ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಮೊದಲ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪ್ರಸಕ್ತ ವರ್ಷದಿಂದಲೇ ಕನ್ನಡ ಮಾಧ್ಯಮದ ಪಠ್ಯಪುಸ್ತಕಗಳನ್ನೂ ನೀಡುತ್ತಿದೆ.
ಎಂಜಿನಿಯರಿಂಗ್‌ನಲ್ಲಿನ ಎಲ್ಲಾ ಶಾಖೆಗಳಿಗೆ ಮತ್ತು ಎಲ್ಲಾ ಶೀರ್ಷಿಕೆಗಳಿಗೆ ಮೊದಲ ಹಾಗೂ ಎರಡನೇ ಸೆಮಿಸ್ಟರ್‌ನ ಕನ್ನಡ ಆವೃತ್ತಿಯ ಅನುವಾದಿತ ಪುಸ್ತಕಗಳು ಸಿದ್ಧವಾಗಿದ್ದು, ವಿಶ್ವವಿದ್ಯಾಲಯದ ವೆಬ್‌ಸೈಟ್‌ಗೆ ಶೀಘ್ರದಲ್ಲೇ ಅಪ್‌ಲೋಡ್ ಮಾಡಲಾಗುತ್ತಿದೆ.
ಗ್ರಾಮೀಣ ಮತ್ತು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಪರಿಕಲ್ಪನೆಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಈ ಪುಸ್ತಕಗಳು ಸಹಾಯ ಮಾಡಲಿವೆ. ಮುಂದಿನ ಶೈಕ್ಷಣಿಕ ಸಾಲಿನಿಂದ ಮೂರು ಮತ್ತು ನಾಲ್ಕನೇ ಸೆಮಿಸ್ಟರ್‌ಗಳಿಗೂ ಕನ್ನಡಕ್ಕೆ ಅನುವಾದಿಸಿದ ಪುಸಕ್ತಗಳು ಲಭ್ಯವಾಗಲಿವೆ. ವೆಚ್ಚ ಅಧಿಕವಾಗುವ ಕಾರಣ ಹೆಚ್ಚಿನ ಪುಸ್ತಕಗಳನ್ನು ಮುದ್ರಣ ಮಾಡುತ್ತಿಲ್ಲ. ಅಗತ್ಯವಿದ್ದವರು ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಪ್ರಾಧ್ಯಾಪಕರಿಗಷ್ಟೇ ಮುದ್ರಿತ ಪುಸ್ತಕಗಳನ್ನು ಒದಗಿಸಲಾಗುವುದು. ಕಾಲೇಜುಗಳು ಬಯಸಿದರೆ ಗ್ರಂಥಾಲಯಗಳಿಗೆ ಪ್ರತಿಗಳನ್ನು ನೀಡಲಾಗುವುದು ಎಂದು ಕುಲಪತಿ ವಿದ್ಯಾಶಂಕರ್ ಮಾಹಿತಿ ನೀಡಿದ್ದಾರೆ.
2020-21ನೇ ಶೈಕ್ಷಣಿಕ ವರ್ಷದಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರಾರಂಭವಾದ ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಒಲವು ತೋರಿರಲಿಲ್ಲ. ಈಗ ಕನ್ನಡ ಭಾಷಾಂತರದ ಪುಸ್ತಕಗಳನ್ನು ಒದಗಿಸುವ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.