ADVERTISEMENT

ಸಮಾನತೆಗೆ ಸಂದ ಸಂತಸೌರಭ | ಮಾದಾರ ಚನ್ನಯ್ಯ ಸ್ವಾಮೀಜಿ ಬರಹ

ಸಾಮರಸ್ಯದ ಕನಸು ಕಂಡ ವಿಶ್ವೇಶತೀರ್ಥರು

ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ
Published 30 ಡಿಸೆಂಬರ್ 2019, 5:48 IST
Last Updated 30 ಡಿಸೆಂಬರ್ 2019, 5:48 IST
ಪೇಜಾವರ ಶ್ರೀಗಳು ದಲಿತರ ಕೇರಿಯಲ್ಲಿ
ಪೇಜಾವರ ಶ್ರೀಗಳು ದಲಿತರ ಕೇರಿಯಲ್ಲಿ    

‘ಮೂರು ಮಕ್ಕಳಿರುವ ಸಂಸಾರದಲ್ಲಿ ಕೊನೆಯ ಮಗನೆಂದರೆ ಅದೇಕೊ ತಾತ್ಸಾರವಿತ್ತು. ಮೊದಲೆರಡು ಮಕ್ಕಳಂತೆ ಮೂರನೆಯದು ಅದೇ ಕರುಳ ಕುಡಿಯಾದರೂ ಪೋಷಕರಿಗೆ ಇಷ್ಟವಾಗುತ್ತಿರಲಿಲ್ಲ. ಆ ಕಾರಣಕ್ಕೆ ಮೂರನೇ ಮಗು ಎಷ್ಟೇ ಅತ್ತುಕರೆದರೂ ದಿನ ರಾತ್ರಿ ಹೊರಗಟ್ಟಿ ಉಳಿದ ಇಬ್ಬರು ಮಕ್ಕಳೊಂದಿಗೆ ಸುಖ ನಿದ್ರೆ ಮಾಡುತ್ತಿದ್ದರು. ಚಳಿಯೋ ಮಳೆಯೋ ಗಾಳಿಯೋ ಅಳುತ್ತಲೇ ಆ ಮಗು ಅದೆಷ್ಟೋ ರಾತ್ರಿಗಳನ್ನು ಹೊರಗೆ ಕಳೆಯುತ್ತಿತ್ತು. ಒಂದು ದಿನ ಊರೊಳಗೆ ಬಂದ ಹುಲಿಯೊಂದು ಆ ಮಗುವನ್ನು ಕಚ್ಚಿ ಎಳೆದೊಯ್ದಿತ್ತು. ಎಂದಿನಂತೆ ಬೆಳಿಗ್ಗೆ ಬಾಗಿಲು ತೆರೆದು ನೋಡಿದರೆ ಆ ಮಗು ಕಾಣಲಿಲ್ಲ. ಆ ವೇಳೆಗೆ ಮಗು ಹುಲಿಗೆ ಆಹಾರವಾಗಿತ್ತು. ಹೆತ್ತ ಮಗನನ್ನು ಕಳೆದುಕೊಂಡ ತಂದೆ–ತಾಯಿ ಮುಗಿಲು ಮುಟ್ಟುವಂತೆ ರೋದಿಸಿದರು. ತಾವು ಮಾಡಿದ ಈ ತಾರತಮ್ಯದಿಂದ ಕುಟುಂಬದ ಒಬ್ಬರನ್ನು ಕಳೆದುಕೊಂಡೆವು ಎಂದು ಪಶ್ಚಾತಾಪಪಟ್ಟರು. ಆದರೆ ಆ ಮಗುವನ್ನು ತರಲಾಗಲಿಲ್ಲ’. ಇದು ನಮ್ಮ ಹಿಂದೂ ಧರ್ಮದ ಕಥೆ.

