ಬೆಂಗಳೂರು: 'ಯಾವುದೇ ಕಾರಣಕ್ಕೂ ಅರ್ಹರಿಗೆ ಬಿಪಿಎಲ್ ಕಾರ್ಡ್ ತಪ್ಪಬಾರದು*. ಒಂದು ವೇಳೆ ಒಂದಿಬ್ಬರು ಅನರ್ಹರು ಸೇರಿಕೊಂಡರೂ ಪರವಾಗಿಲ್ಲ, ಅರ್ಹರಿಗೆ ತಪ್ಪಬಾರದು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕೆಪಿಸಿಸಿ ಕಚೇರಿಯ ಭಾರತ್ ಜೋಡೊ ಭವನದಲ್ಲಿ ಮಂಗಳವಾರ ನಡೆದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
'ಬಿಪಿಎಲ್, ಎಪಿಎಲ್ ಅಂದರೇನು ? ಬಡತನ ರೇಖೆಗಿಂತ ಕೆಳಗಿರುವವರು, ಮೇಲಿರುವವರು ಎಂದು. ಬಡವರಿಗೆ ಬಿಪಿಎಲ್ ಕಾರ್ಡ್ ಬಿಟ್ಟು ಹೋಗಬಾರದು' ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಅವರಿಗೆ ಸೂಚಿಸಿದ ಮುಖ್ಯಮಂತ್ರಿ, 'ಶ್ರೀಮಂತರು, ಆದಾಯ ತೆರಿಗೆ ಕಟ್ಟುವವರು, ಸರ್ಕಾರಿ ನೌಕರರು ಬಿಪಿಎಲ್ ಗೆ ಅರ್ಹರಲ್ಲ. ಅವರಿಗೆ ಎಪಿಎಲ್ ಕೊಡಿ, ಅದಕ್ಕೂ ಕೆಲ ಸವಲತ್ತುಗಳಿವೆ' ಎಂದರು.
'ಯಾರಾದರೂ ಬಿಪಿಎಲ್ ನವರು ಇದ್ದರೆ ಅರ್ಜಿ ಹಾಕಿ. ಅಂತಹವರಿಗೆ ಮತ್ತೆ ಕಾರ್ಡ್ ಕೊಡುತ್ತೇವೆ. ಈ ವಿಚಾರದಲ್ಲಿ ಬಿಜೆಪಿಯವರಿಂದ ಪಾಠ ಕಲಿಯಬೇಕಾದ ಅಗತ್ಯವಿಲ್ಲ' ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, 'ಬ್ಯಾಂಕಿನ ರಾಷ್ಟ್ರೀಕರಣ ಮಾಡಿದ್ದು ಇಂದಿರಾ ಗಾಂಧಿಯವರು. ದೇಶದ ಬೆಳವಣಿಗೆಯಲ್ಲಿ ಅವರ ಪಾತ್ರ ಗಮನಾರ್ಹ. ಅವರು ಉಳುವವನೆ ಭೂಮಿಯ ಒಡೆಯ ಕಾನೂನು ತಂದರು. ಬಿಜೆಪಿ, ದಳದವರು ಯಾರೇ ಅಧಿಕಾರಕ್ಕೆ ಬಂದಿರಲಿ. ಆದರೆ, ಬದಲಾವಣೆ ಮಾಡುವ ಧೈರ್ಯ ಬೇರೆ ಯಾರಿಗೂ ಇಲ್ಲ' ಎಂದರು.
'ಇಂದಿರಾಗಾಂಧಿ ಬಗ್ಗೆ ಪುಸ್ತಕ ಬಿಡುಗಡೆ ಮಾಡಬೇಕು ಅಂದುಕೊಂಡಿದ್ದೆ. ಅದಕ್ಕೆ ರಾಹುಲ್ ಗಾಂಧಿ ಅವರ ಬಳಿ ಕಾಪಿ ರೈಟ್ ಪಡೆಯಬೇಕು. ಬೆಳಗಾವಿ ಅಧಿವೇಶನ ವೇಳೆ ಈ ಪುಸ್ತಕ ಬಿಡುಗಡೆ ಮಾಡುತ್ತೇನೆ' ಎಂದರು.
