ADVERTISEMENT

ವನ್ಯಜೀವಿಗಳ ಸಾವಿಗೆ ವಿದ್ಯುತ್‌ ತಂತಿ ಕಂಟಕ: ಎಸ್ಕಾಂಗಳಿಗೆ ಹೈಕೋರ್ಟ್‌ ನೋಟಿಸ್

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 15:33 IST
Last Updated 19 ಜುಲೈ 2024, 15:33 IST
<div class="paragraphs"><p>ಹೈಕೋರ್ಟ್‌</p></div>

ಹೈಕೋರ್ಟ್‌

   

ಬೆಂಗಳೂರು: ‘ವನ್ಯಜೀವಿಗಳ ಸಾವಿಗೆ ಅರಣ್ಯದಲ್ಲಿ ಅಳವಡಿಸಿರುವ ವಿದ್ಯುತ್ ತಂತಿಗಳು ಮುಖ್ಯ ಕಾರಣವಾಗಿವೆ. ಈ ತಂತಿಗಳ ನಿಗದಿತ ನಿರ್ವಹಣೆ ಆಗುತ್ತಿಲ್ಲ. ಅರಣ್ಯದಂಚಿನ ಕೃಷಿ ಭೂಮಿಗಳಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದುಕೊಳ್ಳಲಾಗುತ್ತಿದೆ. ನಿಗದಿತ ಎತ್ತರಕ್ಕಿಂತಲೂ ಕಡಿಮೆ ಎತ್ತರದಲ್ಲಿ ತಂತಿಗಳನ್ನು ಅಳವಡಿಸಲಾಗಿದೆ. ಇದು ವನ್ಯಜೀವಿಗಳ ಬದುಕಿಗೆ ಕಂಟಕ ತಂದೊಡ್ಡಿದೆ’ ಎಂದು ರಾಜ್ಯ ಸರ್ಕಾರ, ಹೈಕೋರ್ಟ್‌ಗೆ ಅರುಹಿದೆ.

‘ರಾಜ್ಯದಲ್ಲಿ ಆನೆಗಳು ಅಸಹಜ ಸಾವಿಗೆ ಈಡಾಗುತ್ತಿವೆ’ ಎಂಬ ಸುದ್ದಿ ಮಾಧ್ಯಮಗಳ ವರದಿ ಆಧರಿಸಿ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ADVERTISEMENT

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಕಿರಣ್ ವಿ.ರೋಣ ಅವರು ಈ ಕುರಿತಂತೆ ನ್ಯಾಯಪೀಠಕ್ಕೆ ವಸ್ತುಸ್ಥಿತಿ ವರದಿ ಸಲ್ಲಿಸಿ, ‘ಅಗತ್ಯ ಕ್ರಮ ಕೈಗೊಳ್ಳುವಂತೆ ಎಲ್ಲಾ ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಅರಣ್ಯ ಇಲಾಖೆಯಿಂದ ಸಾಕಷ್ಟು ಬಾರಿ ಪತ್ರ ಬರೆಯಲಾಗಿದೆ. ಆದರೆ, ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಮತ್ತು ನಿರ್ವಹಣೆಯ ಕೆಲಸವನ್ನೂ ಆರಂಭಿಸಿಲ್ಲ’ ಎಂದು ಆಕ್ಷೇಪಿಸಿದರು.

