ಬೆಂಗಳೂರು: ಸರ್ಕಾರ ಈ ವರ್ಷದಿಂದ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭಿಸಿದ್ದರಿಂದ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಬೇಡಿಕೆ ಕಡಿಮೆಯಾಗಿದೆ.
ಪ್ರತಿ ವರ್ಷ ಹೊಸದಾಗಿ ಶಾಲೆ ಆರಂಭಿಸಲು ಕೋರಿ 2 ಸಾವಿರಕ್ಕಿಂತ ಅಧಿಕ ಅರ್ಜಿ ಬರುತ್ತವೆ. ಆದರೆ ಈ ಬಾರಿ ಬಂದುದು 467 ಅರ್ಜಿಗಳು ಮಾತ್ರ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ದಾಖಲೆಗಳಿಂದ ತಿಳಿದು ಬಂದಿದೆ. 2018–19ರಲ್ಲಿ 2,429 ಅರ್ಜಿಗಳು ಬಂದಿದ್ದರೆ, 2017–18ರಲ್ಲಿ 2,292 ಅರ್ಜಿಗಳು ಬಂದಿದ್ದವು.
‘ಸರ್ಕಾರಿ ಶಾಲೆಯಲ್ಲೇ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳು ಹಾಗೂ ಆಂಗ್ಲ ಮಾಧ್ಯಮ ತರಗತಿಗಳನ್ನು ಸರ್ಕಾರಿ ಶಾಲೆಗಳಲ್ಲಿ ಆರಂಭಿಸಿದ್ದರಿಂದ ಈ ಶಾಲೆಗಳಲ್ಲಿನ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚಿದೆ. ಹೀಗಾಗಿ ಖಾಸಗಿ ಶಾಲೆಗಳ ಆರಂಭಕ್ಕೆ ಬೇಡಿಕೆ ಕಡಿಮೆಯಾಗುವಂತಾಗಿದೆ’ ಎಂದು ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದರು.
‘ಸರ್ಕಾರಿ ಶಾಲೆಯೊಂದರ ಆರಂಭಕ್ಕೆ ಸರ್ಕಾರ ಕೊನೆಯದಾಗಿ ಆದೇಶ ನೀಡಿದ್ದು2013–14ರಲ್ಲಿ. ಈ ಅವಧಿಯಲ್ಲಿ ಹಲವಾರು ಖಾಸಗಿ ಶಾಲೆಗಳು ತಲೆ ಎತ್ತಿವೆ. ಇಂದು19,645 ಖಾಸಗಿ ಅನುದಾನರಹಿತ ಶಾಲೆಗಳಲ್ಲಿ 45 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ’ ಎಂದರು.
ವಾರ್ಷಿಕ ಆಂಗ್ಲ ಮಾಧ್ಯಮ ಶಾಲೆಗಳ ಆರಂಭಕ್ಕೆ ಅನುಮತಿ ಕೋರಿ ಗರಿಷ್ಠ ಅರ್ಜಿ ಸಲ್ಲಿಸುವುದು ಬೆಂಗ ಳೂರು ದಕ್ಷಿಣ ಮತ್ತು ಉತ್ತರ ಜಿಲ್ಲೆಗಳು. ವಾರ್ಷಿಕ 450ಕ್ಕೂ ಅಧಿಕ ಅರ್ಜಿ ಸಲ್ಲಿಕೆಯಾಗುತ್ತಿದ್ದವು. ಈ ಬಾರಿ ಬೆಂಗಳೂರು ದಕ್ಷಿಣದಲ್ಲಿ 60 , ಉತ್ತರದಲ್ಲಿ 46 ಅರ್ಜಿ ಗಳಷ್ಟೇ ಬಂದಿವೆ. ಅತಿ ಕಡಿಮೆ ಎಂದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದು ಹಾಗೂ ಉಡುಪಿಯಲ್ಲಿ 2 ಅರ್ಜಿ ಬಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.