ADVERTISEMENT

Electoral Bonds | ಸುಪ್ರೀಂ ಕೋರ್ಟ್‌ ನೇತೃತ್ವದಲ್ಲಿ ತನಿಖೆ ನಡೆಯಲಿ: ಖರ್ಗೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2024, 9:55 IST
Last Updated 15 ಮಾರ್ಚ್ 2024, 9:55 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ಬೆಂಗಳೂರು: ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳು ದೇಣಿಗೆ ಸಂಗ್ರಹಿಸಿರುವ ಕುರಿತು ಸುಪ್ರೀಂ ಕೋರ್ಟ್‌ ನೇತೃತ್ವದಲ್ಲಿ ಉನ್ನತಮಟ್ಟದ ತನಿಖೆ ನಡೆಸಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚುನಾವಣಾ ಬಾಂಡ್‌ ಮೂಲಕ ಸಂಗ್ರಹಿಸಿರುವ ದೇಣಿಗೆಯ ವಿವರಗಳು ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶದಿಂದ ಬಹಿರಂಗವಾಗಿವೆ. ಚುನಾವಣಾ ಬಾಂಡ್‌ ವ್ಯವಸ್ಥೆಯನ್ನು ಬಿಜೆಪಿ ಹೇಗೆ ದುರ್ಬಳಕೆ ಮಾಡಿಕೊಂಡಿದೆ ಎಂಬುದು ಬಯಲಿಗೆ ಬಂದಿದೆ. ಈ ಕುರಿತು ಸುಪ್ರೀಂ ಕೋರ್ಟ್‌ ನೇತೃತ್ವದಲ್ಲಿ ತನಿಖೆ ನಡೆಸಿ, ಕ್ರಮ ಜರುಗಿಸಬೇಕು’ ಎಂದರು.

ಒಟ್ಟು ಖರೀದಿಯಾದ ಚುನಾವಣಾ ಬಾಂಡ್‌ಗಲ್ಲಿ ಶೇಕಡ 50ರಷ್ಟು ಬಿಜೆಪಿಗೆ ಸಂದಾಯವಾಗಿವೆ. ಅದರ ಮೂಲಕ ಬಿಜೆಪಿಯು ಭಾರಿ ಮೊತ್ತದ ಹಣ ಸಂಗ್ರಹಿಸಿದೆ. ಬಿಜೆಪಿಯು ಅಧಿಕಾರ ದುರ್ಬಳಕೆ ಮಾಡಿಕೊಂಡು ಹಣ ಸಂಗ್ರಹಿಸಿರುವುದರಿಂದ ತಕ್ಷಣವೇ ಆ ಪಕ್ಷದ ಬ್ಯಾಂಕ್‌ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಒತ್ತಾಯಿಸಿದರು.

ADVERTISEMENT

‘ಪ್ರಧಾನಿ ನರೇಂದ್ರ ಮೋದಿಯವರು ಮಾತೆತ್ತಿದರೆ ನಾನು ತಿನ್ನುವುದಿಲ್ಲ, ತಿನ್ನಲೂ ಬಿಡುವುದಿಲ್ಲ ಎನ್ನುತ್ತಿದ್ದರು. ಆದಾಯ ತೆರಿಗೆ (ಐ.ಟಿ) ಇಲಾಖೆ, ಜಾರಿ ನಿರ್ದೇಶನಾಲಯ (ಇ.ಡಿ), ಸಿಬಿಐನಂತಹ ತನಿಖಾ ಸಂಸ್ಥೆಗಳ ಮೂಲಕ ಬೆದರಿಕೆ ಹಾಕಿ ಚುನಾವಣಾ ಬಾಂಡ್‌ಗಳನ್ನು ಪಡೆದಿರುವುದು ಜಾಹೀರಾಗಿದೆ. ಪದೇ ಪದೇ ತನಿಖಾ ಸಂಸ್ಥೆಗಳಿಂದ ದಾಳಿಗೊಳಗಾದ ಕಂಪನಿಗಳು ಬಿಜೆಪಿಗೆ ನೂರಾರು ಕೋಟಿ ರೂಪಾಯಿ ಮೊತ್ತದ ಚುನಾವಣಾ ಬಾಂಡ್‌ಗಳನ್ನು ದೇಣಿಗೆಯಾಗಿ ನೀಡಿವೆ’ ಎಂದು ಆರೋಪಿಸಿದರು.