ವರದಿಯಲ್ಲಿ ಏನಿದೆ?: ‘ಆನೆಗಳನ್ನು ಅರಣ್ಯದಿಂದ ಹೊರಬರದಂತೆ ನಿಯಂತ್ರಿಸಲು ಹಳೆಯ ರೈಲ್ವೆ ಕಂಬಿಗಳಿಂದ ಬ್ಯಾರಿಕೇಡ್ ನಿರ್ಮಿಸಲಾಗಿದೆ. ಕ್ಯಾಂಪ್‌ಗಳಲ್ಲಿ ಕಾಡಾನೆಗಳನ್ನು ತಂದು ತರಬೇತಿ ನೀಡಲಾಗುತ್ತಿದೆ. ಹಾವಳಿಗೆ ನಿಗಾ ವಹಿಸಲು ಕೇಂದ್ರೀಕೃತ ವ್ಯವಸ್ಥೆ ರೂಪಿಸಲಾಗಿದ್ದು, ಈ ಮೂಲಕ ಡ್ಯಾಷ್ ಬೋರ್ಡ್‌ನಲ್ಲಿ ಯಾರು ಬೇಕಾದರೂ ಆನ್‌ಲೈನ್‌ನಲ್ಲಿ ಸ್ಥಳೀಯರಿಗೆ ಎಚ್ಚರಿಕೆ ನೀಡಬಹುದಾಗಿದೆ’ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸೋಲಾರ್‌ ಫೆನ್ಸಿಂಗ್‌: ‘ಆನೆಗಳೂ ಸೇರಿದಂತೆ ಇತರೆ ವನ್ಯಜೀವಿಗಳ ರಕ್ಷಣೆಗಾಗಿ ಅರಣ್ಯ ಭಾಗದ ಸುತ್ತಲೂ ಮೂರು ಮೀಟರ್‌ನಷ್ಟು ಆಳವಾದ 2,420 ಕಂದಕಗಳನ್ನು ನಿರ್ಮಿಸಲಾಗಿದೆ. ಒಟ್ಟು 3,426 ಕಿಲೋ ಮೀಟರ್ ಉದ್ದದ ಸೋಲಾರ್‌ ಫೆನ್ಸಿಂಗ್ ಹಾಕಲಾಗಿದೆ. ಪ್ರತಿ ಒಂದು ಕಿಲೋ ಮೀಟರ್‌ಗೆ ಸುಮಾರು ₹1.6 ಕೋಟಿ ವೆಚ್ಚವಾಗುತ್ತಿದೆ. ಆನೆಗಳು ನಾಡಿಗೆ ಬರದಂತೆ ಹಾಗೂ ಮಾನವ-ಆನೆ ಸಂಘರ್ಷ ತಡೆಯಲು ಕೊಡಗು, ಹಾಸನ, ಚಿಕ್ಕಮಗಳೂರು, ಮೈಸೂರು, ಚಾಮರಾಜನಗರ, ರಾಮನಗರ, ಬಂಡೀಪುರ ಮತ್ತು ಬನ್ನೇರುಘಟ್ಟ ಸೇರಿದಂತೆ 8 ಜಿಲ್ಲೆಗಳಲ್ಲಿ ಆನೆ ಕಾರ್ಯಪಡೆ ರಚನೆ ಮಾಡಲಾಗಿದೆ’ ಎಂದು ತಿಳಿಸಲಾಗಿದೆ.

ಕಳ್ಳಬೇಟೆಗೆ ತಡೆ: ‘ವನ್ಯಜೀವಿಗಳ ಕಳ್ಳಬೇಟೆ ತಡೆಗಾಗಿ ಶಿಬಿರಗಳನ್ನು ಪ್ರಾರಂಭಿಸಲಾಗಿದ್ದು ಇದಕ್ಕಾಗಿ 1,922 ಸಿಬ್ಬಂದಿ ನಿಗಾ ವಹಿಸಿದ್ದಾರೆ. ಆನೆಗಳ ವರ್ತನೆ ಮತ್ತು ಅವುಗಳ ಚಲನವಲನದ ಮೇಲೆ ನಿಗಾ ಇರಿಸಲು ರೇಡಿಯೊ ಕಾಲರ್ ಅಳವಡಿಸಲಾಗುತ್ತಿದ್ದು, ಆನೆ-ಮಾನವ ಸಂಘರ್ಷ ತಡೆಗಾಗಿ ಗಸ್ತು ತಿರುಗಲು 2,730 ಸಿಬ್ಬಂದಿ ನೇಮಕ ಮಾಡಲಾಗಿದೆ. ಆನೆಗಳ ಗ್ರಾಮ ಪ್ರವೇಶವನ್ನು ಸಾಕಷ್ಟು ಮುಂಚಿತವಾಗಿಯೇ ಅರಿಯಲು ಗಸ್ತು ಸಿಬ್ಬಂದಿ ನೇಮಕ ಮಾಡಲಾಗಿದೆ. ವನ್ಯಜೀವಿಗಳ ಆವಾಸ ಸ್ಥಾನ ಅಭಿವೃದ್ಧಿಗೊಳಿಸಲು ಹುಲ್ಲುಗಾವಲು, ಬಿದಿರು ಬೆಳೆಸಲು ಕ್ರಮ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಕೇರಳ, ತಮಿಳುನಾಡು ಮತ್ತು ಕರ್ನಾಟಕದ ಅಧಿಕಾರಿಗಳೊಂದಿಗೆ ಅಂತರರಾಜ್ಯ ಸಮಿತಿ ರಚಿಸಲಾಗಿದೆ’ ಎಂದು ವಿವರಿಸಲಾಗಿದೆ.

