ADVERTISEMENT

ಕಲಾಪ ಕೊನೆ | ಕಲಹ ಬಿರುಸು; ಬೀದಿ ಕದನಕ್ಕೆ ತೆರೆದ ದಾರಿ

ಒಂದು ದಿನ ಮೊದಲೇ ಅಧಿವೇಶನ ಮೊಟಕು

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 2:29 IST
Last Updated 26 ಜುಲೈ 2024, 2:29 IST
ಬಿಜೆಪಿ– ಜೆಡಿಎಸ್‌ ಸದಸ್ಯರು ವಿಧಾನ ಪರಿಷತ್‌ನಲ್ಲಿ ಗುರುವಾರ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ/ ಕೃಷ್ಣಕುಮಾರ್ ಪಿ.ಎಸ್.
ಬಿಜೆಪಿ– ಜೆಡಿಎಸ್‌ ಸದಸ್ಯರು ವಿಧಾನ ಪರಿಷತ್‌ನಲ್ಲಿ ಗುರುವಾರ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ/ ಕೃಷ್ಣಕುಮಾರ್ ಪಿ.ಎಸ್.   

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಗರದ ದೊಡ್ಡ ಸದ್ದು ವಿಧಾನಮಂಡಲ ಕಲಾಪವನ್ನು ಅಪ್ಪಳಿಸಿದ್ದು, ಪ್ರತಿಪಕ್ಷಗಳ ಅಬ್ಬರದಿಂದಾಗಿ ಒಂದು ದಿನ ಮೊದಲೇ ವಿಧಾನ ಮಂಡಲ ಅಧಿವೇಶನ ಮೊಟಕುಗೊಂಡಿದೆ. ಅದರ ಬೆನ್ನಲ್ಲೆ, ಬಿಜೆಪಿ– ಜೆಡಿಎಸ್‌ ಕೂಟ ಬೀದಿಗೆ ಇಳಿಯಲು ತಯಾರಿ ನಡೆಸಿದ್ದರೆ, ಕಾಂಗ್ರೆಸ್‌ ಕೂಡ ಎದಿರೇಟು ನೀಡಲು ಅಣಿಯಾಗಿದೆ.

ಬಿಜೆಪಿ– ಜೆಡಿಎಸ್‌ ನಾಯಕರು ಸರ್ಕಾರದ ವಿರುದ್ಧ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಅದಕ್ಕೆ ಪ್ರತಿಯಾಗಿ ಬಿಜೆಪಿಯ ಅಧಿಕಾರ ಅವಧಿಯ ಹಗರಣಗಳನ್ನು ಮುಂದಿಟ್ಟು, ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ, ದಲಿತ) ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಮತ್ತು ಪಕ್ಷದ ಕಾರ್ಯಕರ್ತರನ್ನು ಒಗ್ಗೂಡಿಸಿ ಮೈಸೂರಿನಿಂದ ಬೆಂಗಳೂರುವರೆಗೆ ಪಾದಯಾತ್ರೆ ನಡೆಸಲು ಕಾಂಗ್ರೆಸ್‌ ನಾಯಕರು ತಯಾರಿ ನಡೆಸಿದ್ದಾರೆ.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬ ಭಾಗಿಯಾಗಿರುವ ಮುಡಾ ಹಗರಣದ ಚರ್ಚೆಗೆ ಅವಕಾಶ ನೀಡಬೇಕು’ ಎಂದು ಆಗ್ರಹಿಸಿದ್ದ ವಿರೋಧ ಪಕ್ಷಗಳು, ನಿಲುವಳಿ ಸೂಚನೆ ಮಂಡಿಸಲು ಮುಂದಾಗಿದ್ದವು. ‘ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿರುವುದರಿಂದ ಚರ್ಚೆಗೆ ಅವಕಾಶ ಇಲ್ಲ’ ಎಂದು ಪ್ರತಿಪಾದಿಸಿದ ಸಭಾಪತಿ, ಸಭಾಧ್ಯಕ್ಷರು ನಿಲುವಳಿ ಮಂಡನೆಗೆ ಆಸ್ಪದವನ್ನೇ ನೀಡಲಿಲ್ಲ. ಇದನ್ನು ಪ್ರತಿಭಟಿಸಿ ಉಭಯ ಸದನಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು ಬುಧವಾರ ಸಂಜೆ ಅಹೋರಾತ್ರಿ ಧರಣಿ ನಡೆಸಿದರು.

