ಮಂಗಳೂರು: ಪ್ರಬುದ್ಧ ಮತದಾರರನ್ನು ಹೊಂದಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈಗ ಮೈತ್ರಿಕೂಟ ಮತ್ತು ಬಿಜೆಪಿ ಮಧ್ಯೆ ತುರುಸಿನ ಪೈಪೋಟಿ ಇದೆ. ಮತ್ತೆ ಧರ್ಮ ರಾಜಕಾರಣ ಸದ್ದುಮಾಡುತ್ತಿದೆ. ಮೋದಿ ಅಲೆಯ ನಡುವೆ ಉಭಯ ಪಕ್ಷಗಳ ಆರೋಪ–ಪ್ರತ್ಯಾರೋಪಗಳ ಅಬ್ಬರ ಈ ಬಾರಿ ತುಸು ಹೆಚ್ಚಾಗಿಯೇ ಇದೆ.
1952 ರಿಂದ ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಕರೆಯಲಾಗುತ್ತಿದ್ದ ದಕ್ಷಿಣ ಕನ್ನಡ (ಆಗಿನ ಮಂಗಳೂರು) ಕ್ಷೇತ್ರ, 1991 ರಿಂದ ಈಚೆಗೆ ಬಿಜೆಪಿಯ ನೆಲೆಯಾಗಿ ಪರಿವರ್ತನೆಯಾಗಿದೆ. ಒಂದೆಡೆ 28 ವರ್ಷಗಳ ಹಿಡಿತವನ್ನು ಸಡಿಲಿಸಲು ಕಾಂಗ್ರೆಸ್ ತಂತ್ರಗಾರಿಕೆ ರೂಪಿಸುತ್ತಿದ್ದರೆ, ಇನ್ನೊಂದೆಡೆ ವಿಜಯ ಯಾತ್ರೆ ಮುಂದುವರಿಸುವ ತವಕ ಬಿಜೆಪಿಯದ್ದು.
ಸತತ ಮೂರನೇ ಬಾರಿಗೆ ಕಣದಲ್ಲಿರುವ ಬಿಜೆಪಿ ಅಭ್ಯರ್ಥಿ ನಳಿನ್‌ಕುಮಾರ್ ಕಟೀಲ್, ಹ್ಯಾಟ್ರಿಕ್ ಗೆಲುವಿನ ಉಮೇದಿನಲ್ಲಿದ್ದಾರೆ. ಪಕ್ಷದ ಆಂತರಿಕ ತೊಳಲಾಟಗಳಿಗೆ ‘ಮತ್ತೊಮ್ಮೆ ಮೋದಿ’ ಸ್ಲೋಗನ್ ಅಲ್ಪ ವಿರಾಮ ನೀಡಿದೆ. ಅಲ್ಪಮಟ್ಟಿಗೆ ಬಿಜೆಪಿ ನಿರಾಳವಾಗಿವೆ. ನನ್ನ ಪರಿವಾರ–ಬಿಜೆಪಿ ಪರಿವಾರ, ಕಮಲ ಜ್ಯೋತಿ ಯಾತ್ರೆ, ಪೇಜ್ ಪ್ರಮುಖರ ಸಮಾವೇಶ ಹೀಗೆ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಮತದಾರರನ್ನು ತಲುಪುವ ಕಾರ್ಯ ಬಿಜೆಪಿಯಿಂದ ನಡೆಯುತ್ತಿದೆ.
