ADVERTISEMENT

Elephant Arjuna | ಒಂಟಿ ಸಲಗದ ದಾಳಿ: ‘ಅರ್ಜುನ’ ಸಾವು, ಮಾವುತರ ರೋಧನೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2023, 19:07 IST
Last Updated 4 ಡಿಸೆಂಬರ್ 2023, 19:07 IST
ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿಯ ದಬ್ಬಳಿಕಟ್ಟೆ ಸೋಮವಾರ ಮೃತಪಟ್ಟ ಆನೆ ‘ಅರ್ಜುನ‘ನ ಮೃತದೇಹವನ್ನು ತಬ್ಬಿಕೊಂಡು ಮಾವುತರು ರೋದಿಸಿದರು.
ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿಯ ದಬ್ಬಳಿಕಟ್ಟೆ ಸೋಮವಾರ ಮೃತಪಟ್ಟ ಆನೆ ‘ಅರ್ಜುನ‘ನ ಮೃತದೇಹವನ್ನು ತಬ್ಬಿಕೊಂಡು ಮಾವುತರು ರೋದಿಸಿದರು.   

ಹಾಸನ: ಮೈಸೂರು ದಸರಾ ಉತ್ಸವದಲ್ಲಿ 8 ಬಾರಿ ಅಂಬಾರಿ ಹೊತ್ತಿದ್ದ ಸಾಕಾನೆ ‘ಅರ್ಜುನ’, ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿಯ ದಬ್ಬಳಿಕಟ್ಟೆ ಅರಣ್ಯದಲ್ಲಿ ಸೋಮವಾರ ನಡೆದ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ, ಒಂಟಿ ಸಲಗದ ದಾಳಿಗೆ ಸಿಲುಕಿ ಸ್ಥಳದಲ್ಲಿಯೇ ಕೊನೆಯುಸಿರೆಳೆಯಿತು.

ಸೋಮವಾರ ‘ವಿಕ್ರಾಂತ್’ ಎಂಬ ಕಾಡಾನೆ ಸೆರೆಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ನೇತೃತ್ವದಲ್ಲಿ ‘ಅರ್ಜುನ’ ಸೇರಿ ಆರು ಸಾಕಾನೆಗಳನ್ನು ಮತ್ತೂರು ಗ್ರಾಮಕ್ಕೆ ಕರೆತಂದು ಕಾರ್ಯಾಚರಣೆ ಆರಂಭಿಸಲಾಗಿತ್ತು. ಆ ವೇಳೆ ದಬ್ಬಳಿ ಗ್ರಾಮ ಸಮೀಪದ ನೀರಕೊಲ್ಲಿ ಮಿನಿಡ್ಯಾಂ ನೀಲಗಿರಿ ತೋಪಿನಲ್ಲಿದ್ದ ಮೂರು ಗಂಡು, ಮೂರು ಹೆಣ್ಣು ಹಾಗೂ ಎರಡು ಮರಿಗಳಿರುವ ಕಾಡಾನೆ ಗುಂಪನ್ನು ಪತ್ತೆ ಹಚ್ಚಿದ ಸಿಬ್ಬಂದಿ, ಕಾರ್ಯಾಚರಣೆ ಆರಂಭಿಸಿದರು.

ಗುಂಪಿನಿಂದ ‘ವಿಕ್ರಾಂತ’ ಆನೆಯನ್ನು ಬೇರ್ಪಡಿಸಿ ಅರಿವಳಿಕೆ ಚುಚ್ಚುಮದ್ದು ನೀಡಲು ಮುಂದಾಗುತ್ತಿದ್ದಾಗಲೇ ಅದು ದಾಳಿ ಮಾಡಿತು. ಸಾಕಾನೆಗಳ ಜೊತೆಗೆ ಅದನ್ನು ಹಿಮ್ಮೆಟ್ಟಿಸಲು ಮಾವುತರು ಪ್ರಯತ್ನಿಸಿದರೂ ದಾಳಿ ತೀವ್ರವಾಗುತ್ತಿದ್ದಂತೆಯೇ ಐದು ಸಾಕಾನೆಗಳೂ ಧೈರ್ಯ ಸಾಲದೆ ಹಿಮ್ಮೆಟ್ಟಿದವು.

