ADVERTISEMENT

ಚುನಾವಣಾ ಫಲಿತಾಂಶ ಸಂಘಟನೆಯ ಮೇಲೆ ಪ್ರಭಾವ ಬೀರದು: ವಿಜಯೇಂದ್ರ

ಕಾರ್ಯಕರ್ತರಿಗೆ ವಿಜಯೇಂದ್ರ ಬಹಿರಂಗ ಪತ್ರ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2024, 10:31 IST
Last Updated 26 ನವೆಂಬರ್ 2024, 10:31 IST
ಬಿ.ವೈ.ವಿಜಯೇಂದ್ರ
ಬಿ.ವೈ.ವಿಜಯೇಂದ್ರ   

ಬೆಂಗಳೂರು: ರಾಜ್ಯದ ಉಪಚುನಾವಣೆಯ ಫಲಿತಾಂಶವು ಪಕ್ಷದ ಸಂಘಟನೆಯ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಇದನ್ನು ಸಂಪೂರ್ಣವಾಗಿ ಉಪೇಕ್ಷಿಸೋಣ ಎಂದು ಬಿಜೆಪಿ ರಾಜ್ಯ ಘಟಕದ ಆಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಪತ್ರ ಬರೆದಿರುವ ಅವರು, ‘ಉಪಚುನಾವಣೆಯ ಈ ಸೋಲನ್ನು ನಾವು ಸಕಾರಾತ್ಮಕವಾಗಿಯೇ ಸ್ವೀಕರಿಸೋಣ. ಈ ಫಲಿತಾಂಶ ಭವಿಷ್ಯದಲ್ಲಿ ಎದುರಾಗಲಿರುವ ಸವಾಲುಗಳನ್ನು ಎಚ್ಚರಿಸುವ ಸಂಕೇತವೂ ಆಗಿದೆ ಎಂದು ಭಾವಿಸೋಣ’ ಎಂದಿದ್ದಾರೆ.

‘ಪಕ್ಷದಲ್ಲಿ ಹಿರಿಯರ ಆಶೀರ್ವಾದ ಮತ್ತು ಪ್ರಮುಖರ ಮಾರ್ಗದರ್ಶನ ಪಡೆದು ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ರಿಯಾಶೀಲರಾಗಿ ಸಂಘಟನೆ ಬಲಗೊಳಿಸಬೇಕಾಗಿದೆ.  ಒಂದು ದಿನವೂ ವ್ಯರ್ಥ ಮಾಡದೇ ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರ ತರುವ ನಿಟ್ಟಿನಲ್ಲಿ ಸಂಕಲ್ಪ ಮಾಡಬೇಕಾಗಿದೆ. ಉಪಚುನಾವಣೆ ಫಲಿತಾಂಶಗಳು ಪಕ್ಷದ ಸಂಘಟನೆಯ ಸಾಮರ್ಥ್ಯ ಮತ್ತು ಪ್ರಭಾವವನ್ನು ಬಿಂಬಿಸುವ ಅಳತೆಗೋಲಾಗಿರುವುದಿಲ್ಲ. ಸ್ಥಳೀಯ ಸಮಸ್ಯೆಗಳು ಹಾಗೂ ಸರ್ಕಾರದ ಪ್ರಭಾವವನ್ನುಆಧರಿಸಿ ಚುನಾವಣೆ ಫಲಿತಾಂಶಗಳು ಹೊರಹೊಮ್ಮುತ್ತವೆ’ ಎಂದು ವಿವರಿಸಿದ್ದಾರೆ.

ADVERTISEMENT

‘ಬಿಜೆಪಿ ಸುಭದ್ರ ಕೋಟೆಯ ನಡುವೆ ಬಿರುಕು ಮೂಡಿಸಲು ಯತ್ನಿಸುವ ಶಕ್ತಿಗಳನ್ನು ಮೆಟ್ಟಿ ನಿಂತು ನಮ್ಮೆಲ್ಲರ ಒಗ್ಗಟ್ಟಿನ ಮುಷ್ಠಿ ದೇಶ ಕಟ್ಟುವ ಶಕ್ತಿಯಾಗಬೇಕಿದೆ. ಮುಂದೆಯೂ ಮಿತ್ರಪಕ್ಷ ಜೆಡಿಎಸ್‌ ಜತೆ ಸಹಕಾರದ ಹೆಜ್ಜೆಗಳನ್ನು ಇಡೋಣ. ಕಾಂಗ್ರೆಸ್‌ ಸರ್ಕಾರದ ಜನ ವಿರೋಧಿ ಧೋರಣೆ ಮತ್ತು ಭ್ರಷ್ಟ ಆಡಳಿತವನ್ನು ಕೊನೆಗಾಣಿಸುವುದಕ್ಕಾಗಿ ಎಂಬ ಶಪಥ ಮಾಡೋಣ’ ಎಂದು ವಿಜಯೇಂದ್ರ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.