ಬೆಂಗಳೂರಿನಲ್ಲಿ ನಡೆದ ವಿರಾಟ್ ಹಿಂದೂ ಸಮಾಜೋತ್ಸವದಲ್ಲಿ ವಿಶ್ವೇಶತೀರ್ಥ ಶ್ರೀಪಾದರು ಈ ಕಥೆಯನ್ನು ಹೇಳುತ್ತಾ ಗದ್ಗಿತರಾಗಿದ್ದರು.ಹಿಂದೂ ಧರ್ಮದಲ್ಲಿ ಹುಟ್ಟಿ ಹಿಂದೂಗಳಿಂದಲೇತಿರಸ್ಕಾರಕ್ಕೊಳಗಾಗಿ ಮತಾಂತರಗೊಂಡ ಸಮುದಾಯಗಳನ್ನು ಉದಾಹರಿಸಿ, ಜಾತಿ, ಅಸ್ಪೃಶ್ಯತೆಯನ್ನು ಆಚರಿಸುತ್ತಿರುವವರನ್ನು ಕುರಿತು ಹೇಳಿದ ಮಾತುಗಳಿವು. ಯಾವುದೋ ಕಾಲದಲ್ಲಿ, ಮತ್ತ್ಯಾವುದೋ ಸಂದರ್ಭಕ್ಕೆ ಅಥವಾ ಕಸುಬಿನ ಆಧಾರದ ಮೇಲೆ ಸೃಷ್ಟಿಯಾದ ಈ ಜಾತಿವ್ಯವಸ್ಥೆ ಹಿಂದೂ ಧರ್ಮಕ್ಕೆ ಮುಂದೊಂದು ದಿನ ಗಂಡಾಂತರ ಎಂದು ಎಚ್ಚರಿಸುತ್ತಿದ್ದರು.

‘ಮೇಲು–ಕೀಳು ಅಸಮಾನತೆಯಿಂದ ಬೇಸತ್ತು ಶೋಷಿತ ಸಮುದಾಯಗಳು ಅನ್ಯ ಧರ್ಮಗಳೊಂದಿಗೆ ನಡೆದರೆ ಹಿಂದೂಗಳೇ ಈ ದೇಶದಲ್ಲಿ ಅಲ್ಪಸಂಖ್ಯಾತರಾಗುತ್ತೀರಿ. ಹುಲಿಗೆ ಆಹಾರವಾದ ಮಗು ಎಷ್ಟೇ ಅತ್ತು ಕರೆದರೂ ಹೇಗೆ ಬರಲು ಸಾಧ್ಯವಾಗಲಿಲ್ಲವೋ ಹಾಗೆ ಮುಂದೊಂದು ದಿನ ಈ ಧರ್ಮದ ಕಥೆಯಾಗುತ್ತದೆ.ಈಗಲಾದರೂ ಎಚ್ಚೆತ್ತುಕೊಳ್ಳಿ, ಯಾವುದೇ ಜಾತಿಯಲ್ಲಿದ್ದರೂ ಅವರು ನಮ್ಮವರೇ.ತಾರತಮ್ಯ ಮಾಡದೇ ಸಾಮರಸ್ಯದಿಂದ ಬದುಕಿ’ ಎಂದು ನೇರವಾಗಿ ಹೇಳುತ್ತಿದ್ದ ವ್ಯಕ್ತಿತ್ವ ಅವರದು.

ADVERTISEMENT

ತೀರಾ ಸಂಪ್ರದಾಯಬದ್ಧ ಮಾಧ್ವ ಪರಂಪರೆಯ ಪೀಠಕ್ಕೆ ಬಂದ ಯತಿವರ್ಯರಲ್ಲಿ ಪೀಠದ ಘನತೆಯೊಂದಿಗೆ ಬದ್ಧತೆಯನ್ನು ಬಿಟ್ಟು ಕೊಡದೇ ಇಡೀ ಜೀವಮಾನದುದ್ದಕ್ಕೂ ಧರ್ಮದ ಸರಿ–ತಪ್ಪುಗಳನ್ನು ಎತ್ತಿ ಹಿಡಿಯುತ್ತಲೇ ಸಾಗಿದವರು ವಿಶ್ವೇಶತೀರ್ಥ ಶ್ರೀಪಾದರು. ಉಡುಪಿಯ ಶ್ರೀಕೃಷ್ಣಮಠಕ್ಕೆ ಆಗಿ ಹೋದ ಅದೆಷ್ಟೋ ಯತಿವರ್ಯರಂತೆ ಇವರು ಕೂಡ ಪೂಜೆ, ಪುನಸ್ಕಾರ, ಸಂಪ್ರದಾಯ ಪಾಲಿಸುತ್ತಾ ಬಂದಿದ್ದರೆಮಠದ ಸಂಪ್ರದಾಯಸ್ಥ ಭಕ್ತರಿಗೆ ಪ್ರೀತಿ–ಪಾತ್ರ ಪೀಠಾಧಿಪತಿಗಳಾಗುತ್ತಿದ್ದರು.

