ಬೆಂಗಳೂರು: ಕಿರಿಯ ಎಂಜಿನಿಯರ್‌ಗಳಿಗೆ ಬಡ್ತಿ ನೀಡಿ, ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಹುದ್ದೆಗಳಲ್ಲಿ ಶೇ 25ರಷ್ಟು ಹುದ್ದೆಗಳನ್ನು ಭರ್ತಿ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ 2011ರಲ್ಲಿ ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್ ರದ್ದುಪಡಿಸಿದೆ.
ಅಧಿಸೂಚನೆ ರದ್ದುಪಡಿಸುವಂತೆ ಕೋರಿ ಎಂ.ಆರ್. ರಂಗರಾಮು ಸೇರಿದಂತೆ ರಾಜ್ಯದ ವಿವಿಧ ನಗರಸಭೆ ಮತ್ತು ನಗರಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಏಳು ಮಂದಿ ಸಹಾಯಕ ಎಂಜಿನಿಯರ್‌ಗಳು ಸಲ್ಲಿಸಿದ್ದ ರಿಟ್ ಅರ್ಜಿಗಳನ್ನು ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿ ಈ ಕುರಿತಂತೆ ಆದೇಶಿಸಿದೆ.
ಕಿರಿಯ ಎಂಜಿನಿಯರ್‌ಗಳಿಗೆ ಬಡ್ತಿ ನೀಡಿ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಹುದ್ದೆ ಭರ್ತಿ ಮಾಡಲು ಅವಕಾಶವಾಗುವಂತೆ ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ (ಅಧಿಕಾರಿಗಳ ಮತ್ತು ಸಿಬ್ಬಂದಿ ಸಾಮಾನ್ಯ ನೇಮಕಾತಿ) ಅಧಿನಿಯಮಗಳು-2011ರ ಷೆಡ್ಯೂಲ್-3ಕ್ಕೆ ಮಾರ್ಪಾಡು ಮಾಡಿ ಸರ್ಕಾರವು 2011ರ ಏಪ್ರಿಲ್ 11ರಂದು ಅಧಿಸೂಚನೆ ಹೊರಡಿಸಿತ್ತು. ’ಈ ಅಧಿಸೂಚನೆ ಅಸಾಂವಿಧಾನಿಕ ಹಾಗೂ ಸಂವಿಧಾನದ 14 (ಸಮಾನತೆ) ಮತ್ತು 16ನೇ (ಸಮಾನ ಅವಕಾಶ) ವಿಧಿಗಳ ಸ್ಪಷ್ಟ ಉಲ್ಲಂಘನೆ‘ ಎಂದು ನ್ಯಾಯಪೀಠ ಘೋಷಿಸಿದೆ.
‘ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಹುದ್ದೆಗೆ ಫೀಡರ್ ಅಥವಾ ಕೆಳ ಶ್ರೇಣಿಯ ಅಧಿಕಾರಿಗಳು ಅಂದರೆ; ಸಹಾಯಕ ಎಂಜಿನಿಯರ್‌ಗಳಿಗೆ ಬಡ್ತಿ ನೀಡಿ ಹುದ್ದೆಯನ್ನು ಭರ್ತಿ ನೀಡಬೇಕು. ಈ ಪ್ರಕ್ರಿಯೆಯನ್ನು ಆದೇಶದ ಪ್ರತಿ ದೊರೆತ ಎಂಟು ವಾರಗಳ ಒಳಗೆ ಪೂರ್ಣಗೊಳಿಸಬೇಕು‘ ಎಂದು ಸರ್ಕಾರಕ್ಕೆ ನಿರ್ದೇಶಿಸಿದೆ. ಅರ್ಜಿದಾರರ ಪರ ಹಿರಿಯ ವಕೀಲ ಎಂ.ಎಸ್. ಭಾಗವತ್, ಕೆ.ಎನ್.ಫಣೀಂದ್ರ ಹಾಗೂ ವಕೀಲರಾದ ಎಂ.ಪಿ. ಶ್ರೀಕಾಂತ್, ಅನೀಶ್ ಆಚಾರ್ಯ ಮತ್ತು ಕೆ.ಸತೀಶ್ ಭಟ್ಟ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.