ADVERTISEMENT

‘ಎಲಿವೇಟ್‌- 2024’ರಡಿ ₹ 50 ಲಕ್ಷದವರೆಗೆ ಅನುದಾನ: ಪ್ರಿಯಾಂಕ್

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2024, 16:03 IST
Last Updated 29 ಅಕ್ಟೋಬರ್ 2024, 16:03 IST
ಪ್ರಿಯಾಂಕ್‌ ಖರ್ಗೆ
ಪ್ರಿಯಾಂಕ್‌ ಖರ್ಗೆ   

ಬೆಂಗಳೂರು: ‘ಹೊಸ ನಾವೀನ್ಯತೆ, ಆವಿಷ್ಕಾರಗಳಿಗೆ ಉತ್ತೇಜನ ನೀಡುವ ಸಲುವಾಗಿ ನವೋದ್ಯಮಗಳಿಗೆ ಗರಿಷ್ಠ ₹ 50 ಲಕ್ಷದವರೆಗೆ ಅನುದಾನ ನೀಡುವ ‘ಎಲಿವೇಟ್‌- 2024’ರಡಿ ಅನುದಾನಕ್ಕೆ ಅರ್ಜಿ ಸ್ವೀಕಾರ ಆರಂಭವಾಗಿದೆ’ ಎಂದು ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ನ. 29ರ ಸಂಜೆ 5ರವರೆಗೆ ಅರ್ಜಿ ಸಲ್ಲಿಸಬಹುದು. ನಾವೀನ್ಯತೆ, ಆವಿಷ್ಕಾರದ ತೀವ್ರತೆ ಆಧರಿಸಿ ಅನುದಾನ ಗೊತ್ತುಪಡಿಸಲಾಗುವುದು’ ಎಂದರು.

‘2016ರಲ್ಲಿ ಆರಂಭಿಸಿದ ಎಲಿವೇಟ್‌ ಉತ್ತೇಜಕ ಕಾರ್ಯಕ್ರಮದಡಿ ಈವರೆಗೆ 983 ಸ್ಟಾರ್ಟ್‌ಅಪ್‌ಗಳಿಗೆ ₹ 224.06 ಕೋಟಿ ಅನುದಾನ ನೀಡಲಾಗಿದೆ. ಆ ಪೈಕಿ, ದ್ವಿತೀಯ ಮತ್ತು ತೃತೀಯ ಹಂತದ ನಗರಗಳ ನವೋದ್ಯಮಗಳ ಪಾಲು ಶೇ 32ರಷ್ಟಿದ್ದರೆ, ಮಹಿಳೆಯರೇ ನೇತೃತ್ವ ವಹಿಸಿರುವ ಇಲ್ಲವೇ ಪಾಲುದಾರಿಕೆಯ ನವೋದ್ಯಮಗಳ ಪ್ರಮಾಣ ಶೇ 28ರಷ್ಟಿರುವುದು ವಿಶೇಷ’ ಎಂದರು.

ADVERTISEMENT

ಸರಾಸರಿ ₹ 28 ಲಕ್ಷ ನೆರವು: ‘ಎಐ, ರೊಬೋಟಿಕ್ಸ್‌, ಡೀಪ್‌ ಸ್ಪೇಸ್‌, ಬ್ಲಾಕ್‌ ಚೈನ್‌, ಸ್ಪೇಸ್‌ ಟೆಕ್‌ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೊಸ ಪ್ರಯೋಗ, ಪರಿಕಲ್ಪನೆಗೆ ಆರ್ಥಿಕ ಉತ್ತೇಜನ ನೀಡಲಾಗುತ್ತದೆ. ನೆರವು ಪಡೆಯಲಿಚ್ಛಿಸುವ ನವೋದ್ಯಮಗಳು ಕರ್ನಾಟಕದಲ್ಲಿ ನೋಂದಣಿ ಆಗಿರಬೇಕು. ಕುಡಿಯುವ ನೀರು, ಘನ ತ್ಯಾಜ್ಯ ನಿರ್ವಹಣೆ, ಕೊಳಚೆ ನೀರು ಸಂಸ್ಕರಣೆಯಂತಹ ಸಮುದಾಯ ಅಭಿವೃದ್ಧಿಗೆ ಪೂರಕ ಚಿಂತನೆಯ ಪರಿಹಾರ, ಸುಧಾರಿತ ಸೇವೆ ಕೇಂದ್ರಿತ ನವೋದ್ಯಮಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು. ನವೋದ್ಯಮಗಳಿಗೆ ಸರಾಸರಿ ₹ 28 ಲಕ್ಷ ನೆರವು ಸಿಗಲಿದೆ’ ಎಂದರು.

ಕರ್ನಾಟಕ ಎಕ್ಸಲರೇಷನ್‌ ನೆಟ್‌ವರ್ಕ್‌: ‘ಬೆಳವಣಿಗೆ ಹಂತದಲ್ಲಿರುವ ನವೋದ್ಯಮಗಳಿಗೆ ಉತ್ತೇಜನ ನೀಡಲು ‘ಕರ್ನಾಟಕ ಎಕ್ಸಲರೇಷನ್‌ ನೆಟ್‌ವರ್ಕ್‌’ (ಕೆಎಎನ್‌) ಕಾರ್ಯಕ್ರಮ ರೂಪಿಸಲಾಗಿದ್ದು, 3 ವರ್ಷಗಳಲ್ಲಿ 302 ನವೋದ್ಯಮಗಳಿಗೆ ಪ್ರಯೋಜನ ಕಲ್ಪಿಸುವ ಗುರಿಯಿದೆ. ಮೆಂಟರ್‌ಶಿಪ್‌, ಇನ್‌ಕ್ಯೂಬೇಷನ್‌ ಸೇರಿದಂತೆ ಇತರ ನೆರವು, ಸೌಲಭ್ಯ ಕಲ್ಪಿಸಲಾಗುವುದು’ ಎಂದರು.

ಕಿಯೋನಿಕ್ಸ್‌ ಅಧ್ಯಕ್ಷ ಶರತ್‌ ಬಚ್ಚೇಗೌಡ, ‘ಎಐ, ಮಿಷನ್‌ ಲರ್ನಿಂಗ್‌, ಬ್ಲಾಕ್‌ ಚೈನ್‌, ಐಒಟಿ, ರೊಬೋಟಿಕ್ಸ್‌ ಸೇರಿದಂತೆ ಸುಧಾರಿತ ತಂತ್ರಜ್ಞಾನ, ಆವಿಷ್ಕಾರಗಳಿಗೆ ಉತ್ತೇಜಿಸಲು ಕರ್ನಾಟಕ ಎಕ್ಸಲರೇಷನ್‌ ನೆಟ್‌ವರ್ಕ್‌ ಕಾರ್ಯಕ್ರಮ ರೂಪಿಸಲಾಗಿದೆ’ ಎಂದರು.

ಬಿಟಿಎಸ್‌ಗೆ ಆ್ಯಪ್‌: ನ.19ರಿಂದ 21ರವರೆಗೆ ನಡೆಯಲಿರುವ ‘ಬೆಂಗಳೂರು ಟೆಕ್‌ ಸಮ್ಮಿಟ್‌’ (ಬಿಟಿಎಸ್‌) ಕುರಿತಂತೆ ಸಮಗ್ರ ಮಾಹಿತಿಯ ಆ್ಯಪ್‌ಗೆ ‌ಪ್ರಿಯಾಂಕ್‌ ಖರ್ಗೆ ಚಾಲನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.