ADVERTISEMENT

ಜಡ ಜಾತಿ ವ್ಯವಸ್ಥೆಯಲ್ಲಿ ಸಮಾನತೆ ಅಸಾಧ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮತ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2024, 18:29 IST
Last Updated 9 ಫೆಬ್ರುವರಿ 2024, 18:29 IST
<div class="paragraphs"><p>ಹೊಸದುರ್ಗ ತಾಲ್ಲೂಕಿನ ಬ್ರಹ್ಮವಿದ್ಯಾನಗರದ ಭಗೀರಥ ಗುರುಪೀಠದಲ್ಲಿ ಶುಕ್ರವಾರ ನಡೆದ ಸಮಾರಂಭ</p></div>

ಹೊಸದುರ್ಗ ತಾಲ್ಲೂಕಿನ ಬ್ರಹ್ಮವಿದ್ಯಾನಗರದ ಭಗೀರಥ ಗುರುಪೀಠದಲ್ಲಿ ಶುಕ್ರವಾರ ನಡೆದ ಸಮಾರಂಭ

   

ಹೊಸದುರ್ಗ (ಚಿತ್ರದುರ್ಗ): ಚಲನರಹಿತ ಜಾತಿ ವ್ಯವಸ್ಥೆ ಬಲವಾಗಿ ಬೇರುಬಿಟ್ಟಿದ್ದು, ಸಾಮಾಜಿಕ ಮತ್ತು ಆರ್ಥಿಕ ಚಟುವಟಿಕೆ ಸ್ಥಗಿತಗೊಂಡಿವೆ. ಜಾತಿ ವ್ಯವಸ್ಥೆ ಇರುವವರೆಗೂ ಸಮಾಜದಲ್ಲಿ ಸಮಾನತೆ ಬರಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಬ್ರಹ್ಮವಿದ್ಯಾನಗರದ ಭಗೀರಥ ಗುರುಪೀಠದಲ್ಲಿ ಪುರುಷೋತ್ತಮಾನಂದಪುರಿ ಸ್ವಾಮೀಜಿ ಅವರ ಪಟ್ಟಾಭಿಷೇಕದ ರಜತ ಮಹೋತ್ಸವ ಸಮಾರಂಭವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

‘ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಗೆ ಜಾತಿ ವ್ಯವಸ್ಥೆ ಪ್ರಮುಖ ಕಾರಣ. ಶೂದ್ರ ಸಮುದಾಯ ಅಕ್ಷರ ಸಂಸ್ಕೃತಿಯಿಂದ ವಂಚಿತವಾಗಿದೆ. ಅನೇಕ ದಾರ್ಶನಿಕರು ಹಾಗೂ ಸಮಾಜ ಸುಧಾರಕರು ಬದಲಾವಣೆಗೆ ಪ್ರಯತ್ನಿಸಿದ್ದಾರೆ. ಜಾತಿ ವ್ಯವಸ್ಥೆಯ ಕಾರಣಕ್ಕೆ ಇದರಲ್ಲಿ ನಿರೀಕ್ಷಿತ ಫಲ ದೊರೆತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮೇಧಾವಿತನ, ಶ್ರೇಷ್ಠತೆ ಜಾತಿಯಿಂದ ಬರುವುದಿಲ್ಲ. ಅದು ಶಿಕ್ಷಣದಿಂದ ಮಾತ್ರ ಸಾಧ್ಯ ಎಂಬುದಕ್ಕೆ ಅಂಬೇಡ್ಕರ್ ನಿದರ್ಶನ. ಮಕ್ಕಳನ್ನು ಅವಿದ್ಯಾವಂತರಾಗಲು ಬಿಡಬೇಡಿ ಎಂಬುದು ಕಳಕಳಿಯ ಮನವಿ. ಸ್ವಾಭಿಮಾನ ಮೂಡಲು ಶಿಕ್ಷಣ ಅತ್ಯಗತ್ಯ. ಪಟ್ಟಭದ್ರ ಹಿತಾಸಕ್ತಿಗಳು ಹಿಂದಿನಿಂದಲೂ ಇವೆ. ದಾರಿತಪ್ಪಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿವೆ. ಇವರ ಬಗ್ಗೆ ಹುಷಾರಾಗಿ ಇರಬೇಕು. ಎಚ್ಚರಿಕೆಯಿಂದ ಹೆಜ್ಜ ಇಡಬೇಕು’ ಎಂದು ಸಲಹೆ ನೀಡಿದರು.

