ADVERTISEMENT

ಚುನಾವಣಾ ಬಾಂಡ್‌–ಮೂಡಾ ಎರಡೂ ಬೇರೆ: ಆರ್. ಅಶೋಕ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2024, 10:04 IST
Last Updated 28 ಸೆಪ್ಟೆಂಬರ್ 2024, 10:04 IST

ಆರ್. ಅಶೋಕ 
ಆರ್. ಅಶೋಕ    

ಬೆಂಗಳೂರು: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿದ ಆದೇಶಕ್ಕೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ‘ಮುಡಾ’ ಹಗರಣಕ್ಕೂ ವ್ಯತ್ಯಾಸವಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ತಿಳಿಸಿದರು.

ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಜನ ಪಕ್ಷಪಾತ ಮಾಡಿದ್ದಾರೆ. ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಮೀನನ್ನು ಕಬಳಿಸಿದ್ದಾರೆ. ನಿರ್ಮಲಾ ಸೀತಾರಾಮನ್‌ ಅವರು ತಮ್ಮ ಸ್ವಂತಕ್ಕಾಗಿ ಏನೂ ಮಾಡಿಲ್ಲ. ಆ ಹಣ ಪಕ್ಷಕ್ಕೆ ಬಂದಿದೆ. ಕಾಂಗ್ರೆಸ್‌ ಪಕ್ಷಕ್ಕೂ ₹1,200 ಕೋಟಿಗೂ ಅಧಿಕ ಹಣ ಸಂದಾಯವಾಗಿದೆ. ಆ ಹಣವನ್ನು ಮೊದಲು ವಾಪಸ್‌ ನೀಡಲಿ, ನಂತರ ಸಚಿವರ ರಾಜೀನಾಮೆ ಕೇಳಲಿ’ ಎಂದರು.

ಎಲ್ಲ ಪಕ್ಷಗಳು ದೇಣಿಗೆ ಸಂಗ್ರಹ ಮಾಡಿವೆ. ಪಕ್ಷಕ್ಕಾಗಿ ಹಣ ಸಂಗ್ರಹಿಸಿದವರ ಮೇಲೆ ಎಫ್‌ಐಆರ್‌ ದಾಖಲಿಸುವುದಾದರೆ, ಎಲ್ಲರ ಮೇಲೂ ದಾಖಲಿಸಬೇಕಾಗುತ್ತದೆ. ಸಿದ್ದರಾಮಯ್ಯ ಅವರೇ ಹೇಳಿಸಿ ನಿರ್ಮಲಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ವಿರುದ್ಧ ದೂರು ದಾಖಲಿಸಿದ್ದಾರೆ ಎಂಬ ಅನುಮಾನವಿದೆ. ಇಂತಹ ದೂರು ಕೇವಲ ರಾಜಕೀಯ ಪ್ರೇರಿತ ಎಂದು ತಿಳಿಸಿದರು.

ADVERTISEMENT

ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಲ್ಲೇ ಮುಂದುವರಿದರೆ ಪೊಲೀಸರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಅದಕ್ಕಾಗಿ ರಾಜೀನಾಮೆಗೆ ಒತ್ತಾಯಿಸಿದ್ದೇವೆ‌. ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರಿಗೂ, ರಾಜ್ಯ ಪೊಲೀಸರಿಗೂ ಸಂಬಂಧವಿಲ್ಲ. ಹಾಗಾಗಿ, ಅವರ ರಾಜೀನಾಮೆ ಅನಗತ್ಯ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.