ADVERTISEMENT

ಗುರುವಾರವೂ ಹಗರಣದ ವಿಚಾರ ಪ್ರಸ್ತಾಪಿಸಲು ಅವಕಾಶ ಸಿಗಲಿಲ್ಲ. ಇಡೀ ದಿನ ಎರಡೂ ಸದನಗಳಲ್ಲಿ ಗದ್ದಲ ಮುಂದುವರಿಯಿತು. ಈ ನಡುವೆಯೇ ನಾಲ್ಕು ನಿರ್ಣಯಗಳು ಮತ್ತು ಕೆಲವು ಮಸೂದೆಗಳಿಗೆ ಎರಡೂ ಸದನಗಳಲ್ಲಿ ಸರ್ಕಾರ ಅಂಗೀಕಾರ ಪಡೆದುಕೊಂಡಿತು. ಕಲಾಪ ಮುಂದೂಡಿಕೆ ಆಗುತ್ತಿದ್ದಂತೆ ಬಿಜೆಪಿ ಮತ್ತು ಜೆಡಿಎಸ್‌ ಶಾಸಕರು ರಾಜಭವನಕ್ಕೆ ತೆರಳಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರಿಗೆ ದೂರು ಸಲ್ಲಿಸಿದರು.

ರಾಜ್ಯಪಾಲರನ್ನು ಬುಧವಾರ ಸಂಜೆ ಭೇಟಿ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣ ಅಕ್ರಮ ವರ್ಗಾವಣೆ ಮತ್ತು ಮುಡಾ ಹಗರಣದ ಕುರಿತು ಮಾಹಿತಿ ಹಂಚಿಕೊಂಡಿದ್ದರು. 

ಧರಣಿ ಮಧ್ಯೆ ಕಲಾಪ

ಗುರುವಾರ ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ಬಿಜೆಪಿ– ಜೆಡಿಎಸ್‌ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದೆ ಧರಣಿ ಮುಂದುವರಿಸಿದರಲ್ಲದೇ, ಸರ್ಕಾರದ ವಿರುದ್ಧ ಕಿಡಿಕಾರಿದರು. 

ಈ ಹಂತದಲ್ಲಿ ಗದ್ದಲ ಜೋರಾಗಿದ್ದರಿಂದ ಕಲಾಪವನ್ನು ಸಭಾಧ್ಯಕ್ಷರು ಮುಂದೂಡಿದರು. ಅರ್ಧಗಂಟೆ ಬಳಿಕ ಕಲಾಪ ಮತ್ತೆ ಆರಂಭವಾದಾಗ, ಮಸೂದೆಗಳು ಹಾಗೂ ಪ್ರಮುಖ ನಿರ್ಣಯಗಳನ್ನು ಮಂಡಿಸಲು ಸಭಾಧ್ಯಕ್ಷರು ಅವಕಾಶ ನೀಡಿದರು. ಗಲಾಟೆ ಮಧ್ಯೆಯೇ ಮಸೂದೆ–ನಿರ್ಣಯಗಳಿಗೆ ಸರ್ಕಾರ ಅಂಗೀಕಾರವನ್ನೂ ಪಡೆಯಿತು. ಮಧ್ಯಾಹ್ನಕ್ಕೆ ಕಲಾಪವನ್ನು ಮುಂದೂಡಲಾಯಿತು. 

ಮಧ್ಯಾಹ್ನ ನಂತರ ಕಲಾಪ ಆರಂಭವಾಗುತ್ತಿದ್ದಂತೆಯೇ ಸಭಾಧ್ಯಕ್ಷರ ಪೀಠದ ಮುಂಭಾಗದಲ್ಲಿ ಜಮಾಯಿಸಿದ ಬಿಜೆಪಿ, ಜೆಡಿಎಸ್‌ ಸದಸ್ಯರು ಮುಖ್ಯಮಂತ್ರಿ ರಾಜೀನಾಮೆಗೆ ಪಟ್ಟು ಹಿಡಿದು ಘೋಷಣೆ ಕೂಗುವುದನ್ನು ಮುಂದುವರಿಸಿದರು. ಪರಿಷತ್ತಿನಲ್ಲೂ ವಿರೋಧ ಪಕ್ಷಗಳ ಸದಸ್ಯರು ಸಭಾಪತಿ ಪೀಠದ ಎದುರು ಧರಣಿ ನಡೆಸಿದರು. ಮುಖ್ಯಮಂತ್ರಿ ಸಮರ್ಥಿಸಿಕೊಳ್ಳಲು ಮುಂದಾದರೂ, ಅದಕ್ಕೆ ವಿಪಕ್ಷ ಸದಸ್ಯರು ಅವಕಾಶ ಕೊಡಲಿಲ್ಲ. ಗದ್ದಲದ ಮಧ್ಯೆಯೇ ಮಸೂದೆ–ನಿರ್ಣಯಗಳಿಗೆ ಅಂಗೀಕಾರ ನೀಡಲಾಯಿತು. ಉಭಯ ಸದನಗಳ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. 