ಜಡ್ಡುಗಟ್ಟಿದ ವ್ಯವಸ್ಥೆಯೊಳಗಿದ್ದು,ತನ್ನೊಳಗಿನ ಬದಲಾವಣೆಯ ಕನಸುಗಳನ್ನು ಹೊರಗೆಡವುತ್ತಲೇ ಸಾಗಿದರು. ಆ ಕಾರಣಕ್ಕೆ ಶ್ರೀಪಾದರು ಕೊನೆಯ ದಿನಗಳು ಸಮೀಪಿಸಿದರೂ ಟೀಕಾಕಾರರಿಗೆ, ವಿಚಾರವಾದಿಗಳಿಗೆ ಆಹಾರವಾದರು.ಬಹುಶಃ ಹಿಂದೂ ಧರ್ಮದ ಪ್ರತಿಪಾದಕರೆಂದು ಒಂದು ವರ್ಗ, ಸಂಪ್ರಾದಾಯಗಳಿಗೆ ಇತಿಶ್ರೀ ಹಾಡುತ್ತಿದ್ದಾರೆಂದು ಮತ್ತೊಂದು ವರ್ಗ. ಆರೋಪ–ಪ್ರತ್ಯಾರೋಪಗಳ ನಡುವೆ ತನ್ನ ಹೋರಾಟದ ದಾರಿಯಲ್ಲಿ ಎಂದೂ ರಾಜಿ ಮಾಡಿಕೊಳ್ಳಲಿಲ್ಲ. ಅಸಮಾನತೆ ನಿವಾರಣೆಯಾಗಬೇಕು. ಹಿಂದೂ ಧರ್ಮದಲ್ಲಿರುವ ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಬೇಕು ಎಂಬ ಮಾತಿಗೆ ಕಟಿಬದ್ಧರಾದ ಯತಿವರ್ಯರೆಂದರೆ ಅಷ್ಟಮಠಗಳಲ್ಲಿ ವಿಶ್ವೇಶತೀರ್ಥ ಶ್ರೀಪಾದರೊಬ್ಬರೇ. ಅದೇ ಕಾರಣಕ್ಕೆ ನಾನು ಇಷ್ಟ ಪಡುವ, ಪ್ರೀತಿಸುವ, ಗೌರವಿಸುವ ಕೆಲವೇ ಪೂಜ್ಯರಲ್ಲಿ ಇವರು ಕೂಡ ಒಬ್ಬರು. ಅದಕ್ಕೆ ಹಲವು ಕಾರಣಗಳಿವೆ.

ಯಾವುದೋ ಕಾಲದ ಸಂಪ್ರದಾಯ, ಆಚರಣೆ, ಸಂಸ್ಕೃತಿಯ ದಬ್ಬಾಳಿಕೆಗಳ ನಿದರ್ಶನಗಳನ್ನೇ ಪುನರುಚ್ಚರಿಸುತ್ತಾ ಕಾಲಹರಣ ಮಾಡುವ ಬದಲು ಭವಿಷ್ಯದ ದಿನಗಳನ್ನು ನಮ್ಮದಾಗಿಸಿಕೊಳ್ಳಬೇಕೆಂದು ಹಂಬಲಿಸುತ್ತಿದ್ದ ನನಗೆ ಅಂತಹ ಅಮೂಲ್ಯ ಸಂದರ್ಭಾವಕಾಶ ಒದಗಿಸಿಕೊಟ್ಟವರು ಶ್ರೀಪಾದರು. 2009ರ ಸೆ.11ರಂದು ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿ ನಡೆದ ಸಾಮರಸ್ಯದ ನಡಿಗೆ ಇತಿಹಾಸ. ನನ್ನ ಜೀವನದ ಮಟ್ಟಿಗೆ ಮರೆಯಲಾಗದ ಕ್ಷಣ. ದಲಿತರ ಕಾಲೊನಿಗಳಲ್ಲಿ ವಿಶ್ವೇಶತೀರ್ಥ ಶ್ರೀಪಾದರ ಪಾದಯಾತ್ರೆ ನಡೆಯುತ್ತಿದ್ದರೆ, ಬ್ರಾಹ್ಮಣರ ಕೇರಿಯಲ್ಲಿ ನಮ್ಮದೇ ಪಾದಯಾತ್ರೆ ಪ್ರಚಾರ ಪಡೆದಿತ್ತು. 1960ರಲ್ಲೇ ಉಡುಪಿ ಹತ್ತಿರದ ದಲಿತರ ಕಾಲೊನಿಗಳಿಗೆ ಅವರು ಭೇಟಿ ಕೊಟ್ಟಿದ್ದರು. ಆದರೆ, ಅವರ ಬ್ರಾಹ್ಮಣ ಅಗ್ರಹಾರದಲ್ಲಿ ನಮ್ಮ ಪಾದಯಾತ್ರೆ ನಡೆಯಲು ಅರ್ಧ ಶತಮಾನದ ಅಂತರವಿತ್ತು. ಅದೇ ಕಾರಣಕ್ಕೆ ಈ ಸಂದರ್ಭ ಹೆಚ್ಚು ಮಹತ್ವ ಮತ್ತು ಪ್ರಚಾರ ಪಡೆದಿತ್ತು. ಅದರ ಹಿಂದಿನ ಪ್ರೇರಕ ಶಕ್ತಿಯೇ ವಿಶ್ವೇಶತೀರ್ಥ ಶ್ರೀಪಾದರು.