'ಮುಂದೆ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ. ನಮ್ಮತ್ರ ತಂತ್ರ, ಮಂತ್ರ, ಶಕ್ತಿ ಎಲ್ಲ ಇದೆ. ಯಾರು ಹೆದರಬೇಕಾದ್ದು ಏನೂ ಇಲ್ಲ. ಮುಂದೆ ಸಾಕಷ್ಟು ಕಾರ್ಯಕ್ರಮಗಳನ್ನು ಕೊಡುತ್ತೇವೆ' ಎಂದರು.
ತಮ್ಮ ಭಾಷಣದಲ್ಲಿ ಬಿಪಿಎಲ್ ಕಾರ್ಡ್ ಗೊಂದಲ ವಿಚಾರ ಪ್ರಸ್ತಾಪಿಸಿದ ಕೆ. ಎಚ್. ಮುನಿಯಪ್ಪ. 'ಬಿಜೆಪಿಯವರು ಬಿಪಿಎಲ್ ಕಾರ್ಡ್ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಇವರಿಗೆ ಬಡವರಿಗೆ ಅಕ್ಕಿ ಕೊಡೋದು ಸಮಾಧಾನ ಇಲ್ಲ. ಶೇ 20- 25 ಬಿಪಿಎಲ್ ಗೆ ಅರ್ಹರಲ್ಲದವರು ಸೇರಿಕೊಂಡಿದ್ದಾರೆ. ಬಡವರಲ್ಲದವರು ಅರ್ಹರಲ್ಲದವರೂ ಕೂಡ ಸೇರಿಕೊಂಡಿದ್ದಾರೆ' ಎಂದರು.
'ರಾಜ್ಯದಲ್ಲಿ ಶೇ 80ರಷ್ಟು ಬಡವರ ಪ್ರಮಾಣ ಇದೆ. ಇದು ಸಾಧ್ಯವೇ? ರಾಜ್ಯದಲ್ಲಿ ಶೇ 80ರಷ್ಟು ಬಡವರು ಇದ್ದಾರಾ ? ಯಾವುದೇ ಕಾರಣಕ್ಕೂ ಬಿಪಿಎಲ್ ರದ್ದು ಮಾಡುವುದಿಲ್ಲ. ಇದಕ್ಕೆ ರಾಜಕೀಯ ಬೆರೆಸಿ ದೊಡ್ಡ ಗದ್ದಲ ಮಾಡ್ತಿದ್ದಾರೆ. ಯಾರು ಬಡತನ ರೇಖೆಗಿಂತ ಕೆಳಗಿದ್ದಾರೆ, ಮೇಲಿದ್ದಾರೆಂಬ ಸತ್ಯವಾದ ಮಾಹಿತಿ ಹೊರಗೆ ಬಿಡ್ತೇನೆ. ಬಿಪಿಎಲ್ ನವರು ಯಾರೂ ಕೂಡ ಭಯಪಡಬೇಕಿಲ್ಲ. ನಿಜವಾದ ಬಿಪಿಎಲ್ ನವರಿಗೆ ಯಾರಿಗೂ ತೊಂದರೆ ಆಗುವುದಿಲ್ಲ' ಎಂದರು.
ಬಡತನ ರೇಖೆಗಿಂತ ಕೆಳಗಿರುವವರ ಬಗ್ಗೆ ಸಂಪೂರ್ಣ ಮಾಹಿತಿ ಕೊಡುತ್ತೇನೆ. ಈ ವಾಸ್ತವಾಂಶವನ್ನ ಜನರಿಗೆ ತಿಳಿಸಬೇಕಿದೆ. ನಮ್ಮ ಪಕ್ಷದ ಅಧ್ಯಕ್ಷರಿಗೆ ಎಲ್ಲಾ ಮಾಹಿತಿ ಕೊಡುತ್ತೇನೆ. ಈ ಮಾಹಿತಿಯನ್ನು ಸಚಿವರು, ಜಿಲ್ಲಾಧ್ಯಕ್ಷರ ಮೂಲಕ ವಾಸ್ತವಾಂಶವನ್ನ ತಿಳಿಸಬೇಕು.ಬಿಜೆಪಿಯವರು ಈ ವಿಚಾರವಾಗಿ ರಾಜಕೀಯ ಮಾಡುತ್ತಿದ್ದಾರೆ. ಯಾರನ್ನಾದರೂ ಬಿಪಿಎಲ್ ನಿಂದ ಕೈಬಿಟ್ಟಿದ್ರೆ ಅಂತಹರಿಗೆ ಮತ್ತೆ ಕೊಡಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿನ್ನೆ ಮೀಟಿಂಗ್ ನಲ್ಲಿ ಖುದ್ದು ನನಗೆ ಹೇಳಿದ್ದಾರೆ' ಎಂದರು.
