ಬೆಂಗಳೂರು: ಕರ್ನಾಟಕ ಸರ್ಕಾರ ಮುಂದೆ ಆದಾಯದ ಮೂಲ ಹೆಚ್ಚಿಸಲು ಆಲೋಚನೆ ಇದ್ದರೆ, ಸ್ಥಳೀಯ ಸಮರ್ಥರನ್ನೇ ಬಳಸಿಕೊಳ್ಳಬೇಕು ಎಂದು ಬಿಜೆಪಿಯ ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ ಸಲಹೆ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಲಹರ್ ಸಿಂಗ್ ಸಿರೋಯಾ, ದುಬಾರಿಯಾದ ವಿದೇಶಿ ಆಯ್ಕೆಯ ಅಗತ್ಯವಿಲ್ಲ. ರಾಜ್ಯದಲ್ಲೇ ಸಾಕಷ್ಟು ಪ್ರತಿಭೆಗಳು ಇದ್ದಾರೆ ಎಂದು ಹೇಳಿದ್ದಾರೆ.
'ಆದಾಯ ಮೂಲ ಹೆಚ್ಚಿಸಲು ಸಲಹೆ ಪಡೆಯುವುದಕ್ಕಾಗಿ ರಾಜ್ಯ ಸರ್ಕಾರ ಬಹುರಾಷ್ಟ್ರೀಯ ಕಂಪನಿಯೊಂದಕ್ಕೆ ಸುಮಾರು ₹10 ಕೋಟಿ ವ್ಯಯ ಮಾಡುತ್ತಿದೆ ಎಂದು ಮಾಧ್ಯಮದ ಮೂಲಕ ತಿಳಿದು ಬಂದಿದೆ. ಗ್ಯಾರಂಟಿ ಯೋಜನೆಗಳ ಜಾರಿಯ ಬಳಿಕ ರಾಜ್ಯದ ಅರ್ಥಿಕ ಸ್ಥಿತಿ ಅತ್ಯಂತ ಕೆಟ್ಟಿದೆ ಎಂದು ಇದರಿಂದ ಗೊತ್ತಾಗಿದೆ. ರಾಜ್ಯದ ಹಿತದೃಷ್ಟಿಯಿಂದ ಗ್ಯಾರಂಟಿಗಳನ್ನು ಹಿಂಪಡೆಯಲು ಕಾಂಗ್ರೆಸ್ ಸರ್ಕಾರ ಹಿಂಜರಿಯಬಾರದು. ಪ್ರತಿಷ್ಠೆಯ ಮೇಲೆ ಕಾಂಗ್ರೆಸ್ ಸರ್ಕಾರ ನಿಲ್ಲಬಾರದು' ಎಂದು ಅವರು ಹೇಳಿದ್ದಾರೆ.
'ರಾಜ್ಯ ಸರ್ಕಾರಕ್ಕೆ ಆದಾಯದ ಮೂಲ ಹೆಚ್ಚಿಸಲು ಸಲಹೆಗಳು ಬೇಕಿದ್ದರೆ, ಸ್ಥಳೀಯ ಸಮರ್ಥರನ್ನೇ ಬಳಸಿಕೊಳ್ಳಬಹುದಿತ್ತು. ಇಂತಹ ದುಬಾರಿ ಸಂಸ್ಥೆಗಳನ್ನು ಆಯ್ಕೆ ಮಾಡಬೇಕಿಲ್ಲ. ನಿವೃತ್ತ ಸಮರ್ಥ ಅಧಿಕಾರಿಗಳ ಸೇವೆ ಬಳಸಿಕೊಳ್ಳಬಹುದಿತ್ತು. ಅವರು ಉತ್ತಮ ಸಲಹೆಗಳನ್ನು ನೀಡುತ್ತಿದ್ದರು' ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.