ನವದೆಹಲಿ: ಕಾಸರಗೋಡಿನ ಗೇರು ಪ್ಲಾಂಟೇಷನ್ ಕಾರ್ಪೊರೇಷನ್ (ಪಿಸಿಕೆ) ಕರ್ನಾಟಕದ ಗಡಿಯಂಚಿನಲ್ಲಿರುವ 2,060 ಹೆಕ್ಟೇರ್ ಗೇರು ತೋಟಕ್ಕೆ 1983–2001 ಅವಧಿಯಲ್ಲಿ 57 ಸಾವಿರ ಲೀಟರ್ ಎಂಡೋಸಲ್ಫಾನ್ ಕೀಟನಾಶಕ ಸಿಂಪಡಿಸಿತ್ತು. ಆದರೆ, ಈ ಪ್ರಕ್ರಿಯೆಯನ್ನು ಅವೈಜ್ಞಾನಿಕವಾಗಿ ನಡೆಸಲಾಗಿತ್ತು. ಸಾವಿರಾರು ಲೀಟರ್ ಕೀಟನಾಶಕವನ್ನು ಐದು ಪಾಳುಬಾವಿಗಳಲ್ಲಿ ಹೂತಿರುವ ಸಾಧ್ಯತೆ ಇದೆ. ದತ್ತಾಂಶಗಳು ಇದ್ದರೂ ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಎಂಡೋಸಲ್ಫಾನ್ ಸಂತ್ರಸ್ತರ ಮಾಹಿತಿ ನೀಡಿಲ್ಲ.
ಕರ್ನಾಟಕ ಗಡಿಯಲ್ಲಿರುವ ಮಿಂಚಿನಪದವು ಪ್ರದೇಶಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿ ಸಿದ್ಧಪಡಿಸಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯಲ್ಲಿರುವ ಸಾರಗಳಿವು. ಮಂಡಳಿಯು ಈ ವರದಿಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ದಕ್ಷಿಣ ವಲಯ ಪೀಠಕ್ಕೆ ಗುರುವಾರ ಸಲ್ಲಿಸಿದೆ.
ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ್ ಶಾನುಭಾಗ್ ಸಲ್ಲಿಸಿದ ದೂರು ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಪೀಠವು ಕೇಂದ್ರ ಸರ್ಕಾರ, ಕರ್ನಾಟಕ ಮತ್ತು ಕೇರಳ ಸರ್ಕಾರ, ಉಭಯ ರಾಜ್ಯಗಳ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ಹಾಗೂ ಇತರರಿಗೆ ನೋಟಿಸ್ ಜಾರಿ ಮಾಡಿತ್ತು. ಅಕ್ರಮವಾಗಿ ಹೂಳಲಾಗಿದ್ದ ಎಂಡೋಸಲ್ಫಾನ್ ತೆರವಿಗೆ ಕೈಗೊಂಡ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ನಿರ್ದೇಶಿಸಿತ್ತು.
ಈ ಹಿನ್ನೆಲೆಯಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ನಿರ್ದೇಶಕ ಜೆ.ಚಂದ್ರಬಾಬು ನೇತೃತ್ವದ ಅಧಿಕಾರಿಗಳ ತಂಡವು ಮಿಂಚಿನಪದವಿಗೆ ಭೇಟಿ ನೀಡಿತ್ತು. ಪ್ಲಾಂಟೇಷನ್‌ನ ಮಣ್ಣಿನ ಎರಡು ಮಾದರಿಗಳು ಹಾಗೂ ಅಂತರ್ಜಲದ ಎರಡು ಮಾದರಿಗಳನ್ನು ಹಾಗೂ ಈಶ್ವರಮಂಗಲದ ಅಂತರ್ಜಲದ ನೀರಿನ ಮಾದರಿಗಳನ್ನು ತಂಡವು ಸಂಗ್ರಹಿಸಿದೆ. ಈ ಕುರಿತ ವರದಿಯನ್ನು ಮೂರು ವಾರಗಳಲ್ಲಿ ಪೀಠಕ್ಕೆ ಸಲ್ಲಿಸುವುದಾಗಿ ತಿಳಿಸಿದೆ. ಈ ಕೀಟನಾಶಕ ಸಿಂಪಡಿಸಿದ್ದರಿಂದ ಪರಿಸರಕ್ಕೆ ಆಗಿರುವ ಹಾನಿ, ತ್ಯಾಜ್ಯದ ಅವೈಜ್ಞಾನಿಕ ವಿಲೇವಾರಿ ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಪೀಠವು ತಜ್ಞರ ಸಮಿತಿಯನ್ನು ರಚಿಸಬೇಕು ಎಂದು ಅಧಿಕಾರಿಗಳ ತಂಡವು ಶಿಫಾರಸು ಮಾಡಿದೆ.
ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯಲ್ಲೇನಿದೆ?
*ಗೇರು ತೋಟಕ್ಕೆ ಪ್ರತಿಸಲ 750 ಲೀಟರ್ ಕೀಟನಾಶಕ ಸಿಂಪಡಿಸಲಾಗಿತ್ತು. ಆ ಪ್ರಕಾರ, 278 ಬ್ಯಾರೆಲ್‌ಗಳ ಮೂಲಕ ಸಿಂಪಡಣೆ ಮಾಡಲಾಗಿತ್ತು. ಆದರೆ, 20 ಬ್ಯಾರೆಲ್‌ಗಳನ್ನು ಮಾತ್ರ ಕಾರ್ಪೊರೇಷನ್‌ನ ಅಧಿಕಾರಿಗಳು ತೋರಿಸಿದ್ದಾರೆ. ಉಳಿದ ಬ್ಯಾರೆಲ್‌ಗಳು ಏನಾದವು?
*ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಧಿಕಾರಿಗಳು ಕೀಟನಾಶಕದ ಬ್ಯಾರೆಲ್‌ಗಳ ವಿಲೇವಾರಿ ಹಾಗೂ ಉಳಿದಿರುವ ಕೀಟನಾಶಕಗಳು ಏನಾದವು ಎಂಬ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿಲ್ಲ.
*ಗೇರು ಪ್ಲಾಂಟೇಷನ್ ಕಾರ್ಪೊರೇಷನ್ ಗೇರು ತೋಟದಲ್ಲಿರುವ 27 ಬಾವಿಗಳ ನೀರಿನ ಗುಣಮಟ್ಟದ ಪರೀಕ್ಷೆಯನ್ನು ಇಲ್ಲಿಯವರೆಗೆ ನಡೆಸಿಲ್ಲ. ಹೀಗಾಗಿ, ವರ್ಷಕ್ಕೆ ಎರಡು ಬಾರಿ ತೋಟದಲ್ಲಿರುವ ಮಣ್ಣಿನ ಪರೀಕ್ಷೆ ನಡೆಯಬೇಕು. ಗೇರು ತೋಟದಲ್ಲಿರುವ 27 ಬಾವಿಗಳ ನೀರಿನ ಪರೀಕ್ಷೆಯನ್ನು ತಿಂಗಳಿಗೊಮ್ಮೆ ನಡೆಸಬೇಕು.
*ಗೇರು ತೋಟದಲ್ಲಿರುವ ಐದು ಬಾವಿಗಳನ್ನು ಮುಚ್ಚಲಾಗಿದೆ. ಉಳಿದ ಕೀಟನಾಶಕವನ್ನು ಈ ಬಾವಿಗಳಲ್ಲಿ ಹೂಳಿರುವ ಶಂಕೆ ಇದೆ. ಹೀಗಾಗಿ, ತಜ್ಞರ ಸಮಿತಿಯ ಮೇಲ್ವಿಚಾರಣೆಯಲ್ಲಿ ಬಾವಿಯನ್ನು 80ರಿಂದ 100 ಅಡಿಯ ವರೆಗೆ ಅಗೆದು ಮಾಲಿನ್ಯಕಾರಕಗಳು ಇವೆಯೇ ಎಂಬುದನ್ನು ಪತ್ತೆ ಹಚ್ಚಬೇಕು. ಒಂದು ವೇಳೆ ಮಾಲಿನ್ಯಕಾರಕ ಪತ್ತೆಯಾದರೆ ಪರಿಸರ ಪರಿಹಾರವನ್ನು ಕಾರ್ಪೊರೇಷನ್‌ನಿಂದ ವಸೂಲಿ ಮಾಡಬೇಕು.
*1986ರಿಂದ 2001ರ ಅವಧಿಯಲ್ಲಿ ಕೀಟನಾಶಕವನ್ನು ವೈಮಾನಿಕವಾಗಿ ಸಿಂಪಡಿಸುವ ಸಂದರ್ಭದಲ್ಲಿ ಮೈಕ್‌ಗಳ ಮೂಲಕ ಮಾಹಿತಿ ನೀಡಲಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ, ಗೇರುತೋಟದ ಸುತ್ತಮುತ್ತಲ ಪ್ರದೇಶದಲ್ಲಿ ವಾಯುಮಾಲಿನ್ಯ ನಿಯಂತ್ರಣ ವ್ಯವಸ್ಥೆಯನ್ನು ಅಳವಡಿಸಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.