'ಬಡತನ ರೇಖೆಗಿಂತ ಕೆಳಗಿರುವವರನ್ನ ಬಿಪಿಎಲ್ ಕಾರ್ಡ್ ನಿಂದ ಕೈಬಿಡಬಾರದು ಎಂದೂ ಹೇಳಿದ್ದಾರೆ' ಎಂದರು.
ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮಾತನಾಡಿ, 'ಇಂದಿರಾ ಗಾಂಧಿ ರಾಷ್ಟೀಯ ನೀತಿ ತಂದಾಗ ಕಾಂಗ್ರೆಸ್ ನ ಕೆಲ ಪ್ರಮುಖ ನಾಯಕರೇ ವಿರೋಧಿಸಿದ್ದರು. ಈಗ ಐವತ್ತೈದು ವರ್ಷವಾದ ನಂತರ ರಾಹುಲ್ ಗಾಂಧಿ ತೀರ್ಮಾನ ತೆಗೆದುಕೊಂಡಿದ್ದಾರೆ. ಮೀಸಲಾತಿ ಪ್ರಮಾಣವನ್ನು ಶೇ 50ರಷ್ಟು ಹೆಚ್ಚಿಸಲು ರಾಹುಲ್ ಗಾಂಧಿ ನಿರ್ಧರಿಸಿದ್ದಾರೆ. ಅದನ್ನೂ ಕೂಡ ಕೆಲ ಕಾಂಗ್ರೆಸ್ ನವರು ವಿರೋಧ ಮಾಡುವವರು ಇರಬಹುದು ಎಂದರು.
'ಇಂದಿರಾ ಗಾಂಧಿ ಪಕ್ಷ ವಿಭಜನೆಯಾಗುತ್ತದೆ ಎಂದಾಗಲೂ ದಿಟ್ಟ ನಿಲುವು ತೆಗೆದುಕೊಂಡಿದ್ದರು. ದೇವರಾಜ ಅರಸು ಅಧ್ಯಕ್ಷರಾದ ನಂತರ ಕರ್ನಾಟಕದಲ್ಲೂ ಕಾಂಗ್ರೆಸ್ ಇಬ್ಭಾಗ ಆಯಿತು. ಆದರೆ ನಾವೀಗ ದಿಟ್ಟವಾಗಿ ನಿರ್ಣಯಗಳನ್ನು ತೆಗೆದುಕೊಳ್ಳಬೇಕು. ಇದಕ್ಕೆ ಇಂದಿರಾ ಗಾಂಧಿಯೇ ರೋಲ್ ಮಾಡೆಲ್ ಆಗಬೇಕು ಎಂದರು.
ಕಾಂಗ್ರೆಸ್ ಮುಖಂಡರಾದ ವೀರಪ್ಪ ಮೊಯಿಲಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ ಚಂದ್ರಶೇಖರ್, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸೌಮ್ಯಾ ರೆಡ್ಡಿ, ಮಾಜಿ ಸಚಿವರಾದ ರಾಣಿ ಸತೀಶ್, ಎಚ್ ಎಂ ರೇವಣ್ಣ, ಮತ್ತಿತರರು ಇದ್ದರು.
ನಾನಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಾಲತಿ ಶರ್ಮಾ, ಪ್ಯಾರೇಜಾನ್, ಮಮತಾ, ಸುಗಂಧಿ ಗಂಗಾಧರ್, ಸೋನು ವೇಣುಗೋಪಾಲ್ ಅವರಿಗೆ ಇಂದಿರಾಗಾಂಧಿ ಸ್ಮಾರಕ ಗೌರವ ಪ್ರಶಸ್ತಿಯನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.