ADVERTISEMENT

ಬಂಗಾರಪ್ಪ ನಾಮಸ್ಮರಣೆ, ಜಾತಿವಾರು ಲೆಕ್ಕಾಚಾರ!

ಬಿಜೆಪಿಗೆ ಶಾಸಕರ ಬಲ, ಜೆಡಿಎಸ್–ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿನ ಛಲ l ರಾಜ್ಯದ ಗಮನ ಸೆಳೆದಿರುವ ಉಪ ಚುನಾವಣೆ

ಚಂದ್ರಹಾಸ ಹಿರೇಮಳಲಿ
Published 29 ಅಕ್ಟೋಬರ್ 2018, 20:42 IST
Last Updated 29 ಅಕ್ಟೋಬರ್ 2018, 20:42 IST
ಮಧು ಬಂಗಾರಪ್ಪ
ಮಧು ಬಂಗಾರಪ್ಪ   

ಶಿವಮೊಗ್ಗ:66 ವರ್ಷಗಳ ಇತಿಹಾಸದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಎರಡನೇ ಉಪಚುನಾವಣೆ ಹಲವು ಕಾರಣಗಳಿಂದಾಗಿ ರಾಜ್ಯದ ಗಮನ ಸೆಳೆದಿದೆ.

ಕಣದಲ್ಲಿ ಮೂವರು ಮಾಜಿ ಮುಖ್ಯಮಂತ್ರಿಗಳ ಪುತ್ರರು ಇದ್ದರೂ ಎಸ್‌. ಬಂಗಾರಪ್ಪ ಅವರ ಪುತ್ರ ಮಧು ಬಂಗಾರಪ್ಪ, ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ರಾಘವೇಂದ್ರ ಅವರ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದೆ.

ಮಧು ಬಂಗಾರಪ್ಪ ಕಾಂಗ್ರೆಸ್–ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ. ರಾಘವೇಂದ್ರ ಬಿಜೆಪಿಯಿಂದ, ಮಾಜಿ ಮುಖ್ಯಮಂತ್ರಿ ಜೆ.ಎಚ್‌. ಪಟೇಲರ ಪುತ್ರ ಮಹಿಮ ಪಟೇಲ್ ಜೆಡಿಯುನಿಂದ ಕಣಕ್ಕೆ ಇಳಿದಿದ್ದಾರೆ. ಭದ್ರಾವತಿಯ ಶಶಿಕುಮಾರ್ ಗೌಡ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.

ADVERTISEMENT

ಯಡಿಯೂರಪ್ಪ ಅವರು ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ನಂತರ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತೆರವಾದ ಸ್ಥಾನಕ್ಕೆ ಈಗ ಉಪಚುನಾವಣೆ ನಡೆಯುತ್ತಿದೆ. 2005ರಲ್ಲಿ ಎಸ್‌. ಬಂಗಾರಪ್ಪ ಅವರ ರಾಜೀನಾಮೆಯಿಂದ ಮೊದಲ ಉಪಚುನಾವಣೆ ನಡೆದಿತ್ತು.

ಇದುವರೆಗೆ ನಡೆದ 17 ಚುನಾವಣೆಗಳಲ್ಲಿ 10 ಬಾರಿ ಕಾಂಗ್ರೆಸ್, 4 ಬಾರಿ ಬಿಜೆಪಿ ಗೆದ್ದಿವೆ. ತಲಾ ಒಂದು ಬಾರಿ ಜನತಾ ಪಕ್ಷ, ಕರ್ನಾಟಕ ಕಾಂಗ್ರೆಸ್ ಪಕ್ಷ, ಸಮಾಜವಾದಿ ಪಕ್ಷದ ಅಭ್ಯರ್ಥಿಗಳು ಇಲ್ಲಿಂದ ಲೋಕಸಭೆ ಪ್ರವೇಶಿಸಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ 1999ರ ನಂತರ ಗೆಲುವಿನ ಮೆಟ್ಟಿಲು ಹತ್ತಿಲ್ಲ. 2009ರ ನಂತರ ಬಿಜೆಪಿ ಪ್ರಾಬಲ್ಯ ಮೆರೆದಿದೆ.

