ಆನವಟ್ಟಿ (ಶಿವಮೊಗ್ಗ ಜಿಲ್ಲೆ): ಇಲ್ಲಿನ ಇಬ್ಬರು ಸಹೋದರರು ಯಾವುದೇ ಹಣ್ಣನ್ನು ತಿಂದ ಮೇಲೆ ಬೀಜವನ್ನು ಎಲ್ಲೆಂದರಲ್ಲಿ ಬಿಸಾಡದೆ ಅವುಗಳನ್ನು ಸಂಗ್ರಹಿಸಿ, ಸಸಿ ಮಾಡಿ ಸಂಬಂಧಿಕರು ಹಾಗೂ ಶಾಲೆಗಳಿಗೆ ನೀಡುತ್ತಿದ್ದಾರೆ.
ಸಮೀಪದ ಎಣ್ಣೆಕೊಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿಕುಮಾರ್–ರೂಪಾ ದಂಪತಿಯ ಮಕ್ಕಳಾದ ರಿಷಬ್ ಹಾಗೂ ವಿಶಾಲ್ ಅವರು ಇಂತಹ ಕೆಲಸದಿಂದ ಮಾದರಿಯಾಗಿದ್ದಾರೆ. ಇವರು, ಆನವಟ್ಟಿಯ ಸ್ಯಾನ್ ಥೋಮ್ ಶಾಲೆಯಲ್ಲಿ ಕ್ರಮವಾಗಿ 7 ಮತ್ತು 2ನೇ ತರಗತಿಯಲ್ಲಿ ಓದುತ್ತಿದ್ದು, ತಮ್ಮ ಶಾಲೆಗೂ ತರಹೇವಾರಿ ಸಸಿಗಳನ್ನು ನೀಡಿದ್ದಾರೆ.
ಸಾರ್ವಜನಿಕರು ತಿಂದು ಬಿಸಾಕಿರುವ ಹಣ್ಣಿನ ಬೀಜಗಳನ್ನುಈ ಸಹೋದರರು ಆಯ್ದು, ಒಣಗಿಸಿ, ಪ್ಯಾಕೆಟ್‌ಗಳಲ್ಲಿ ಗೊಬ್ಬರ ಮಿಶ್ರಿತ ಮಣ್ಣು ಹಾಕಿ, ಬೀಜ ಇಟ್ಟು, ನೀರುಣಿಸಿ ಸಸಿ ಬೆಳೆಸುತ್ತಾರೆ.
ಮಾವು, ಹಲಸು, ಪಪ್ಪಾಯ, ಹುಣಸೆ, ನೇರಳೆ ಸೇರಿ 70ಕ್ಕೂ ಹೆಚ್ಚು ಬಗೆಯ ಸಸಿಗಳನ್ನು ಬೆಳೆಸಿದ್ದು, ಈ ವರ್ಷ ಅವುಗಳನ್ನು ಬೆಲವಂತನಕೊಪ್ಪ,ಎಣ್ಣೆಕೊಪ್ಪ, ವೃತ್ತಿಕೊಪ್ಪದ ಸರ್ಕಾರಿ ಶಾಲೆಗಳಿಗೆ ನೀಡಿದ್ದಾರೆ.
ಮುಂದಿನ ವರ್ಷದ ಸಸಿ ತಯಾರಿಗೂ ಈಗಾಗಲೇ ಸಿದ್ಧತೆ ಮಾಡಿಕೊಂಡಿರುವ ಸಹೋದರರು ಸೇಬು, ಸೀತಾಫಲ, ಸಪೋಟ ಬೀಜಗಳನ್ನು ಪ್ಯಾಕೆಟ್‌ಗೆ ಹಾಕಿದ್ದಾರೆ. ಹಂತಹಂತವಾಗಿ 1,000 ಸಸಿಗಳನ್ನು ಬೆಳೆಸುವ ಗುರಿ ಹೊಂದಿದ್ದಾರೆ.
‘ಪರಿಸರ ಸಮತೋಲನ ಕಾಯ್ದುಕೊಳ್ಳಲು, ಉಸಿರಾಡಲು ಉತ್ತಮ ಗಾಳಿ ಬೇಕು. ಅದಕ್ಕೆ ನಾವು ಗಿಡ–ಮರ
ಗಳನ್ನು ಬೆಳೆಸಬೇಕು ಎಂದು ನಮ್ಮ ತಂದೆ ಹೇಳುತ್ತಿದ್ದರು. ಶಿಕ್ಷಕರೂ ಶಾಲೆಯಲ್ಲಿ ಪರಿಸರ ರಕ್ಷಣೆ ಕುರಿತು ಜಾಗೃತಿ ಮೂಡಿಸುತ್ತಿರುವುದು ಸಸಿ ಬೆಳೆಸಲು ಪ್ರೇರಣೆಯಾಯಿತು’ ಎಂದು ವಿದ್ಯಾರ್ಥಿ ರಿಷಬ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಮಕ್ಕಳು ಸಿದ್ಧಪಡಿಸಿರುವ ಸಸಿಗಳನ್ನು ಸಂಬಂಧಿಗಳ ಮನೆಗೂ ಕೊಟ್ಟಿದ್ದೇವೆ. ಕೆರೆ ಏರಿಗಳ ಮೇಲೆ ಹುಣಸೆ ಸಸಿಗಳನ್ನು ತಾವೇ ನೆಡಬೇಕು ಎಂಬ ಯೋಜನೆ ರೂಪಿಸಿದ್ದಾರೆ. ಹಿತ್ತಲಲ್ಲಿ ಸಾಕಷ್ಟು ಸಸಿ ಬೆಳೆಸುತ್ತಿದ್ದಾರೆ. ನನಗೂ ಸಮಯ ಸಿಕ್ಕಾಗಲೆಲ್ಲ ಅವರಿಗೆ ಮಾರ್ಗದರ್ಶನ ಮಾಡುತ್ತೇನೆ. ಚಿಕ್ಕಂದಿನಲ್ಲೇ ಪರಿಸರ ಪ್ರೇಮ ರೂಢಿಸಿಕೊಂಡಿದ್ದನ್ನು ಕಂಡು ಹೆಮ್ಮೆ ಎನ್ನಿಸುತ್ತಿದೆ’ ಎಂದು ಅವರ ತಂದೆ ರವಿಕುಮಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.