ADVERTISEMENT

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ:ಚುನಾವಣಾಧಿಕಾರಿ ಸೂಚನೆ ಮೀರಿ ಸಂದರ್ಶನ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2019, 18:16 IST
Last Updated 12 ಮಾರ್ಚ್ 2019, 18:16 IST

ಬಳ್ಳಾರಿ: ‘ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಬೋಧಕ ಸಿಬ್ಬಂದಿ ನೇಮಕಾತಿಗಾಗಿ ಮಂಗಳವಾರದಿಂದ ನಿಗದಿಯಾಗಿರುವ ಸಂದರ್ಶನ ಮುಂದೂಡಬೇಕು’ ಎಂಬ ಜಿಲ್ಲಾ ಚುನಾವಣಾಧಿಕಾರಿ ಡಾ.ವಿ.ರಾಮಪ್ರಸಾದ್‌ ಮನೋಹರ್‌ ಅವರ ಸೂಚನೆ ಮೀರಿ, ವಿಶ್ವವಿದ್ಯಾಲಯ ಸಂದರ್ಶನ ನಡೆಸಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ, ‘ಸಂದರ್ಶನ ನಡೆಸಬಾರದು. ನಡೆಸಿದ್ದರೆ ಕ್ರಿಮಿನಲ್‌ ಮೊಕದ್ದಮೆ ಹೂಡಲಾಗುವುದು’ ಎಂದರು.

‘ಸಂದರ್ಶನ ಪ್ರಕ್ರಿಯೆಯನ್ನು ತಡೆ ಹಿಡಿಯಬೇಕು’ ಎಂದು ನಗರದ ಡಾ.ಎಸ್.ವಿ.ಪ್ರಭಾಕರ್‌ ಚುನಾವಣಾ ಆಯೋಗಕ್ಕೆ ಹಾಗೂ
ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸೋಮವಾರ ದೂರು ಸಲ್ಲಿಸಿದ್ದರು.

ADVERTISEMENT

23 ವಿಭಾಗಗಳಲ್ಲಿ ಬೋಧಕರ ನೇಮಕಾತಿಗಾಗಿ ಮಾ.12ರಿಂದ 15ರವರೆಗೂ ಸಂದರ್ಶನ ಪ್ರಕ್ರಿಯೆಯನ್ನು ವಿಶ್ವವಿದ್ಯಾಲಯ ನಿಗದಿಪಡಿಸಿದೆ. ಬೋಧಕ ಸಿಬ್ಬಂದಿಯ ನೇಮಕಾತಿ ಪಾರದರ್ಶಕವಾಗಿಲ್ಲ ಎಂಬ ಆರೋಪಗಳ ಮೇರೆಗೆ ಈ ವಿಶ್ವವಿದ್ಯಾಲಯ ಸೇರಿದಂತೆ ದಾವಣಗೆರೆ ಹಾಗೂ ಕರ್ನಾಟಕ ವಿಶ್ವವಿದ್ಯಾಲಯಗಳಲ್ಲಿ ತನಿಖೆ ನಡೆಸುವಂತೆ ವಿಶ್ವೇಶ್ವರಯ್ಯ ತಾಂತ್ರಿಕ
ವಿಶ್ವವಿದ್ಯಾಲಯದ ಕುಲಪತಿ ನೇತೃತ್ವದಲ್ಲಿ ಸಮಿತಿಯನ್ನು ಸರ್ಕಾರ ರಚಿಸಿತ್ತು.

‘ಸಮಿತಿಯ ಶಿಫಾರಸುಗಳ ಅನ್ವಯ, ಯುಜಿಸಿ ಮಾರ್ಗಸೂಚಿಯಂತೆ, ವಿಡಿಯೊ ಮಾಡುವ ಮೂಲಕ ಸಂದರ್ಶನ ನಡೆಸಿ ನೇಮಕಾತಿ ಪ್ರಕ್ರಿಯೆ ಮುಗಿಸಬೇಕು ಎಂದು ಮಾರ್ಚ್‌ 8ರಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. ನೀತಿ ಸಂಹಿತೆ ಮುಗಿಯುವವರೆಗೂ ನೇಮಕಾತಿ ಆದೇಶ ಪತ್ರವನ್ನು ನೀಡುವುದಿಲ್ಲ’ ಎಂದು ಕುಲಪತಿ ಎಂ.ಎಸ್‌.ಸುಭಾಷ್‌ ಸ್ಪಷ್ಟನೆ ಪ್ರಕಟಿಸಿದ್ದಾರೆ. ಆದರೆ ಅವರು ಪ್ರತಿಕ್ರಿಯೆಗೆ ಸಿಗಲಿಲ್ಲ.

ಪ್ರತಿಕ್ರಿಯೆ ನೀಡಿದ ಕುಲಸಚಿವೆ ಪ್ರೊ.ತುಳಸಿಮಾಲಾ, ‘ಜಿಲ್ಲಾಧಿಕಾರಿ ಕಚೇರಿಯಿಂದ ಯಾವುದೇ ಸೂಚನಾ ಪತ್ರ ಬಂದಿಲ್ಲ. ಆದರೆ ಮೌಖಿಕ ಸೂಚನೆ ದೊರೆತಿದೆ ಎಂದು ತಿಳಿದುಬಂದಿದೆ. ಸಂದರ್ಶನ ಪ್ರಕ್ರಿಯೆಯಲ್ಲಿರುವುದರಿಂದ ಕುಲಪತಿ ನನ್ನ ದೂರವಾಣಿ ಸಂಪರ್ಕಕ್ಕೂ ಸಿಗಲಿಲ್ಲ. ನಾನು ರಜೆಯಲ್ಲಿರುವೆ’ ಎಂದರು.

‘ನಿವೃತ್ತಿಗೆ ಆರು ತಿಂಗಳ ಮುಂಚೆ ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಬಾರದು’ ಎಂದು ಉನ್ನತ ಶಿಕ್ಷಣ ಇಲಾಖೆಯು ಜ.25ರಂದು ಕುಲಪತಿ ಎಂ.ಎಸ್‌.ಸುಭಾಷ್‌ ಅವರಿಗೆ ಪತ್ರ ಬರೆದಿತ್ತು. ಆದರೂ ಕುಲಪತಿ ಅವಸರದಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ನಡೆಸಿದ್ದಾರೆ’ ಎಂದು ವಿದ್ಯಾವಿಷಯಕ ಪರಿಷತ್ತಿನ ಮಾಜಿ ಸದಸ್ಯ ವೆಂಕಟೇಶ್‌ ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.