(ಬಿ.ವೈ. ರಾಘವೇಂದ್ರ)

ಜಾತಿವಾರು ಲೆಕ್ಕಾಚಾರ: ಈ ಬಾರಿಯೂ ಸಾಂಪ್ರದಾಯಿಕ ಎದುರಾಳಿಗಳಾದ ಯಡಿಯೂರಪ್ಪ ಹಾಗೂ ಬಂಗಾರಪ್ಪ ಕುಟುಂಬಗಳ ಮಧ್ಯೆ ಪೈಪೋಟಿ ನಡೆಯುತ್ತಿದೆ. ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ಜಾತಿವಾರು ಲೆಕ್ಕಾಚಾರ ಜೋರಾಗಿದೆ. ಜೆಡಿಎಸ್–ಕಾಂಗ್ರೆಸ್ ಮೈತ್ರಿ ಫಲವಾಗಿ ಜಾತ್ಯತೀತ ಮತಗಳು ಒಟ್ಟಾಗುತ್ತವೆ. ಬಂಗಾರಪ್ಪ ಮೇಲೆ ಜನರು ಇಟ್ಟಿರುವ ಅಭಿಮಾನ ಮಧು ಗೆಲುವಿಗೆ ಸಹಕಾರಿಯಾಗುತ್ತದೆ. ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮುಸ್ಲಿಂ, ಕುರುಬ, ಒಕ್ಕಲಿಗ, ಈಡಿಗ ಸೇರಿ ಹಿಂದುಳಿದ ವರ್ಗಗಳು, ಪರಿಶಿಷ್ಟರ ಮತಗಳುಕೈ ಹಿಡಿಯುತ್ತವೆ ಎಂಬ ಲೆಕ್ಕಾಚಾರ ಮಿತ್ರ ಪಕ್ಷಗಳಲ್ಲಿದೆ.

(ಮಹಿಮ ಪಟೇಲ್)

ಬಿಜೆಪಿಗೆ ಶಾಸಕರ ಬಲ: ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಿವಮೊಗ್ಗ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳು ಹಾಗೂ ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರ ಸೇರಿವೆ. 8 ಕ್ಷೇತ್ರಗಳ ಪೈಕಿ 7ರಲ್ಲಿ ಬಿಜೆಪಿ ಶಾಸಕರು ಇದ್ದಾರೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷರ ಪುತ್ರನ ಗೆಲುವಿಗೆ ರಾಜ್ಯದ ಮುಖಂಡರು ಟೊಂಕಕಟ್ಟಿ ನಿಂತಿದ್ದಾರೆ. ಈ ಲೆಕ್ಕಾಚಾರದ ಮೇಲೆ ಗೆಲುವು ಖಚಿತ ಎಂದು ಬಿಜೆಪಿ ನಂಬಿದೆ. ಬಹುಸಂಖ್ಯಾತ ಲಿಂಗಾಯತ, ಬ್ರಾಹ್ಮಣ ಮತಗಳ ಜತೆಗೆ ಬಿಜೆಪಿಯ ಸಾಂಪ್ರದಾಯಿಕ ಮತದಾರರು ಈ ಬಾರಿಯೂ ಕೈ ಹಿಡಿಯುವ ಭರವಸೆ ಹೊಂದಿದೆ.

ಬಂಗಾರಪ್ಪ ನಾಮಬಲ: ಕಾಂಗ್ರೆಸ್‌–ಜೆಡಿಎಸ್‌ ಚುನಾವಣಾ ಪ್ರಚಾರದಲ್ಲಿ ದಿವಂಗತ ಬಂಗಾರಪ್ಪ ಹೆಸರು ಪ್ರಾಧಾನ್ಯ ಪಡೆದಿದೆ. ಆ ಕುಟುಂಬದ ಸರಣಿ ಸೋಲು ಅಂತ್ಯವಾಗಲಿದೆ.ಈ ಬಾರಿಯ ಗೆಲುವು ಬಂಗಾರಪ್ಪಾಜಿ ಅವರಿಗೆ ಅರ್ಪಿಸಲಾಗುವುದು ಎಂದು ಘೋಷಿಸಿವೆ.ಇದಕ್ಕೆ ಪ್ರತಿಯಾಗಿ ಶಾಸಕ ಕುಮಾರ್ ಬಂಗಾರಪ್ಪ ಹಾಗೂ ಆ ಸಮುದಾಯದ ಶಾಸಕರ ಮೂಲಕ ಬಿಜೆಪಿಯು ಬಂಗಾರಪ್ಪ ಅಭಿಮಾನಿಗಳನ್ನು ಸೆಳೆಯುವ ಕಸರತ್ತು ನಡೆಸಿದೆ.

