ADVERTISEMENT

ಬೆಂಗಳೂರು, ಬೆಳಗಾವಿಗೆ ಅಧಿಕ ಶಾಲೆಗಳು

1,000 ಶಾಲೆಗಳಲ್ಲ್ರಿ ಆಂಗ್ಲ ಮಾಧ್ಯಮ–ಹೊರಬಿದ್ದ ಆದೇಶ

​ಪ್ರಜಾವಾಣಿ ವಾರ್ತೆ
Published 18 ಮೇ 2019, 19:46 IST
Last Updated 18 ಮೇ 2019, 19:46 IST
   

ಬೆಂಗಳೂರು: ರಾಜ್ಯದಲ್ಲಿಆಂಗ್ಲ ಮಾಧ್ಯಮ ಶಾಲೆಗಳ ಆರಂಭಕ್ಕೆ ಸರ್ಕಾರ ಕೊನೆಗೂ ಆದೇಶ ಹೊರಡಿಸಿದ್ದು, ಬೆಂಗಳೂರಿಗೆ 120 ಶಾಲೆಗಳು ಹಾಗೂ ಬೆಳಗಾವಿಗೆ 73 ಶಾಲೆಗಳು ದೊರೆತಿವೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ತಮ್ಮ ಬಜೆಟ್‌ ಭಾಷಣದಲ್ಲಿ 1 ಸಾವಿರ ಶಾಲೆಗಳನ್ನು ಆರಂಭಿಸುವುದಾಗಿ ಹೇಳಿದ್ದರೂ, 956 ಶಾಲೆಗಳ ಆರಂಭಕ್ಕೆ ಅನುಮತಿ ನೀಡಿದ್ದು, ಉಳಿದ 44 ಶಾಲೆಗಳ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಎಲ್ಲ ಶಾಲೆಗಳು ಈ ಶೈಕ್ಷಣಿಕ ಸಾಲಿನಿಂದಲೇ ಕಾರ್ಯಾರಂಭ ಮಾಡಲಿವೆ.

ಬೆಂಗಳೂರು ದಕ್ಷಿಣದಲ್ಲಿ 65 ಶಾಲೆ, ಬೆಂಗಳೂರು ಉತ್ತರದಲ್ಲಿ 55 ಶಾಲೆಗಳು (ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 120) ಇರಲಿದ್ದರೆ, ಕೊಡಗು ಜಿಲ್ಲೆಗೆ ಕನಿಷ್ಠ ಅಂದರೆ 8 ಶಾಲೆಗಳು ದೊರೆತಿವೆ.

ADVERTISEMENT

‘ಶಿಕ್ಷಣ ಇಲಾಖೆ ಒಟ್ಟು 2 ಸಾವಿರ ಶಾಲೆಗಳನ್ನು ಆಂಗ್ಲ ಮಾಧ್ಯಮ ಆರಂಭಕ್ಕೆ ಗುರುತಿಸಿತ್ತು. ಒಂದೊಂದು ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 4 ಶಾಲೆಗಳು ಇರಬೇಕು ಎಂಬ ನಿಯಮದಂತೆ ಶಾಲೆಗಳನ್ನು ಗುರುತಿಸಲಾಗಿದೆ. ಯಾವ ಜಿಲ್ಲೆಯಿಂದ ಅಧಿಕ ಬೇಡಿಕೆ ಬರುತ್ತದೆ ಎಂಬುದನ್ನು ನೋಡಿಕೊಂಡು ಉಳಿದ 44 ಶಾಲೆಗಳನ್ನು ಒದಗಿಸಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಬೆಂಗಳೂರಿನಲ್ಲಿ ನೆಲೆಸಿರುವ ಪೋಷಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಿಗೆ ಕಳುಹಿಸಲು ಹೆಚ್ಚು ಆಸಕ್ತಿಯಿಂದ ಇದ್ದಾರೆ. ಹೀಗಾಗಿ ಬೆಂಗಳೂರಿಗೆ ಅಧಿಕ ಶಾಲೆಗಳನ್ನು ಒದಗಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ತಯಾರಿ:ಸರ್ಕಾರ ಈಗಾಗಲೇ ಆಂಗ್ಲ ಮಾಧ್ಯಮ ಶಾಲೆ ಆರಂಭಕ್ಕೆ ಭಾರಿ ತಯಾರಿ ನಡೆಸಿದ್ದು, ಶಿಕ್ಷಕರಿಗೆ ಮೈಸೂರಿನ ಪ್ರಾದೇಶಿಕ ಇಂಗ್ಲಿಷ್‌ ಸಂಸ್ಥೆಯಲ್ಲಿ ತರಬೇತಿ ನೀಡಲಾಗಿದೆ. ‘ಶಿಕ್ಷಕರ ತರಬೇತಿ ಕೊನೆಗೊಂಡಿದೆ. ಗಣಿತ ಮತ್ತು ಪರಿಸರ ವಿಜ್ಞಾನ ವಿಷಯಗಳಲ್ಲಿ ಎನ್‌ಸಿಇಆರ್‌ಟಿ ಪಠ್ಯದ ಆಧಾರದಲ್ಲಿ ಈ ತರಬೇತಿ ನೀಡಲಾಗಿದ್ದು, ಪಠ್ಯಗಳು ಸಹ ಸಿದ್ಧವಾಗಿವೆ. ಇಲಾಖೆಯ ವೆಬ್‌ಸೈಟ್‌ನಲ್ಲಿ ಶಾಲೆಗಳ ವಿವರ ನೀಡಲಾಗುವುದು’ ಎಂದು ಪ್ರಾಥಮಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌.ಉಮಾಶಂಕರ್‌ ತಿಳಿಸಿದರು.

ಗಟ್ಟಿ ನಿಲುವು: ಕಳೆದ ಬಜೆಟ್‌ನಲ್ಲಿ ಮುಖ್ಯಮಂತ್ರಿ ಅವರು 1 ಸಾವಿರ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸುವುದಾಗಿ ತಿಳಿಸಿದ್ದರು. ಇದಕ್ಕೆ ತೀವ್ರ ಆಕ್ಷೇಪವೂ ವ್ಯಕ್ತವಾಗಿತ್ತು. ಧಾರವಾಡದಲ್ಲಿ ನಡೆದಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲೂ ಇದು ಚರ್ಚೆಯ ವಿಚಾರವಾಗಿತ್ತು. ಹೀಗಿದ್ದರೂ ಮುಖ್ಯಮಂತ್ರಿ ಅವರು ತಮ್ಮ ನಿಲುವನ್ನು ಗಟ್ಟಿಯಾಗಿ ಸಮರ್ಥಿಸಿಕೊಂಡಿದ್ದು,ಅದನ್ನು ಜಾರಿಗೆ ತಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.