ADVERTISEMENT

‘ಅರ್ಜುನ’ ಮಾತ್ರ ಎದೆಗುಂದದೆ ಒಂಟಿಯಾಗಿಯೇ ಸೆಣಸಾಡುತ್ತಿತ್ತು. ಆ ಸೆಣೆಸಾಟದಲ್ಲಿ ‘ಅರ್ಜುನ’ನ ಮಾವುತ ವಿನು ಆಯತಪ್ಪಿ ಕೆಳಕ್ಕೆ ಬಿದ್ದರು. ಅದೇ ಕ್ಷಣದಲ್ಲಿ, ಬಲಿಷ್ಠವಾಗಿದ್ದ ‘ವಿಕ್ರಾಂತ್‌’ ತನ್ನ ಚೂಪಾದ ಕೋರೆಯಿಂದ ‘ಅರ್ಜುನ’ನ ಎಡಬದಿಯ ಕಿಬ್ಬೊಟ್ಟೆ ಭಾಗಕ್ಕೆ ತಿವಿಯಿತು. ತೀವ್ರವಾಗಿ ಗಾಯಗೊಂಡ ‘ಅರ್ಜುನ’ ಸ್ಥಳದಲ್ಲಿಯೇ ಮೃತಪಟ್ಟಿತು.

ಸುತ್ತುವರಿದ ಕಾಡಾನೆಗಳು: ‘ಅರ್ಜುನ’ ನೆಲಕ್ಕುರುಳುತ್ತಿದ್ದಂತೆಯೇ ಮಾವುತರು, ಅರಣ್ಯ ಇಲಾಖೆಯ ಸಿಬ್ಬಂದಿ ಧಾವಿಸಿ ಬಂದರು. ಅದೇ ಕ್ಷಣದಲ್ಲಿ, ಕಾಡಾನೆಗಳ ಹಿಂಡು ತಮ್ಮತ್ತಲೇ ನುಗ್ಗಿ ಬರುತ್ತಿದ್ದುದನ್ನು ಗಮನಿಸಿ ಮತ್ತೆ ದೂರ ಹೋದರು. ಆನೆಗಳು ‘ಅರ್ಜುನ’ನನ್ನು ಸುತ್ತುವರಿದು ಬಹುಕಾಲ ಅಲ್ಲಿಯೇ ನಿಂತಿದ್ದರಿಂದ ಅಲ್ಲಿಗೆ ಹೋಗಲಾಗದೆ ಅಸಹಾಯಕರಾಗಿ ನಿಂತಿದ್ದರು. 

‘ಕೊನೆಗೆ, ಗಾಳಿಯಲ್ಲಿ ಗುಂಡು ಹಾರಿಸಿ, ಆನೆಗಳನ್ನು ಚದುರಿಸಿದೆವು. ನಂತರ ಜೆಸಿಬಿ ತರಿಸಿ ಕಳೇಬರವನ್ನು ಸ್ಥಳಾಂತರಿಸಲಾಯಿತು. ಮಂಗಳವಾರ ಬೆಳಿಗ್ಗೆ 10.30 ರ ನಂತರ ಅಂತ್ಯಕ್ರಿಯೆ ನಡೆಸಲಾಗುವುದು’ ಎಂದು ಎಸಿಎಫ್‌ ಮಹಾದೇವ ತಿಳಿಸಿದರು.

ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿಯ ದಬ್ಬಳಿಕಟ್ಟೆ ಅರಣ್ಯದಲ್ಲಿ ಕಾಡಾನೆ ದಾಳಿಯಿಂದ ಮೃತಪಟ್ಟ ‘ಅರ್ಜುನ’. 