ಇದೆಲ್ಲರ ಮಧ್ಯೆ ವಿಜಯ ಬ್ಯಾಂಕ್ ವಿಲೀನವೇ ಬಿಜೆಪಿ ಪಾಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪಂಪ್ ವೆಲ್, ತೊಕ್ಕೊಟ್ಟು ಫ್ಲೈಓವರ್, ಬಿ.ಸಿ.ರೋಡ್–ಅಡ್ಡಹೊಳೆ ಚತುಷ್ಪಥ ಹೆದ್ದಾರಿ ಕಾಮಗಾರಿ ವಿಳಂಬವೂ ಪ್ರತಿಪಕ್ಷಗಳ ಟೀಕೆಗೆ ಆಹಾರವಾಗಿವೆ. ಇದರ ಮಧ್ಯೆ ರಿಂಗ್ ರಸ್ತೆ, ಕುಳಾಯಿ ಜೆಟ್ಟಿ ನಿರ್ಮಾಣಕ್ಕೆ ಶಂಕುಸ್ಥಾಪನೆ, ಕುಲಶೇಖರ್–ಕಾರ್ಕಳ ಹೆದ್ದಾರಿ ಕಾಮಗಾರಿ, ಗುರುಪುರ ಹೊಸ ಸೇತುವೆ ನಿರ್ಮಾಣದಂತಹ ಕಾರ್ಯಗಳು ಬಿಜೆಪಿಯ ಪ್ರಮುಖ ಅಸ್ತ್ರಗಳಾಗಿವೆ. ಇನ್ನು ಸತತ ಸೋಲಿನಿಂದ ಕಂಗೆ ಟ್ಟಿರುವ ಕಾಂಗ್ರೆಸ್ ಈ ಬಾರಿ ಯುವ ಮುಖವನ್ನು ಕಣಕ್ಕೆ ಇಳಿಸಿದೆ. 34 ವರ್ಷದ ಮಿಥುನ್ ರೈ ಇಲ್ಲಿ ಮೈತ್ರಿ ಅಭ್ಯರ್ಥಿ, ಹೊಸ ಹುರುಪಿನಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಮೈತ್ರಿ ಧರ್ಮಕ್ಕೆ ಅನುಗುಣವಾಗಿ ಜೆಡಿಎಸ್ ಕೂಡ ಪ್ರಚಾರ
ದಲ್ಲಿ ಒಂದು ಹೆಜ್ಜೆ ಮುಂದಿ ರುವುದು ಕಾಂಗ್ರೆಸಿಗರಿಗೆ ನೆಮ್ಮದಿ ತಂದಿದೆ.
ಕಾಂಗ್ರೆಸ್‌ನ ಆಂತರಿಕ ಭಿನ್ನಾಭಿಪ್ರಾಯಗಳು ಹೊರಗೆ ಕಾಣಿಸಿಕೊಳ್ಳದೇ ಇದ್ದರೂ, ಅಲ್ಪಸಂಖ್ಯಾತರು ಪಕ್ಷದ ನಡೆಯ ಬಗ್ಗೆ ಮುನಿಸಿಕೊಂಡಿರುವುದು ಗುಟ್ಟಾಗಿ ಉಳಿದಿಲ್ಲ. ಈ ಬಾರಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕು ಎನ್ನುವ ಬೇಡಿಕೆ ಮನ್ನಣೆ ಸಿಗದೇ ಇರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಎಸ್‌ಡಿಪಿಐ ಕೂಡ ಕಣದಲ್ಲಿರುವುದು ಕಾಂಗ್ರೆಸ್‌ಗೆ ನುಂಗಲಾರದ ತುತ್ತು.
ಗುಟ್ಟು ಬಿಡದ ಮತದಾರ: ದಕ್ಷಿಣ ಕನ್ನಡ ಜಿಲ್ಲೆಯ ಮತದಾರರು ಇದೇ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದು ಹೇಳುವುದು ತುಸು ಕಷ್ಟವೇ. ಹಿಂದಿನ ಚುನಾವಣೆಗಳನ್ನು ನೋಡಿದರೆ, ಇಲ್ಲಿ ಯಾವ ಪಕ್ಷ ಜಯಗಳಿಸಲಿದೆ ಎಂದು ಹೇಳುವುದು ಸಾಧ್ಯವೇ ಇಲ್ಲ.
2013 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 8 ಕ್ಷೇತ್ರಗಳ ಪೈಕಿ, 7 ರಲ್ಲಿ ಕಾಂಗ್ರೆಸ್ ಜಯಗಳಿಸಿತ್ತು. ಮರು ವರ್ಷ ಅಂದರೆ 2014 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್‌ಕುಮಾರ್ ಕಟೀಲ್ ಹಿಂದಿಗಿಂತಲೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದರು. 2018 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ 8 ಕ್ಷೇತ್ರಗಳ ಪೈಕಿ 7 ರಲ್ಲಿ ಬಿಜೆಪಿ ಶಾಸಕರಿದ್ದಾರೆ. ಹಾಗಂತ ಈ ಬಾರಿ ಬಿಜೆಪಿ ಗೆಲುವು ನಿಶ್ಚಿತ ಎಂದು ಖಡಕ್ಕಾಗಿ ಹೇಳುವುದು ರಾಜಕೀಯ ತಜ್ಞರಿಗೂ ಸಾಧ್ಯವಾಗುತ್ತಿಲ್ಲ.