ನೋಟಿಸ್‌: ಕೆಲಕಾಲ ವಾದ ಆಲಿಸಿದ ನ್ಯಾಯಪೀಠ, ರಾಜ್ಯದ ಎಲ್ಲಾ ಎಸ್ಕಾಂಗಳನ್ನು ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿಸಲು ಆದೇಶಿಸಿತು. ಎಲ್ಲ ಎಸ್ಕಾಂಗಳಿಗೂ ನೋಟಿಸ್ ಜಾರಿಗೊಳಿಸಲು ಆದೇಶಿಸಿತು. ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿ ವಿಚಾರಣೆಯನ್ನು ಆಗಸ್ಟ್ 12ಕ್ಕೆ ಮುಂದೂಡಿತು.

ರಾಜ್ಯದಲ್ಲಿ ಆನೆಗಳ ಸಂತತಿ ಹೆಚ್ಚಳ
ವಿಚಾರಣೆ ವೇಳೆ ಪ್ರಕರಣದ ಅಮಿಕಸ್‌ ಕ್ಯೂರಿ ಹೈಕೋರ್ಟ್‌ನ ಹಿರಿಯ ವಕೀಲ ರಮೇಶ್ ಪುತ್ತಿಗೆ ಅವರು, ‘ದೇಶದಲ್ಲಿ 2023ರಲ್ಲಿ ನಡೆದ ಆನೆ ಗಣತಿ ಪ್ರಕಾರ 27 ಸಾವಿರ ಆನೆಗಳಿವೆ. ಇವುಗಳಲ್ಲಿ ಕರ್ನಾಟಕದಲ್ಲೇ 7 ಸಾವಿರದಷ್ಟಿವೆ. ರಾಜ್ಯದಲ್ಲಿ ಆನೆ ಸಂತತಿ ಹೆಚ್ಚಾಗಿದ್ದು, ಗಂಡಾನೆ ಮತ್ತು ಹೆಣ್ಣಾನೆಗಳು ಸಮಾನ ಸಂಖ್ಯೆಯಲ್ಲಿವೆ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.  ‘ವಯಸ್ಕ ಆನೆಗಳ ಸರಾಸರಿಯಲ್ಲಿ ಸಾಕಷ್ಟು ವ್ಯತ್ಯಾಸವಿದ್ದು, ಗಂಡಾನೆಗಳಿಗಿಂತಲೂ ಹೆಣ್ಣಾನೆಗಳ ಪ್ರಮಾಣ ಶೇ 50ರಷ್ಟು ಕಡಿಮೆ ಇದೆ. ಗಂಡಾನೆಗಳನ್ನು ಕೊಂದು; ದಂತ ಮತ್ತು ಮೂಳೆಗಳನ್ನು ಅಕ್ರಮ ವ್ಯಾಪಾರಕ್ಕೆ ಬಳಕೆ ಮಾಡಲಾಗುತ್ತಿದೆ’ ಎಂದರು. ‘ಅಶ್ವತ್ಥಾಮ ಆನೆ ಅನಾರೋಗ್ಯದಿಂದ ಮೃತಪಟ್ಟಿದೆ ಎಂದು ಹೇಳಲಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ಸೋಲಾರ್ ತಂತಿ ತಗುಲಿ ಸಾವಿಗೀಡಾಗಿದೆ ಎಂಬುದು ಗೊತ್ತಾಗಿದೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಸೋಲಾರ್ ವಿದ್ಯುತ್ ತಡೆಗೋಡೆ ಹಾಕವುದಕ್ಕೂ ನಿರ್ಬಂಧವಿದೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.