2014ರ ಚುನಾವಣೆಯಲ್ಲಿ ಜೆಡಿಎಸ್–ಕಾಂಗ್ರೆಸ್ ಅಭ್ಯರ್ಥಿಗಳು ಪಡೆದ ಮತಗಳನ್ನು ಒಟ್ಟಿಗೆ ಸೇರಿಸಿದರೂ 5 ಲಕ್ಷ ದಾಟಿರಲಿಲ್ಲ. ಅಂದು ಯಡಿಯೂರಪ್ಪ 6 ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದರು. ಈಗ ಎರಡೂ ಪಕ್ಷಗಳು ಒಂದಾದರೂ ಗೆಲುವಿಗೆ ಅಡ್ಡಿ ಇಲ್ಲ ಎಂಬುದು ಬಿಜೆಪಿ ವಾದ. ಆಗ ಮೋದಿ ಅಲೆ ಇತ್ತು. ಯಡಿಯೂರಪ್ಪ ಗೆದ್ದರೆ ಕೇಂದ್ರ ಸಚಿವರಾಗುವ ಭರವಸೆ ಇತ್ತು. ಈಗ ಅಂತಹ ಯಾವ ಅಲೆಯೂ ಇಲ್ಲ. ‘ಸಮ್ಮಿಶ್ರ ಸರ್ಕಾರದ ಸಾಲಮನ್ನಾ ಮತ್ತಿತರ ಅಂಶಗಳು ನಮಗೇ ವರದಾನ.1996, 2005ರ ಚುನಾವಣೆಯಲ್ಲಿ ಕೆಸಿಪಿ ಹಾಗೂ ಎಸ್‌ಪಿಯ ಯಾವ ಶಾಸಕರು ಇದ್ದರು? ಆಗ ಬಂಗಾರಪ್ಪ ಆ ಪಕ್ಷಗಳಿಂದ ಸ್ಪರ್ಧಿಸಿ ಗೆಲ್ಲಲಿಲ್ಲವೆ? ಅಂದಿನಂತೆ ಈ ಬಾರಿಯೂ ಇತಿಹಾಸ ಮರುಕಳಿಸುತ್ತದೆ’ ಎಂದು ಮೈತ್ರಿ ಮುಖಂಡರುವಿಶ್ವಾಸ ವ್ಯಕ್ತಪಡಿಸುತ್ತಾರೆ.

2014ರ ಫಲಿತಾಂಶ

ಅಭ್ಯರ್ಥಿ→ಪಕ್ಷ→ಪಡೆದ ಮತಗಳು

ಬಿ.ಎಸ್. ಯಡಿಯೂರಪ್ಪ→ಬಿಜೆಪಿ→6,06,216

ಮಂಜುನಾಥ ಭಂಡಾರಿ→ಕಾಂಗ್ರೆಸ್→2,42,911

ಗೀತಾ ಶಿವರಾಜ್‌ಕುಮಾರ್→ಜೆಡಿಎಸ್→2,40,636

ಮತದಾರರು

ಒಟ್ಟು ಮತದಾರರು 16,45,059

ಮಹಿಳೆಯರು 8,27,111

ಪುರುಷರು 8,17,948

* ನಾಲ್ಕು ತಿಂಗಳ ಅವಧಿಗೆ ಇಷ್ಟೊಂದು ಕಸರತ್ತು ಅಗತ್ಯವಿರಲಿಲ್ಲ. ಜನರ ತೆರಿಗೆ ಹಣದ ಜತೆಗೆ, ಅಭ್ಯರ್ಥಿಗಳ ಬಂಡವಾಳವೂ ಕರಗುತ್ತದೆ.

-ಅಂಜನಪ್ಪ, ಮತದಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.