ಬಹುತೇಕ ಬ್ರಾಹ್ಮಣ ಸಮುದಾಯದವರೇ ವಾಸಿಸುವ ಬಡಾವಣೆ ಕೃಷ್ಣಮೂರ್ತಿಪುರಂ. ಅದರ ಪಕ್ಕದಲ್ಲೇ ದಲಿತರು ಹೆಚ್ಚಾಗಿ ವಾಸಿಸುವ ಅಶೋಕಪುರಂ ಇದೆ. ಕೆಲವೇ ದಶಕಗಳ ಹಿಂದೆ ಈ ಪ್ರದೇಶದ ದಲಿತರು ಬ್ರಾಹ್ಮಣರ ಕೇರಿಯನ್ನು ಹಾದು ಹೋಗುವಾಗ ಕೈಯಲ್ಲಿ ಪಾದರಕ್ಷೆಗಳನ್ನು ಹಿಡಿದು ಹೋಗುತ್ತಿದ್ದರೆಂಬುದನ್ನು ತಿಳಿದಿದ್ದೆವು. ಅಂತಹ ಬಡಾವಣೆಯಲ್ಲಿ ದಲಿತಸ್ವಾಮೀಜಿಗಳ ಪಾದಯಾತ್ರೆ ನಡೆಯುತ್ತಿದೆ. ಅಲ್ಲಿ ನಮಗೆ ಸಿಗುವ ಗೌರವ–ಅಗೌರವ ಎರಡಕ್ಕೂ ಸಾಕ್ಷೀಕರಿಸಲು ಸಂಪ್ರದಾಯವಾದಿಗಳು, ನಾಡಿನ ವಿಚಾರವಾದಿಗಳು ಹಾಗೂ ಮಾಧ್ಯಮಗಳು ಕಣ್ಣಲ್ಲಿ ಕಣ್ಣಿಟ್ಟು ಗಮನಿಸುತ್ತಿದ್ದವು.

ಶಿಕ್ಷಣ ಸಚಿವ ಸುರೇಶಕುಮಾರ್‌ ಅಂದು ಮೈಸೂರು ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತಿದ್ದರು. ಎಸ್‌.ಎ. ರಾಮದಾಸ್‌ ಕೃಷ್ಣರಾಜ ಕ್ಷೇತ್ರದ ಶಾಸಕರಾಗಿದ್ದರು. ಸಾಮರಸ್ಯ ವೇದಿಕೆಯ ಮುಖ್ಯಸ್ಥರಾದ ವಾದಿರಾಜರ ನೇತೃತ್ವದಲ್ಲಿ ನಡೆದ ಸಾಮರಸ್ಯ ನಡಿಗೆ ಅದ್ದೂರಿ ಯಶಸ್ಸು ಕಂಡಿತು. ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವೇಶತೀರ್ಥರು ‘ಇಂತಹ ಸಾಮರಸ್ಯದ ಕೊಂಡಿ ದೇಶದಾದ್ಯಂತ ಬೆಸೆಯಬೇಕು’ ಎಂದರು. ಇಂತಹ ಬಹುದೊಡ್ಡ ಕ್ರಾಂತಿಗೆ ಮುನ್ನುಡಿ ಬರೆಯಲು ಶ್ರೀಪಾದರೇ ಕಾರಣ.

