ಬೆಂಗಳೂರು: ‘ದೇಶದಲ್ಲಿ ಭ್ರಾತೃತ್ವ ಇರಬೇಕು. ಹಿಂದೂ–ಮುಸ್ಲಿಮರು ಒಂದೇ ತಾಯಿ ಮಕ್ಕಳಂತೆ ಬದುಕಬೇಕು ಎಂದು ಹೇಳಿದ್ದೆ ಗಾಂಧೀಜಿ ಅವರ ತಪ್ಪೇ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.
ಮಹಾತ್ಮ ಗಾಂಧೀಜಿ ಅವರ ಮಾತು, ಬರಹ, ಚಿಂತನೆ ಕುರಿತ, ನಟರಾಜ್ ಹುಳಿಯಾರ್ ಸಂಪಾದಿತ ‘ಎಲ್ಲರ ಗಾಂಧೀಜಿ’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಹಿಂದೂ ಮಹಾಸಭಾದವರು ಗಾಂಧಿಯನ್ನು ಕೊಂದರು. ಹಂತಕರನ್ನು ಇಂದು ದೇಶಪ್ರೇಮಿಗಳು ಎಂದು ಬಿಂಬಿಸಲಾಗುತ್ತಿದೆ. ವಿಧಾನಸೌಧದಲ್ಲಿ ಅವರ ಭಾವಚಿತ್ರಗಳನ್ನು ಹಾಕುವ ಮಟ್ಟಕ್ಕೆ ಸರ್ಕಾರ ಹೋಗಿದೆ. ಇದು ಅತ್ಯಂತ ನೀಚತನದ ರಾಜಕಾರಣ’ ಎಂದರು.
‘ಸರ್ಕಾರದ ತಪ್ಪುಗಳ ಬಗ್ಗೆ ಧ್ವನಿ ಎತ್ತಿದರೆ ದೇಶದ್ರೋಹದ ಹಣೆಪಟ್ಟಿ ಕಟ್ಟಲಾಗುತ್ತಿದೆ. ಮೊಕದ್ದಮೆಗಳನ್ನು ದಾಖಲಿಸಿ ಜೈಲಿಗೆ ಕಳುಹಿಸಲಾಗುತ್ತಿದೆ. ಇಂತಹ ಮನಸ್ಥಿತಿಯಿಂದ ಹೊರ ಬರಲು ಗಾಂಧಿ, ಬುದ್ಧ, ಬಸವ ಮತ್ತು ಅಂಬೇಡ್ಕರ್ ಚಿಂತನೆಗಳೇ ಪರಿಹಾರ ಮಾರ್ಗಗಳು’ ಎಂದು ಪ್ರತಿಪಾದಿಸಿದರು.
‘ಸಂವಿಧಾನ ಜಾರಿಗೆ ಬಂದ ದಿನವೇ ಆರ್‌ಎಸ್‌ಎಸ್ ಅದನ್ನು ವಿರೋಧಿಸಿತ್ತು. ಮನುಸ್ಮೃತಿ ಮೇಲೆ ನಂಬಿಕೆ ಇಟ್ಟಿರುವವರು ಅಂಬೇಡ್ಕರ್ ನೀಡಿರುವ ಸಂವಿಧಾನಕ್ಕೆ ಗೌರವ ಕೊಡಲು ಸಾಧ್ಯವೇ ಇಲ್ಲ. ಆದ್ದರಿಂದಲೇ ಈಗ ಆಡಳಿತ ನಡೆಸುವವರು ಸಂವಿಧಾನಕ್ಕೆ ಬೆಲೆ ಇಲ್ಲದಂತೆ ಮಾಡಿದ್ದಾರೆ’ ಎಂದರು.
