ಬೆಂಗಳೂರು: ರಾಜ್ಯದ ಕೈಗಾರಿಕೆಗಳ ‘ಸಿ’ ಮತ್ತು ‘ಡಿ’ ಗ್ರೂಪ್ ಹುದ್ದೆಗಳಲ್ಲಿ ಕನ್ನಡಿಗರಿಗೆ ಶೇಕಡ 100ರಷ್ಟು ಮೀಸಲಾತಿ ನೀಡಲು ಮುಂದಾಗಿರುವ ಕಾರ್ಮಿಕ ಇಲಾಖೆ ಕ್ರಮ ಸ್ವಾಗತಾರ್ಹ. ಆದರೆ, ನಿರುದ್ಯೋಗಿ ಕನ್ನಡಿಗರನ್ನು ಗುರುತಿಸಿ, ನೇಮಕಾತಿಗೆ ಅಗತ್ಯ ಪ್ರಮಾಣಪತ್ರ ನೀಡುವ ಕೆಲಸ ಆಗಬೇಕು ಎಂದು ನಟಿ ಪೂಜಾ ಗಾಂಧಿ ಹೇಳಿದ್ದಾರೆ.
‘ಸಿ’ ಮತ್ತು ‘ಡಿ’ ಗ್ರೂಪ್‌ನ ಹುದ್ದೆಗಳಿಗೆ ಕನ್ನಡಿಗರನ್ನು ನೇಮಕ ಮಾಡಿಕೊಳ್ಳಲು ತೊಡಕುಗಳಿಲ್ಲದಿದ್ದರೂ, ಕಂಪನಿಗಳಿಗೆ ನೇಮಕಾತಿ ಪ್ರಕ್ರಿಯೆ ಸುಲಭವಾಗುವಂತೆ ಉದ್ಯೋಗಾಕಾಂಕ್ಷಿ ಕನ್ನಡಿಗರ ಪ್ರತ್ಯೇಕ ಪೋರ್ಟಲ್ ತೆರೆಯಬೇಕು. ಕನ್ನಡಿಗ ನಿರುದ್ಯೋಗಿ ಯುವಕ-ಯುವತಿಯರಿಗೆ ಕರುನಾಡಿಗರೆಂಬ ಪ್ರಮಾಣಪತ್ರ ಮತ್ತು ವಿಶಿಷ್ಟ ಸಂಖ್ಯೆ ನೀಡಬೇಕು. ವೆಬ್‌ಸೈಟ್‌ಗಳಲ್ಲಿ ನಿರುದ್ಯೋಗಿಗಳು ನಮೂದಿಸುವ ವಿಶಿಷ್ಟ ಸಂಖ್ಯೆಯ ಆಧಾರದಲ್ಲಿ ಕಂಪನಿಗಳು ನೇಮಕಾತಿ ಪ್ರಕ್ರಿಯೆ ನಡೆಸಬೇಕು ಎಂದಿದ್ದಾರೆ.
ಕರ್ನಾಟಕದಲ್ಲಿ 15 ವರ್ಷಗಳಿಗಿಂತ ಹೆಚ್ಚು ವಾಸವಾಗಿದ್ದು, ಕನ್ನಡವನ್ನು ಓದಲು ಮತ್ತು ಬರೆಯಲು ಕಲಿತಿದ್ದರೆ ಅವರನ್ನು ಕನ್ನಡಿಗರೆಂದು ಕಾನೂನು ಗುರುತಿಸುತ್ತದೆ. ಅಂಥವರಿಗೆ ಕನ್ನಡ ಓದಲು ಬರೆಯಲು ಬರುತ್ತದೆಯೇ ಎನ್ನುವ ಕುರಿತು ದೃಢೀಕರಿಸಬೇಕು. 10ನೇ ತರಗತಿಯ ಅಂಕಪಟ್ಟಿ ಅಥವಾ 15 ವರ್ಷಗಳಿಂದ ಕರ್ನಾಟಕದಲ್ಲಿ ವಾಸಿಸುತ್ತಿರುವ ಕುರಿತು ಸೇವಾಸಿಂಧು ಪೋರ್ಟಲ್, ನಾಡ ಕಚೇರಿ ಮೂಲಕ ಮಾಹಿತಿ ಪಡೆಯಬೇಕು. ವಿದ್ಯಾರ್ಹತೆ, ಸ್ಥಳ ಮತ್ತು ಇತರ ದಾಖಲೆಗಳನ್ನು ಒಂದೆಡೆ ಸಿಗುವಂತೆ ಮಾಡಬೇಕು. ಹೊರನಾಡ ಕನ್ನಡಿಗರಿಗೂ ಅವಕಾಶ ನೀಡಬೇಕು. ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಕಾರ್ಮಿಕ ಇಲಾಖೆಯ ನೂತನ ಪೋರ್ಟಲ್‌ನಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಮತ್ತು ಇತರ ಖಾಸಗಿ ಕಂಪನಿಗಳು ನೋಂದಾಯಿಸಿಕೊಳ್ಳಲು ಅವಕಾಶವಿದ್ದು, ಕನ್ನಡಿಗ ಉದ್ಯೋಗಾಕಾಂಕ್ಷಿಗಳ ಪಟ್ಟಿ ಅವರಿಗೆ ಲಭ್ಯವಾಗುವಂತೆ ಮಾಡಬೇಕು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.