ಆನಂತರ ಚಿತ್ರದುರ್ಗದಲ್ಲಿ 2012 ಡಿಸೆಂಬರ್‌ನಲ್ಲಿ ಅಸ್ಪೃಶ್ಯತಾ ನಿವಾರಣಾ ವಿಚಾರ ಸಂಕಿರಣವನ್ನು ಹಿಂದೂ ಜಾಗರಣಾ ವೇದಿಕೆಯ ಮುಖ್ಯಸ್ಥರಾದ ಮನೋಹರ್ ಮಠದ್‌ (ಮುನಿಯಪ್ಪಾಜಿ) ಅವರೊಂದಿಗೆ ಸೇರಿ ನಾವೇ ಏರ್ಪಡಿಸಿದ್ದೆವು. ಶಿವಮೂರ್ತಿ ಮುರುಘಾ ಶರಣರು ಸೇರಿದಂತೆ ಅವರಿಂದ ದೀಕ್ಷೆ ಪಡೆದ ಎಲ್ಲಾ ಹಿಂದುಳಿದ, ದಲಿತ ಮಠಾಧೀಶರಿದ್ದರು. ಪ್ರೇಕ್ಷಕರು ಸೇರಿದಂತೆ ಅನೇಕ ಮಠಾಧೀಶರ ಪ್ರಶ್ನೆಗಳು ಶ್ರೀಪಾದರ ಮೇಲೆ ಎರಗುತ್ತಿದ್ದವು. ಜಾತಿಗಳ ಮಧ್ಯೆ ಸಾಮರಸ್ಯ ಮೂಡಿಸುವುದು, ಅಸ್ಪೃಶ್ಯತೆ ನಿವಾರಣೆಗೆ ಹೋರಾಡುವುದು ಹಾಗೂ ಹಿಂದೂ ಧರ್ಮ ಗಟ್ಟಿಗೊಳಿಸುವ ಏಕೈಕ ಉದ್ದೇಶ ಎಂಬುದನ್ನು ಒತ್ತಿ ಹೇಳಿದರೇ ಹೊರತು ಗದ್ದಲ–ಗಲಾಟೆಗಳ ನಡುವೆ ಬರುತ್ತಿದ್ದ ಯಾವ ಪ್ರಶ್ನೆಗಳಿಗೂ ವಿಚಲಿತರಾಗಲಿಲ್ಲ. ದೇಹ ಚಿಕ್ಕದಾಗಿದ್ದರೂ ನಿರ್ಧಾರಗಳು ಗಟ್ಟಿ ಎಂಬುದನ್ನು ತೋರಿಸಿಕೊಟ್ಟರು.

‘ಬುದ್ಧಿಜೀವಿಗಳು ಪದೇ ಪದೇ ಟೀಕಿಸುತ್ತಲೇ ಇರುತ್ತಾರೆ’ ಎಂದು ಸಮಾರಂಭವೊಂದರಲ್ಲಿ ಬೇಸರಿಸಿಕೊಂಡರು. ‘ಫಲಕೊಡುವ ಮರಕ್ಕೆ ಕಲ್ಲು ಬೀಳುವುದು ಸಹಜ. ನಿಮ್ಮೊಂದಿಗೆ ನಾವಿದ್ದೇವೆ’ ಎಂದು ಹೇಳಿದ್ದಕ್ಕೆ ಸಮಾಧಾನಪಟ್ಟಿದ್ದರು. 2018ರಲ್ಲಿ ಅವರಿಗೆ ಎಂಬತ್ತು ತುಂಬಿದ ಸಂಭ್ರಮ. ಆ ಸವಿ ನೆನಪಿಗೆ ರಾಷ್ಟ್ರಮಟ್ಟದ ಧರ್ಮ ಸಂಸತ್ ಸಮಾವೇಶ ಉಡುಪಿಯಲ್ಲಿ ನಡೆಯಿತು. ಈ ಸಂಸತ್ತಿಗೆ ಭಾರತದಾದ್ಯಂತ ಸಾಧು–ಸಂತರು ಹಾಗೂ ಲಕ್ಷಾಂತರ ಜನ ಸೇರಿದ್ದರು. ಅವರೊಟ್ಟಿಗೆ ಹಂಚಿಕೊಂಡ ಆ ವೇದಿಕೆಯೇ ಕೊನೆಯದು. ಒಮ್ಮೆ ನಮ್ಮ ಗುರುಪೀಠಕ್ಕೆ ಭೇಟಿ ಕೊಡುವ ಇಚ್ಛೆ ವ್ಯಕ್ತಪಡಿಸಿದ್ದರು. ಅಂತಹ ಸಂದರ್ಭ ಒದಗಿಬರಲಿಲ್ಲ ಎಂಬ ಕೊರಗು ನಮ್ಮ ಮನಸ್ಸಿನಲ್ಲಿ ಅಳಿಸಲಾಗದೇ ಉಳಿದುಕೊಂಡಿತು. ಅವರು ನೀಡಿದ ಮಾರ್ಗದರ್ಶನ, ಸಾಮರಸ್ಯದ ಕನಸನ್ನು ನನಸಾಗಿಸಲು ಒಂದಿಷ್ಟಾದರೂ ಪ್ರಯತ್ನಿಸುತ್ತೇನೆ.

ಇನ್ನಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.