‘ಗಾಂಧಿ ಆದರ್ಶಗಳನ್ನು ಮರೆತರೆ ದೇಶವನ್ನು ಸರಿದಾರಿಯಲ್ಲಿ ಕೊಂಡೊಯ್ಯುವುದು ಕಷ್ಟ. ಅವರ ಚಿಂತನೆ, ಬರಹ ಮತ್ತು ಭಾಷಣಗಳು ಎಂದೆಂದಿಗೂ ಪ್ರಸ್ತುತ. ಅಧಿಕಾರದಲ್ಲಿ ಇರುವವರು ಇವರ ಚಿಂತನೆಗಳನ್ನು ಅರಿತು ನಡೆದರೆ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ’ ಎಂದು ಹೇಳಿದರು.
ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್, ಲೇಖಕ ನಟರಾಜ್ ಹುಳಿಯಾರ್ ಮಾತನಾಡಿದರು.
‘ಗಾಂಧೀಜಿಗಿಂತ ದೊಡ್ಡ ರಾಮಭಕ್ತರಿಲ್ಲ’
‘ಗಾಂಧೀಜಿ ಅವರಿಗಿಂತ ದೊಡ್ಡ ರಾಮಭಕ್ತ ಯಾರೂ ಇಲ್ಲ. ಆದರೆ, ಇಂದು ಡೋಂಗಿ ರಾಮಭಕ್ತರದ್ದೆ ಕಾಲ’ ಎಂದು ಸಾಹಿತಿ ಕೆ.ಮರಳುಸಿದ್ಧಪ್ಪ ಬೇಸರ ವ್ಯಕ್ತಪಡಿಸಿದರು.
ಗಾಂಧೀಜಿ 20ನೇ ಶತಮಾನದ ವಿಸ್ಮಯ, ಅವರಿಗೆ ಹೋಲಿಕೆ ಮಾಡುವ ಮತ್ತೊಂದು ವ್ಯಕ್ತಿತ್ವ ಇಲ್ಲ. ಪ್ರದರ್ಶನ ಪ್ರಿಯ ರಾಮಭಕ್ತರು ಈಗ ಕೋಟ್ಯಂತರ ಜನ ಇದ್ದಾರೆ. ರಾಮನನ್ನು ಸಂಪೂರ್ಣ ಅಪವ್ಯಾಖ್ಯಾನಗೊಳಿಸಿ ದೇಶವನ್ನು ಬೇರೆ ದಿಕ್ಕಿಗೆ ಕೊಂಡೊಯ್ಯುತ್ತಿದ್ದಾರೆ ಎಂದರು.
ಗಾಂಧಿ ಬರಹಗಳನ್ನು ಮತ್ತೆ ಮತ್ತೆ ಓದುವ ಮೂಲಕ ಪ್ರಸ್ತುತಗೊಳಿಸುವುದೇ ನಿಜವಾದ ದೇಶಭಕ್ತಿ. ಗಾಂಧಿಯನ್ನು ಜನ ಸ್ವೀಕಾರ ಮಾಡುತ್ತಿದ್ದಾರೆ ಎಂಬುದಕ್ಕೆ ನಟರಾಜ್ ಹುಳಿಯರ್ ಅವರ ‘ಎಲ್ಲರ ಗಾಂಧೀಜಿ’ ಪುಸ್ತಕ ಒಂದೇ ತಿಂಗಳಲ್ಲಿ ಮರುಮುದ್ರಣ ಆಗಿರುವುದೇ ಸಾಕ್ಷಿ ಎಂದು ಹೇಳಿದರು.
ಬಿಡುಗಡೆಯಾದ ಪುಸ್ತಕ
ಪುಸ್ತಕ: ಎಲ್ಲರ ಗಾಂಧೀಜಿ
ಲೇಖಕರು: ನಟರಾಜ್ ಹುಳಿಯಾರ್
ಪುಟ: 386
ಬೆಲೆ: ₹300
ಪ್ರಕಾಶಕರು: ಪಲ್ಲವ ಪ್ರಕಾಶನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.