಟೋಬರ್ 2018, 20:20 IST
ವಾಹನ ವ್ಯವಸ್ಥೆ
ವಾಹನ ವ್ಯವಸ್ಥೆ   

ಬೆಂಗಳೂರು: ಅಂಗವಿಕಲರು ಇನ್ನು ಮುಂದೆ ನಿಶ್ಚಿಂತೆಯಿಂದ ಮತಗಟ್ಟೆಗೆ ಹೋಗಿ ಮತ ಚಲಾಯಿಸಿ ಬರಬಹುದು.

ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ದೇಶದಲ್ಲೇ ಮೊದಲ ಬಾರಿಗೆ ಅಂಗವಿಕಲರನ್ನು ಅವರ ಮನೆಯಿಂದ ಮತಗಟ್ಟೆಗೆ ಕರೆತರುವ ಮತ್ತು ವಾಪಸ್‌ ಬಿಡುವ ವಿನೂತನ ವ್ಯವಸ್ಥೆಯನ್ನು(ಡೋರ್‌ಸ್ಟೆಪ್‌ ಪಿಕ್ ಅಪ್‌/ ಡ್ರಾಪ್‌ ಫೆಸಿಲಿಟಿ) ಜಾರಿಗೆ ತಂದಿದೆ.

ನವೆಂಬರ್‌ 3ರಂದು ನಡೆಯುವ ಮೂರು ಲೋಕಸಭಾ ಮತ್ತು ಎರಡು ವಿಧಾನಸಭಾ ಉಪಚುನಾವಣೆಯಲ್ಲಿ ಹೊಸ ವ್ಯವಸ್ಥೆ ಕಾರ್ಯಾರಂಭ ಮಾಡಲಿದೆ.

ADVERTISEMENT

ಚುನಾವಣೆಗಳನ್ನು ಹೆಚ್ಚು ಜನಸ್ನೇಹಿ ಆಗಿಸುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಪ್ರತಿಯೊಬ್ಬ ಅರ್ಹ ಮತದಾರನೂ ಮತ ಚಲಾಯಿಸಬೇಕು. ಅಂಗವಿಕಲರು ಎಂಬ ಕಾರಣಕ್ಕೆ ಮತಗಟ್ಟೆಗೆ ಬರಲಾಗದೇ ಮತದಾನದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ತಿಳಿಸಿದ್ದಾರೆ.

ಇಂತಹದ್ದೊಂದು ವ್ಯವಸ್ಥೆ ದೇಶದಲ್ಲೇ ಪ್ರಥಮ.ವಾಹನಗಳ ಮೂಲಕ ಮನೆಯಿಂದಲೇ ಕರೆ ತರುವುದರ ಜೊತೆಗೆ ಮತದಾನದ ಬಳಿಕ ವಾಪಸ್ ಮನೆಗೆ ಬಿಡುವ ವ್ಯವಸ್ಥೆಯನ್ನೂ ಮಾಡಲಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಂಗವಿಕಲರಿಗಾಗಿ ಮತಗಟ್ಟೆಗಳಲ್ಲಿ ಗಾಲಿ ಕುರ್ಚಿಗಳ ವ್ಯವಸ್ಥೆ ಮಾಡಲಾಗಿತ್ತು ಎಂದು ಅವರು ಹೇಳಿದರು.

ವಾಹನ ಸೇವೆ ಬೇಕಾದವರು ಚುನಾವಣಾ ಆಯೋಗದ ‘ಚುನಾವಣಾ’ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಅದರಲ್ಲಿ ವಾಹನ ಸೇವೆಗಳು ಎಂಬ ವಿಭಾಗವಿದೆ. ನವೆಂಬರ್‌ 1ರ ಮಧ್ಯರಾತ್ರಿಯೊಳಗೆ ಸಂದೇಶವನ್ನು ಕಳುಹಿಸಿ ಹೆಸರು ನೋಂದಾಯಿಸಿಕೊಳ್ಳಬೇಕು. ಆ ಬಳಿಕ ಯಾರಾದರೂ ವಾಹನಕ್ಕಾಗಿ ಬೇಡಿಕೆ ಸಲ್ಲಿಸಿದರೆ ಚುನಾವಣಾಧಿಕಾರಿಯವರೇ ವ್ಯವಸ್ಥೆ ಮಾಡಬೇಕು ಎಂಬುದಾಗಿ ಮುಖ್ಯ ಚುನಾವಣಾಧಿಕಾರಿ ಸೂಚನೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.