‘ಕಾಡಾನೆಗಳ ಹಿಂಡು ‘ಅರ್ಜುನ’ನನ್ನು ಸುತ್ತುವರಿದಿದ್ದರಿಂದ ನಮ್ಮ ಸಿಬ್ಬಂದಿಗೆ ಹತ್ತಿರ ಹೋಗಲು ಆಗಲಿಲ್ಲ. ಉಳಿದ ಸಾಕಾನೆಗಳು ಹಾಗೂ ಸಿಬ್ಬಂದಿಗೆ ಯಾವುದೇ ಅಪಾಯವಾಗಿಲ್ಲ’ ಎಂದು ಡಿಎಫ್‌ಒ ಮೋಹನ್‌ಕುಮಾರ್ ತಿಳಿಸಿದರು.

ಆಗಸ್ಟ್‌ 31 ರಂದು ಆಲೂರು ತಾಲ್ಲೂಕಿನ ಹಳ್ಳಿಯೂರು ಬಳಿ ನಡೆದಿದ್ದ ಕಾರ್ಯಾಚರಣೆ ವೇಳೆ, ಶಾರ್ಪ್‌ಶೂಟರ್‌ ವೆಂಕಟೇಶ್‌ ಆನೆ ದಾಳಿಯಿಂದ ಮೃತಪಟ್ಟಿದ್ದರು. ಈ ಬಾರಿಯ ಕಾರ್ಯಾಚರಣೆ ವೇಳೆ ‘ಅರ್ಜುನ’ ಆನೆಯೇ ಮೃತಪಟ್ಟಿದೆ.

‘ನಮ್ಮನ್ನೆಲ್ಲಾ ಕಾಪಾಡಿ ಮೃತಪಟ್ಟಿತು’
ಅರ್ಜುನನ ಸಾವು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಮಾವುತರಿಗೆ ತೀವ್ರ ನೋವು ಉಂಟು ಮಾಡಿತ್ತು. ‘ನಮ್ಮನ್ನೆಲ್ಲ ಕಾಪಾಡಿ ಅರ್ಜುನ ಮೃತಪಟ್ಟಿತು’ ಎಂದು ಅವರು ದುಃಖ ತೋಡಿಕೊಳ್ಳುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಕುಸಿದು ಬಿದ್ದ ಮಾವುತ: ಅರ್ಜುನನ ಸಾವಿನ ಆಘಾತವನ್ನು ತಡೆಯದೇ ಮಾವುತ ವಿನು ಕುಸಿದು ಬಿದ್ದರು. ಕೂಡಲೇ ಅವರಿಗೆ ನೀರು ಕುಡಿಸಿ ಉಪಚರಿಸಿದ ಸಿಬ್ಬಂದಿ ಆಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಕಳುಹಿಸಿದರು.
ಅರ್ಜುನನಿಗೆ ಅರಿವಳಿಕೆ ಚುಚ್ಚುಮದ್ದು ತಾಕಿತ್ತೇ?
‘ಕಾಡಾನೆಗೆ ನೀಡಬೇಕಿದ್ದ ಅರಿವಳಿಕೆ ಚುಚ್ಚುಮದ್ದು ಅರ್ಜುನನಿಗೆ ತಗುಲಿದ್ದರಿಂದ ಅದು ಕಾಡಾನೆ ಜೊತೆಗೆ ಸೆಣೆಸಲು ಸಾಧ್ಯವಾಗಲಿಲ್ಲ’ ಎನ್ನುವ ಆರೋಪವೂ ಕೇಳಿಬಂದಿದೆ. ಇದಕ್ಕೆ ಸ್ಪಷ್ಟನೆ ನೀಡಿರುವ ಎಸಿಎಫ್‌ ಮಹಾದೇವ ‘ಆನೆಯ ಕಳೇಬರವನ್ನು ಸ್ಥಳಾಂತರಿಸಿದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ಅದರಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ. ಅರಣ್ಯ ಇಲಾಖೆಯಿಂದ ಯಾವುದೇ ನಿರ್ಲಕ್ಷ್ಯವಾಗಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.