ಬಿಜೆಪಿ ಅವಧಿಯಲ್ಲೇ ಪರ್ಯಾಯ ನಿವೇಶನ ಹಂಚಿಕೆ ಮಾಡಲಾಗಿದೆ. ಎಲ್ಲ ಸರಿ ಇದ್ದರೂ ವಿರೋಧ ಪಕ್ಷಗಳು ಉದ್ದೇಶಪೂರ್ವಕವಾಗಿ ನನ್ನನ್ನು ತೇಜೋವಧೆ ಮಾಡಲು ಈ ಪ್ರಕರಣವನ್ನು ಬಳಸಿಕೊಳ್ಳುತ್ತಿವೆ
ಸಿದ್ದರಾಮಯ್ಯ ಮುಖ್ಯಮಂತ್ರಿ

ಪಾದಯಾತ್ರೆಗೆ ಬಿಜೆಪಿ–ಜೆಡಿಎಸ್ ಅಣಿ...

ಮುಡಾ (ಮೈಸೂರು ಅಭಿವೃದ್ಧಿ ಪ್ರಾಧಿಕಾರ) ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಗಳನ್ನು ವಿರೋಧಿಸಿ ಬಿಜೆಪಿ ಮತ್ತು ಜೆಡಿಎಸ್‌ ಮುಂದಿನ ವಾರ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಲು ತೀರ್ಮಾನಿಸಿವೆ. ಈ ಸಂಬಂಧ ಇದೇ ಭಾನುವಾರ ಎರಡೂ ಪಕ್ಷಗಳ ಸಮನ್ವಯ ಸಭೆ ನಡೆಯಲಿದೆ. ಆ ಸಭೆಯಲ್ಲಿ ದಿನಾಂಕ ಮತ್ತು ಪಾದಯಾತ್ರೆಯ ಸ್ವರೂಪವನ್ನು ತೀರ್ಮಾನಿಸಲಿವೆ. ಸಭೆಯಲ್ಲಿ ಕೇಂದ್ರ ಸಚಿವ ಹಾಗೂ ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರೂ ಭಾಗವಹಿಸಲಿದ್ದಾರೆ. ವಿಧಾನಮಂಡಲದ ಕಲಾಪವನ್ನು ಅನಿರ್ದಿಷ್ಟಾವಧಿ ಮುಂದೂಡಿದ ಬಳಿಕ ಎರಡೂ ಪಕ್ಷಗಳ ನಾಯಕರು ವಿಧಾನಸೌಧದಿಂದ ರಾಜಭವನಕ್ಕೆ ಕಾಲ್ನಡಿಗೆಯಲ್ಲಿ ತೆರಳಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಗೆ ದೂರು ಸಲ್ಲಿಸಿದರು. ನಿಯೋಗದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಸುರೇಶ್‌ಬಾಬು  ಇದ್ದರು. ಎರಡೂ ಪಕ್ಷಗಳ ಶಾಸಕರ ಸಭೆ ನಡೆಸಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವ ತೀರ್ಮಾನವನ್ನು ನಾಯಕರು ಕೈಗೊಂಡರು. ರಾಜ್ಯಪಾಲರ ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ವಿಜಯೇಂದ್ರ ‘ಪಾದಯಾತ್ರೆ ಮತ್ತು ಮುಂದಿನ ಹೋರಾಟದ ಬಗ್ಗೆ ಮಿತ್ರ ಪಕ್ಷ ಜೆಡಿಎಸ್‌ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.