ಕಾಂಗ್ರೆಸ್‌ ಪಕ್ಷಕ್ಕೆ ಶೇಕಡ 11ರಷ್ಟು ಚುನಾವಣಾ ಬಾಂಡ್‌ಗಳು ಬಂದಿವೆ. ಆದರೆ, ಬಿಜೆಪಿಯಂತೆ ಒತ್ತಡ ಹೇರಿ ಹಣ ವಸೂಲಿ ಮಾಡಿಲ್ಲ. ಚುನಾವಣಾ ಬಾಂಡ್‌ ವಿಚಾರದಲ್ಲಿ ಬಿಜೆಪಿಯು ಏನೆಲ್ಲಾ ಮಾಡಿದೆ ಎಂಬುದು ಬಯಲಿಗೆ ಬರಬೇಕು ಎಂದರು.

ಕಾಂಗ್ರೆಸ್‌ ಪಕ್ಷವು ತನ್ನ ಸದಸ್ಯರಿಂದ ವಂತಿಗೆ ಸಂಗ್ರಹಿಸಿದ್ದ ₹ 300 ಕೋಟಿಯನ್ನು ಠೇವಣಿ ಇರಿಸಿದ್ದ ಬ್ಯಾಂಕ್‌ ಖಾತೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಬಿಜೆಪಿಯ ಬ್ಯಾಂಕ್‌ ಖಾತೆಗಳ ವಿಚಾರದಲ್ಲಿ ತನಿಖಾ ಸಂಸ್ಥೆಗಳು ಮೌನಕ್ಕೆ ಶರಣಾಗಿವೆ. ತಕ್ಷಣವೇ ಬಿಜೆಪಿಯ ಬ್ಯಾಂಕ್‌ ಖಾತೆಗಳನ್ನೂ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಒತ್ತಾಯಿಸಿದರು.

ವಿ.ವಿಪ್ಯಾಟ್‌ ಪೂರ್ಣ ಎಣಿಕೆಯಾಗಲಿ: ‘ಮತಪತ್ರಗಳನ್ನು ಬಳಸಿ ಚುನಾವಣೆ ನಡೆಸಬೇಕು’ ಎಂಬ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿಯವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಖರ್ಗೆ, ‘ಈ ಸರ್ಕಾರವು ವಿದ್ಯುನ್ಮಾನ ಮತ ಯಂತ್ರಗಳನ್ನು (ಇವಿಎಂ) ಬಳಸಿಯೇ ಚುನಾವಣೆ ನಡೆಸುತ್ತದೆ. ಆದರೆ, ವಿ.ವಿಪ್ಯಾಟ್‌ಗಳಲ್ಲಿನ ಎಲ್ಲ ಮತ ಖಾತರಿ ಚೀಟಿಗಳನ್ನು ಎಣಿಕೆ ಮಾಡಬೇಕು ಎಂಬುದು ನಮ್ಮ ಆಗ್ರಹ’ ಎಂದರು.

ರಾಜ್ಯಸಭಾ ಸದಸ್ಯ ಅಜಯ್‌ ಮಾಕನ್‌ ಮಾತನಾಡಿ, ‘22,270 ಚುನಾವಣಾ ಬಾಂಡ್‌ಗಳು ಖರೀದಿಯಾಗಿದ್ದವು. ಅವುಗಳಲ್ಲಿ 18,800 ಬಾಂಡ್‌ಗಳ ಮಾಹಿತಿಯನ್ನು ಮಾತ್ರ ಎಸ್‌ಬಿಐ ಬಹಿರಂಗಪಡಿಸಿದೆ. ಉಳಿದ ಬಾಂಡ್‌ಗಳ ಮಾಹಿತಿ ಎಲ್ಲಿದೆ? ಅವುಗಳು ಏನಾದವು? ಎಂಬುದರ ವಿವರ ಬಹಿರಂಗವಾಗಬೇಕು’ ಎಂದು ಒತ್ತಾಯಿಸಿದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಎಐಸಿಸಿ ವಕ್ತಾರ ಪವನ್‌ ಖೇರಾ, ರಾಜ್ಯ ಪರಿವರ್ತನಾ ಸಂಸ್ಥೆ ಉಪಾಧ್ಯಕ್ಷ ಎಂ.ವಿ. ರಾಜೀವ್‌ ಗೌಡ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.