ಯಾರು ಗೆದ್ದರೂ ಇತಿಹಾಸ: ದಕ್ಷಿಣ ಕನ್ನಡದಲ್ಲಿ ಬಿಜೆಪಿಯ ನಳಿನ್‌ಕುಮಾರ್ ಕಟೀಲ್ ಅಥವಾ ಕಾಂಗ್ರೆಸ್‌ನ ಮಿಥುನ್ ರೈ ಇವರಲ್ಲಿ ಯಾರು ಗೆದ್ದರೂ, ಕ್ಷೇತ್ರದದಲ್ಲಿ ಅದೊಂದು ದಾಖಲೆಯೇ.
ನಳಿನ್ ಗೆದ್ದರೆ ಅದು ಅವರಿಗೆ ಹ್ಯಾಟ್ರಿಕ್ ಸಾಧನೆ. ಮಿಥುನ್ ಗೆದ್ದರೆ 29 ವರ್ಷಗಳ ಬಳಿಕ ಬಿಜೆಪಿಯನ್ನು ಸೋಲಿಸಿದ ಸಾಧನೆ. ಜತೆಗೆ ಈ ಕ್ಷೇತ್ರದಲ್ಲಿ ಗೆದ್ದವರ ಪೈಕಿ ಅವರೇ ಕಿರಿಯರಾಗುತ್ತಾರೆ. ಈ ಹಿಂದೆ ಗೆದ್ದ ಜನಾರ್ದನ ಪೂಜಾರಿ, ಧನಂಜಯ ಕುಮಾರ್ ಮತ್ತು ನಳಿನ್ ಇವರೆಲ್ಲರೂ ಮೊದಲ ಬಾರಿಗೆ ಸಂಸದರಾದಾಗ 40 ದಾಟಿತ್ತು. ಮಿಥುನ್ ಈಗಿನ್ನೂ 34ರ ಯುವಕ.
ದೇಶದ ಅಭದ್ರತೆ ಸ್ಥಿತಿಯನ್ನು ಹೋಗಲಾಡಿಸಲೇಬೇಕಿದ್ದು, ಅಂತಹ ನಾಯಕತ್ವಕ್ಕೆ ನಾವು ಉತ್ತೇಜನ ನೀಡಬೇಕಿದೆ.
ವಿನಯ್ ರೈ,ಕೋರಿಕ್ಕಾರು ಕಾಲೇಜು ವಿದ್ಯಾರ್ಥಿ
ಈ ಬಾರಿ ಮೋದಿ ಅಲೆಯಲ್ಲ, ಸುನಾಮಿ ಇದೆ. ಈ ಬಾರಿ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಬಿಜೆಪಿಗೆ 2 ಲಕ್ಷಕ್ಕೂ ಅಧಿಕ ಮತಗಳ ಅಂತರದ ಗೆಲುವು ನಿಶ್ಚಿತ.
ನಳಿನ್‌ಕುಮಾರ್ ಕಟೀಲ್
ಸಂಸದರ ವೈಫಲ್ಯಗಳೇ ನಮ್ಮ ಗೆಲುವಿಗೆ ಸಹಕಾರಿ. ಪಕ್ಷದ ಎಲ್ಲ ಮುಖಂಡರು ಒಟ್ಟಾಗಿಯೇ ನನ್ನನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದು, ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ.
ಮಿಥುನ್ ರೈ,ಕಾಂಗ್ರೆಸ್ ಅಭ್ಯರ್ಥಿ
ನಮ್ರತಾ ಉಳ್ಳಾಲ
ಕಾಲೇಜು ವಿದ್ಯಾರ್ಥಿನಿ
ಸ್ಥಳೀಯವಾಗಿ ಮಾತ್ರವಲ್ಲ, ರಾಷ್ಟ್ರದಲ್ಲಿ ಉತ್ತಮ ನಾಯಕ ಆಯ್ಕೆಯಾಗಬೇಕು ಎಂಬ ಗುರಿಯೊಂದಿಗೆ ಚುನಾವಣೆಯಲ್ಲಿ ಮತ ಚಲಾಯಿಸಬೇಕಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.