‘ಬಸವಾದಿ ಶರಣರು ಕರ್ಮ ಸಿದ್ಧಾಂತ ತಿರಸ್ಕಾರಿಸಿದರು. ಬಡತನಕ್ಕೂ ಕರ್ಮ ಸಿದ್ಧಾಂತದ ಕಥೆಯನ್ನು ಹೇಳಿಕೊಡಲಾಗಿದೆ. ಹಣೆಬರಹ ನಂಬಿ ಕುಳಿತುಕೊಳ್ಳುವುದು ತಪ್ಪು. ಸ್ವರ್ಗ ಮತ್ತು ನರಕ ಇಲ್ಲಿಯೇ ಇವೆ. ಮನುಷ್ಯರು ಪರಸ್ಪರ ಪ್ರೀತಿಸಬೇಕು, ದ್ವೇಷ ಮಾಡಬಾರದು’ ಎಂದು ಕಿವಿಮಾತು ಹೇಳಿದರು.

‘ಉಪ್ಪಾರ ಸಮಾಜ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿದೆ. ಉಪ್ಪು ತಯಾರಿಸಿ ಮಾರಾಟ ಮಾಡುವುದು ಸಮುದಾಯದ ವೃತ್ತಿಯಾಗಿತ್ತು. ಕೈಗಾರಿಕೀಕರಣದ ಬಳಿಕ ಸಾಂಪ್ರದಾಯಿಕ ವೃತ್ತಿ ಕೈಬಿಡಬೇಕಾಯಿತು. ಮಹಾತ್ಮ ಗಾಂಧೀಜಿ ಬ್ರಿಟಿಷರ ವಿರುದ್ಧ ಹೋರಾಟ ಮಾಡುವಾಗ ಉಪ್ಪಿನ ಸತ್ಯಾಗ್ರಹ ಮಾಡಿದರು. ಅದರಲ್ಲಿ ಉಪ್ಪಾರ ಸಮಾಜದ ಕೊಡುಗೆ ಅಪಾರವಾಗಿತ್ತು. ವೃತ್ತಿ ಕಸುಬಿಗೆ ಧಕ್ಕೆ ಬಂದ ಬಳಿಕ ಉಪ್ಪಾರ ಸಮುದಾಯ ಆರ್ಥಿಕ ಮತ್ತು ಸಾಮಾಜಿಕವಾಗಿ ಕುಸಿದು ಹೋಯಿತು’ ಎಂದು ಬೇಸರ ವ್ಯಕ್ತಪಡಿಸಿದರು.

‘ಉಪ್ಪಿನ ವ್ಯಾಪಾರ ಮಾಡುತ್ತಿದ್ದ ಕಾರಣಕ್ಕೆ ಜಮೀನು ಕೂಡ ಇರಲಿಲ್ಲ. ಕೃಷಿ ಮಾಡಲು ಸಮುದಾಯಕ್ಕೆ ಸಾಧ್ಯವಾಗಲಿಲ್ಲ. ಶಿಕ್ಷಣ ಹಾಗೂ ಆರ್ಥಿಕ ಶಕ್ತಿಯಿಂದ ವಂಚಿತವಾಗಬೇಕಾಯಿತು. ಸಂವಿಧಾನ ಅನುಷ್ಠಾನಗೊಂಡ ಬಳಿಕ ಎಲ್ಲರಿಗೂ ಸಮಾನ ಅವಕಾಶ ಸಿಗುತ್ತಿದೆ. ಅಕ್ಷರ ಕಲಿಯುವ, ವಕೀಲನಾಗುವ ಅವಕಾಶ ಸಿಗದೇ ಹೋಗಿದ್ದರೆ ನಾನು ಕೂಡ ಮುಖ್ಯಮಂತ್ರಿಯಾಗಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌, ಮೈಸೂರು ಸೇಲ್ಸ್‌ ಇಂಟರ್‌ ನ್ಯಾಷನಲ್‌ ಲಿಮಿಟೆಡ್‌ (ಎಂಎಸ್‌ಐಎಲ್‌) ಅಧ್ಯಕ್ಷ ಸಿ.ಪುಟ್ಟರಂಗಶೆಟ್ಟಿ, ಶಾಸಕರಾದ ಬಿ.ಜಿ.ಗೋವಿಂದಪ್ಪ, ಶ್ರೀನಿವಾಸ್‌, ಕೆ.ಎಚ್‌. ಪುಟ್ಟಸ್ವಾಮಿಗೌಡ, ಮಾಜಿ ಸಚಿವ ಎಚ್‌.ಆಂಜನೇಯ, ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ, ನೆ.ಲ.ನರೇಂದ್ರ ಬಾಬು ಇದ್ದರು.

