ADVERTISEMENT

5 ನಗರಸಭೆಗಳೂ ಸೇರಿ 58 ನಗರ ಸ್ಥಳೀಯ ಸಂಸ್ಥೆಗಳಿಗೆ ಡಿ.27ರಂದು ಚುನಾವಣೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 7:37 IST
Last Updated 29 ನವೆಂಬರ್ 2021, 7:37 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಚುನಾಯಿತ ಪ್ರತಿನಿಧಿಗಳ ಅವಧಿ ಪೂರ್ಣಗೊಂಡಿರುವ ಐದು ನಗರಸಭೆಗಳೂ ಸೇರಿದಂತೆ 58 ನಗರ ಸ್ಥಳೀಯ ಸಂಸ್ಥೆಗಳ 1,185 ವಾರ್ಡ್‌ಗಳ ಪ್ರತಿನಿಧಿಗಳ ಆಯ್ಕೆಗೆ ರಾಜ್ಯ ಚುನಾವಣಾ ಆಯೋಗವು ಸೋಮವಾರ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದೆ. ಈ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ ಡಿಸೆಂಬರ್‌ 27ರಂದು ಚುನಾವಣೆ ನಡೆಯಲಿದೆ.

19 ಪುರಸಭೆಗಳು ಮತ್ತು 34 ಪಟ್ಟಣ ಪಂಚಾಯಿತಿಗಳಿಗೂ ಚುನಾವಣೆ ಘೋಷಣೆಯಾಗಿದೆ. ಅದರ ಜತೆಯಲ್ಲೇ ವಿವಿಧ ಕಾರಣಗಳಿಂದ ತೆರವಾಗಿರುವ ನಗರಸಭೆಗಳ ಐದು ವಾರ್ಡ್‌ಗಳು, ಪುರಸಭೆಗಳ ಮೂರು ಮತ್ತು ಪಟ್ಟಣ ಪಂಚಾಯಿತಿಯ ಒಂದು ವಾರ್ಡ್‌ಗಳಿಗೂ ಅದೇ ದಿನ ಉಪ ಚುನಾವಣೆ ನಡೆಯಲಿದೆ.

ಡಿಸೆಂಬರ್‌ 8ರಂದು ಆಯಾ ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸುತ್ತಾರೆ. ಡಿ.15 ನಾಮಪತ್ರ ಸಲ್ಲಿಸಲು ಕೊನೆಯ ದಿನ. ಡಿ.16 ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಡಿ.18 ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.

ADVERTISEMENT

ಡಿ.27ರಂದು ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಅಗತ್ಯವಿದ್ದ ಕಡೆಗಳಲ್ಲಿ ಡಿ.29ರಂದು ಮರು ಮತದಾನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಡಿ.30ರಂದು ಬೆಳಿಗ್ಗೆ 8ರಿಂದ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ. ಡಿ.30ರಂದು ಚುನಾವಣಾ ಪ್ರಕ್ರಿಯೆ ಅಂತ್ಯಗೊಳ್ಳಲಿದೆ.

ಡಿ.8ರಿಂದ ನೀತಿ ಸಂಹಿತೆ ಜಾರಿ: ಚುನಾವಣೆ ನಡೆಯುತ್ತಿರುವ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಡಿ.8ರಿಂದ ಡಿ.30ರವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ಆಯೋಗ ತಿಳಿಸಿದೆ.

ವೆಚ್ಚದ ಮಿತಿ: ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ನಗರಸಭೆಗಳಲ್ಲಿ ತಲಾ 2ಲಕ್ಷ, ಪುರಸಭೆಗಳಲ್ಲಿ 1.5 ಲಕ್ಷ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ 1 ಲಕ್ಷ ವೆಚ್ಚದ ಮಿತಿ ನಿಗದಿಪಡಿಸಲಾಗಿದೆ.

57 ಗ್ರಾ.ಪಂ. ಗಳಿಗೂ ಚುನಾವಣೆ: ಚುನಾಯಿತ ಪ್ರತಿನಿಧಿಗಳ ಅವಧಿ ಪೂರ್ಣಗೊಂಡಿರುವ ವಿವಿಧ ಜಿಲ್ಲೆಗಳ 57 ಗ್ರಾಮ ಪಂಚಾಯಿತಿಗಳಿಗೂ ಡಿ.27ರಂದೇ ಚುನಾವಣೆ ನಡೆಯಲಿದೆ.

ಡಿ.13ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ. ಡಿ.17ರವರೆಗೂ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಡಿ.18 ನಾಮಪತ್ರ ಪರಿಶೀಲನೆ ನಡೆಯಲಿದ್ದು, ಡಿ.20 ನಾಮಪತ್ರ ಹಿಂಪಡೆಯಲು ಕೊನೆಯ ದಿನ.

ಡಿ.27ಕ್ಕೆ ಮತದಾನ, ಡಿ.29ಕ್ಕೆ ಮರು ಮತದಾನ ಮತ್ತು ಡಿ.30ಕ್ಕೆ ಮತ ಎಣಿಕೆ ನಡೆಯಲಿದೆ ಎಂದು ಆಯೋಗ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.