ADVERTISEMENT

ಆನೆಗಳಿಗೆ ಹರ್ಪಿಸ್‌ ಸೋಂಕು: ಆನೆ ಉತ್ಸವ ರದ್ದು

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2019, 20:00 IST
Last Updated 11 ಅಕ್ಟೋಬರ್ 2019, 20:00 IST
ಸಕ್ರೆಬೈಲು ಆನೆ ಬಿಡಾರ
ಸಕ್ರೆಬೈಲು ಆನೆ ಬಿಡಾರ   

ಶಿವಮೊಗ್ಗ: ಸಕ್ರೆಬೈಲಿನ ಕೆಲವು ಆನೆಗಳಿಗೆ ಮಾರಣಾಂತಿಕ ಹರ್ಪಿಸ್‌ಸೋಂಕುಹರಡಿರುವ ಭೀತಿಯ ಕಾರಣಪ್ರತಿವರ್ಷ ಹಮ್ಮಿಕೊಳ್ಳುತ್ತಿದ್ದ ‘ಆನೆಗಳ ಉತ್ಸವ’ ಈ ಬಾರಿ ರದ್ದು ಮಾಡಲಾಗಿದೆ.

1964ರಲ್ಲಿ ಸಕ್ರೆಬೈಲು ಆನೆ ಬಿಡಾರ ಸ್ಥಾಪನೆಯಾದ ನಂತರ ಪ್ರತಿ ವರ್ಷ ವನ್ಯಜೀವಿ ಸಪ್ತಾಹದ ಅಂಗವಾಗಿ ಈ ಉತ್ಸವ ಹಮ್ಮಿಕೊಳ್ಳಲಾಗುತ್ತಿತ್ತು. ಬಿಡಾರದ ಆನೆಗಳು ಕ್ರಿಕೆಟ್‌, ಫುಟ್‌ಬಾಲ್, ಬಾಳೆಹಣ್ಣು, ಕಬ್ಬು ತಿನ್ನುವ ಸ್ಪರ್ಧೆ, ಓಟದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದವು. ಸಾವಿರಾರು ಪ್ರೇಕ್ಷಕರು ಆನೆಗಳ ಪ್ರತಿಭೆಗೆ ಮಾರು ಹೋಗುತ್ತಿದ್ದರು.

ಸಾಮಾನ್ಯವಾಗಿ ಅಕ್ಟೋಬರ್‌ನಲ್ಲಿ ನಡೆಯುವ ಆನೆಗಳ ಉತ್ಸವಕ್ಕೂ ಎರಡು ತಿಂಗಳ ಮೊದಲೇ ತಾಲೀಮು ನಡೆಸಲಾಗುತ್ತದೆ. ವೈರಸ್‌ ಹರಡಿರುವ ಭೀತಿಯ ಕಾರಣ ಈ ಬಾರಿ ತಾಲೀಮು ನಡೆಸಿಲ್ಲ. ಅಲ್ಲದೇ ಬಿಡಾರದಲ್ಲಿರುವ 23 ಆನೆಗಳಲ್ಲಿ 10ನ್ನು ಸುರಕ್ಷತೆಯ ದೃಷ್ಟಿಯಿಂದ 8 ಕಿ.ಮೀ ದೂರದ ಶೆಟ್ಟಿಹಳ್ಳಿ ಅಭಯಾರಣ್ಯದ ಹಾಯ್‌ಹೊಳೆ ಜಲಾಶಯ ಸಮೀಪದ ನಂದಹಳ್ಳಿ ಹೊಂಡದ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.

ADVERTISEMENT

ಮನುಷ್ಯರಲ್ಲಿ ಲೈಂಗಿಕವಾಗಿ ಹರಡುವ ಈ ರೋಗ ಆನೆಗಳಲ್ಲಿ ಹೇಗೆ ಹರಡುತ್ತದೆ ಎನ್ನುವ ಅಂಶ ಪತ್ತೆಹಚ್ಚಲು ಇದುವರೆಗೂ ಸಾಧ್ಯವಾಗಿಲ್ಲ. ಪ್ರಾಣಿಗಳಲ್ಲಿ ಕಾಣಿಸಿಕೊಳ್ಳುವ ಈ ವೈರಸ್‌ 7 ವಿಧಗಳಲ್ಲಿ ಇರುತ್ತದೆ. ಮೊದಲ ಬಾರಿ ಅಮೆರಿಕದಲ್ಲಿ 1995ರಲ್ಲಿ ಕಾಣಿಸಿಕೊಂಡಿತ್ತು. ಭಾರತದಲ್ಲಿ ಮಧ್ಯಪ್ರದೇಶ, ಒಡಿಶಾದ ಮೃಗಾಲಯಗಳಲ್ಲಿ ಪತ್ತೆಯಾಗಿತ್ತು. ರಾಜ್ಯದಲ್ಲಿ ಕಾಣಿಸಿಕೊಂಡಿರುವುದು ಇದೇ ಮೊದಲು. ಎರಡು ತಿಂಗಳ ಹಿಂದೆ ಮೃತಪಟ್ಟಿದ್ದ ಆನೆ ನಾಗಣ್ಣನ ಮೃತದೇಹದ ಮಾದರಿ ಪರೀಕ್ಷೆಗೆ ಒಳಪಡಿಸಿದ ನಂತರ ಅದು ಹರ್ಪಿಸ್‌ ವೈರಸ್‌ನಿಂದ ಮೃತಪಟ್ಟಿರುವುದು ದೃಢಪಟ್ಟಿತ್ತು. ಹಾಗಾಗಿ, ಅರಣ್ಯಾಧಿಕಾರಿಗಳು ಮುಂಜಾಗ್ರತಾ ಕ್ರಮಕೈಗೊಂಡಿದ್ದಾರೆ.

‘ಸೋಂಕು ತಗುಲಿದ ಆನೆಗಳು ದಿಢೀರ್ ಮಂಕಾಗುತ್ತವೆ. ಓಡಾಟ ನಿಲ್ಲಿಸುತ್ತವೆ. ಚರ್ಮ ಸುಕ್ಕುಗಟ್ಟುತ್ತದೆ. ಭೇದಿ, ರಕ್ತಭೇದಿಯಾಗಿ ತ್ರಾಣ ಕಳೆದುಕೊಳ್ಳುತ್ತವೆ. ಆಹಾರ ಸ್ವೀಕರಿಸುವುದಿಲ್ಲ. ಲಕ್ಷಣ ಕಾಣಿಸಿಕೊಂಡ ಎರಡು ಮೂರು ದಿನಗಳಲ್ಲಿ ಸಾಯುತ್ತವೆ. ವಯಸ್ಸಾದ, ಮರಿಯಾನೆಗಳು ಈ ರೋಗಕ್ಕೆ ಬೇಗನೆ ತುತ್ತಾಗುತ್ತವೆ. ಇದಕ್ಕೆ ಖಚಿತ ಔಷಧ ಇಲ್ಲ. ಮುಂಜಾಗ್ರತಾ ಕ್ರಮವಾಗಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಮೂಲಕ ಅಪಾಯದಿಂದ ಪಾರು ಮಾಡಬಹುದು’ ಎನ್ನುತ್ತಾರೆ ಬಿಡಾರದ ವನ್ಯಜೀವಿ ವೈದ್ಯಾಧಿಕಾರಿ ಡಾ.ವಿನಯ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.