ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳ ಸಮವಸ್ತ್ರಕ್ಕೆ ಕಳಪೆ ಬಟ್ಟೆ ಪೂರೈಕೆ ಮತ್ತು ಅದಕ್ಕೆ ₹117 ಕೋಟಿ ಹಣ ಪಾವತಿಸಿರುವ ಪ್ರಕರಣದ ಬಗ್ಗೆ ಇಲಾಖಾ ತನಿಖೆ ನಡೆಸಲು ಗುರುವಾರ ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ ಅವರು ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿ, ಇದೊಂದು ಗಂಭೀರ ಅವ್ಯವಹಾರವಾಗಿದ್ದು, ತನಿಖೆ ಅಗತ್ಯ ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು ಎಂದರು.
2022–23 ಮತ್ತು 2023–24ನೇ ಸಾಲಿಗೆ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ, ಶಿಕ್ಷಣ ಇಲಾಖೆಯಿಂದ ಮಕ್ಕಳಿಗೆ ಸಮವಸ್ತ್ರ ಸಿದ್ಧಪಡಿಸಲು ಬಟ್ಟೆಯನ್ನು ಪೂರೈಕೆ ಮಾಡಿತ್ತು. ಆದರೆ, ಪೂರೈಕೆ ಮಾಡಿದ ಬಟ್ಟೆ ಶೇ 90 ರಷ್ಟು ಕಳಪೆ ಗುಣಮಟ್ಟದ್ದಾಗಿತ್ತು. ಆದರೆ, ಈ ಬಟ್ಟೆ ಪೂರೈಕೆಗೆ ಪೂರ್ಣ ಪ್ರಮಾಣದಲ್ಲಿ ಹಣ ಪಾವತಿಸಲಾಗಿತ್ತು. ಕಳಪೆ ಬಟ್ಟೆ ಪೂರೈಕೆಗೆ ಯಾರು ಕಾರಣರು ಎಂಬುದನ್ನು ಪತ್ತೆ ಮಾಡಿ ಅಂತಹವರ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಪಾಟೀಲ ತಿಳಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೆಎಚ್‌ಡಿಸಿ ವ್ಯವಸ್ಥಾಪಕ ನಿರ್ದೇಶಕರನ್ನು ಅಮಾನತುಗೊಳಿಸಲಾಗಿದೆ ಎಂದರು.
2022–23ನೇ ಸಾಲಿಗೆ ಉತ್ತಮ ಗುಣಮಟ್ಟದ ಬಟ್ಟೆ ಪೂರೈಕೆ ಮಾಡಿದ ಸಮವಸ್ತ್ರಗಳ ಬಟ್ಟೆಗೆ ಮಾತ್ರ ಕೆಎಚ್‌ಡಿಸಿ ಸಂಸ್ಥೆಗೆ ಪಾವತಿಸಬೇಕಾಗಿರುವ ಬಾಕಿ ಮೊತ್ತ ₹14.48 ಕೋಟಿ ಬಿಡುಗಡೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. 2023–24ನೇ ಸಾಲಿಗೆ ಎರಡನೇ ಜೊತೆ ಕಳಪೆ ಗುಣಮಟ್ಟದ ಬಟ್ಟೆ ಪೂರೈಸಿದ್ದಕ್ಕಾಗಿ ವಿಳಂಬ ದಂಡ ಮತ್ತು ಶಿಕ್ಷಣ ಇಲಾಖೆ ತಡೆ ಹಿಡಿದಿದ್ದ ₹2.43 ಕೋಟಿಯನ್ನು ನೇಕಾರರ ಹಿತದೃಷ್ಟಿಯಿಂದ ಬಿಡುಗಡೆ ಮಾಡಲು ತೀರ್ಮಾನಿಸಲಾಯಿತು ಎಂದು ಹೇಳಿದರು.
2022–23ನೇ ಸಾಲಿನಲ್ಲಿ (2ನೇ ಜೊತೆ) ₹96.92 ಕೋಟಿ ವೆಚ್ಚದಲ್ಲಿ 134.05 ಲಕ್ಷ ಮೀಟರ್ ಬಟ್ಟೆಯನ್ನು ಎನ್‌ಸಿಸಿಎಫ್ ಮತ್ತು ಕೇಂದ್ರೀಯ ಭಂಡಾರದಿಂದ ಮೂಲಕ ಖರೀದಿಸಲಾಗಿತ್ತು. ಇದಕ್ಕೆ ₹86.89 ಕೋಟಿ ಪಾವತಿಸಲಾಗಿತ್ತು. ಇದರಲ್ಲಿ ವಿಳಂಬ ಸರಬರಾಜು ದಂಡದ ಮೊತ್ತ ₹3.81 ಕೋಟಿ ಸೇರಿತ್ತು. ಇದರಲ್ಲಿ ₹48.72 ಕೋಟಿ ಮೌಲ್ಯದ 69.78 ಲಕ್ಷ ಮೀಟರ್ ಬಟ್ಟೆ ಕಳಪೆಯಾಗಿತ್ತು. ₹10 ಕೋಟಿ ತಡೆ ಹಿಡಿಯಲಾಗಿದೆ ಎಂದರು.
ಅಲ್ಲದೇ, ಇದೇ ವರ್ಷ 1ನೇ ಜೊತೆ ಬಟ್ಟೆ ಖರೀದಿಗೆ ನೋಂದಾಯಿತ ನೇಕಾರರಿಂದ ₹22.40 ಕೋಟಿ ಮೌಲ್ಯದ ಬಟ್ಟೆ ಖರೀದಿಸಲಾಗಿತ್ತು. ಇದರಲ್ಲಿ ₹20.04 ಕೋಟಿ ಪಾವತಿ ಮಾಡಲಾಗಿತ್ತು. ₹2.35 ಕೋಟಿ ತಡೆ ಹಿಡಿಯಲಾಗಿತ್ತು ಎಂದರು.
2023–24 ರ ಸಾಲಿನಲ್ಲಿ 1ನೇ ಜೊತೆ ಬಟ್ಟೆಯನ್ನು ₹16.92 ಕೋಟಿ ವೆಚ್ಚದಲ್ಲಿ ನೇಕಾರರಿಂದ ಖರೀದಿಸಲಾಗಿತ್ತು. ಇದಕ್ಕೆ ₹4.80 ಕೋಟಿ ಪಾವತಿ ಮಾಡಲಾಗಿತ್ತು. ₹12.12 ಕೋಟಿ ತಡೆ ಹಿಡಿಯಲಾಗಿದೆ. ಇದೇ ಅವಧಿಯಲ್ಲಿ ಕೆಎಸ್‌ಟಿಐಡಿಸಿ ಮೂಲಕ ₹8 ಕೋಟಿ ವೆಚ್ಚದಲ್ಲಿ 10.47 ಲಕ್ಷ ಮೀಟರ್ ಬಟ್ಟೆ ಖರೀದಿಸಲಾಗಿತ್ತು. ₹5.63 ಕೋಟಿ ಪಾವತಿ ಮಾಡಲಾಗಿದೆ. ₹6.08 ಕೋಟಿ ಮೌಲ್ಯದ ಸುಮಾರು 8.66 ಲಕ್ಷ ಮೀಟರ್ ಬಟ್ಟೆ ಕಳಪೆಯಾಗಿತ್ತು. ₹2.43 ಕೋಟಿ ತಡೆ ಹಿಡಿಯಲಾಗಿದೆ ಎಂದು ಪಾಟೀಲ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.