ಬೆಂಗಳೂರು: ರಾಜ್ಯದಲ್ಲಿ ನೋಂದಣಿಯಾಗುವ ₹20 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ಎಲೆಕ್ಟ್ರಿಕ್ ವಾಹನಗಳಿಗೆ (ಇವಿ) ಆಜೀವ ತೆರಿಗೆ ವಿನಾಯಿತಿ ಮುಂದುವರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಪರಿಸರಸ್ನೇಹಿ ವಿದ್ಯುತ್ ಚಾಲಿತ ವಾಹನಗಳ ಖರೀದಿ ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ 2016ರಲ್ಲಿ ಎಲ್ಲ ಬಗೆಯ ಎಲೆಕ್ಟ್ರಿಕ್ ವಾಹನಗಳಿಗೆ ಶೂನ್ಯ ರಸ್ತೆ ತೆರಿಗೆ ಘೋಷಿಸಿತ್ತು. ಅದರಂತೆ ರಾಜ್ಯದಲ್ಲೂ ವಿದ್ಯುತ್ ಚಾಲಿತ ವಾಹನಗಳ ಖರೀದಿಗೆ ತೆರಿಗೆ ವಿನಾಯಿತಿ ನೀಡಲಾಗಿತ್ತು.
ಆದರೆ, ತೆರಿಗೆ ವಿನಾಯಿತಿಯಿಂದ ಆದಾಯ ಸಂಗ್ರಹ ಕಡಿಮೆ ಆಗಿರುವ ಕಾರಣ ಎಲ್ಲ ಮಾದರಿಯ ಇ-ವಾಹನಗಳಿಗೆ ತೆರಿಗೆ ವಿಧಿಸಲು ಅನುಮತಿ ಕೋರಿ ರಾಜ್ಯ ರಸ್ತೆ ಪ್ರಾಧಿಕಾರವು ಸರ್ಕಾರಕ್ಕೆ ಈ ಹಿಂದೆಯೇ ಪ್ರಸ್ತಾವ ಸಲ್ಲಿಸಿತ್ತು. ಆದರೆ, ಈ ಪ್ರಸ್ತಾವವನ್ನು ಸರ್ಕಾರ ತಿರಸ್ಕರಿಸಿತ್ತು. ನಂತರ ₹20 ಲಕ್ಷಕ್ಕೂ ಹೆಚ್ಚು ಮೌಲ್ಯದ ಇ-ವಾಹನಗಳಿಗಾದರೂ ತೆರಿಗೆ ವಿಧಿಸುವಂತೆ ಕೆಲವು ತಿಂಗಳುಗಳ ಹಿಂದೆ ಪ್ರಸ್ತಾವ ಸಲ್ಲಿಸಿತ್ತು. ಈ ಪ್ರಸ್ತಾವವನ್ನೂ ತಿರಸ್ಕರಿಸಿರುವ ಸರ್ಕಾರ, ತೆರಿಗೆ ವಿನಾಯಿತಿ ಮುಂದುವರಿಸುವಂತೆ ಆದೇಶಿಸಿದೆ.
ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ‘ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ಎರಡನೇ ತಿದ್ದುಪಡಿ) ಮಸೂದೆ’ ಅನುಮೋದನೆಗೊಂಡಿತ್ತು. ಈ ವೇಳೆ ₹20 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ಇ-ವಾಹನಗಳಿಗೆ ತೆರಿಗೆ ವಿನಾಯಿತಿ ಹಿಂಪಡೆಯುವ ಪ್ರಸ್ತಾವಕ್ಕೆ ಪಕ್ಷಾತೀತವಾಗಿ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ, ತೆರಿಗೆ ವಿನಾಯಿತಿ ಮುಂದುವರಿಕೆಗೆ ಆಗ್ರಹಿಸಿದ್ದರು. ಶಾಸಕರ ಒತ್ತಡಕ್ಕೆ ಮಣಿದಿದ್ದ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರು ತೆರಿಗೆ ವಿನಾಯಿತಿ ಮುಂದುವರಿಸುವ ಭರವಸೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.