ಹೊಸದುರ್ಗ ತಾಲ್ಲೂಕಿನ ಬ್ರಹ್ಮವಿದ್ಯಾನಗರದ ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಅವರ ಪಟ್ಟಾಭಿಷೇಕದ ರಜತ ಮಹೋತ್ಸವ ಸಮಾರಂಭದಲ್ಲಿ ಶುಕ್ರವಾರ ಪಾಲ್ಗೊಂಡಿದ್ದ ಭಕ್ತರು
ಜಮೀನು ಮಂಜೂರಾತಿಗೆ ಕ್ರಮ ಕೈಗೊಳ್ಳುವೆ. ನಿಮ್ಮೊಂದಿಗೆ ನಾನು ಸದಾ ಇರುತ್ತೇನೆ. ನಿಮ್ಮ ಆಶೀರ್ವಾದ ನನ್ನ ಮೇಲೆ ಹಾಗೂ ಸರ್ಕಾರದ ಮೇಲೆ ಇರಲಿ.
ಸಿದ್ದರಾಮಯ್ಯ ಮುಖ್ಯಮಂತ್ರಿ
ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಸಿದ್ದರಾಮಯ್ಯ ಅವರಿಗೆ ಎರಡನೇ ಅವಧಿಗೆ ಮುಖ್ಯಮಂತ್ರಿ ಸ್ಥಾನವನ್ನು ಕಾಂಗ್ರೆಸ್‌ ನೀಡಿದೆ. ಜನರ ಏಳಿಗೆಗೆ ಅವರು ಶ್ರಮಿಸಲಿದ್ದಾರೆ. ಅವರಿಗೆ ನಾವು ಕೈಜೋಡಿಸಲಿದ್ದೇವೆ.
ಕೆ.ಎಚ್‌.ಮುನಿಯಪ್ಪ ಆಹಾರ ಸಚಿವ

‘ಗುತ್ತಿಗೆ ಅವಧಿ ವಿಸ್ತರಣೆಗೆ ಕ್ರಮ’

‘ಸಮುದಾಯಕ್ಕೆ ಸಿಗಬೇಕಾದ ಸವಲತ್ತುಗಳನ್ನು ಉಪ್ಪಾರ ಸಮುದಾಯಕ್ಕೆ ನೀಡುವ ಪ್ರಯತ್ನವನ್ನು 25 ವರ್ಷಗಳಿಂದ ಸ್ವಾಮೀಜಿ ಮಾಡಿದ್ದಾರೆ. ಅವರಿಗೆ ಭಕ್ತರು ಶಕ್ತಿ ತುಂಬುವ ಅನಿವಾರ್ಯತೆ ಇದೆ. ಜಮೀನು ಗುತ್ತಿಗೆ ಅವಧಿ ಮುಂದುವರಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

‘ಸಿದ್ದರಾಮಯ್ಯ ಅವರ ಸರ್ಕಾರ ಶೋಷಿತರ ಪರವಾಗಿದೆ. ನಿಮ್ಮೆಲ್ಲರ ಹಿತ ಕಾಯಲು ಬದ್ಧವಾಗಿದೆ. ಜನಸಾಮಾನ್ಯರ ಸಮಸ್ಯೆಗಳನ್ನು ಪರಿಹಾರ ಮಾಡಲಿದೆ. ಸ್ವಾಮೀಜಿ ಅವರ ನಿರಂತರ ಪ್ರಯತ್ನದ ಫಲವಾಗಿ ಸಮುದಾಯ ಒಗ್ಗೂಡಿದೆ. ಸಮುದಾಯವನ್ನು ಗಟ್ಟಿಯಾಗಿ ಕಟ್ಟಲು ಸಹಕಾರ ನೀಡಲಾಗುವುದು’ ಎಂದರು.

ಏಕಶಿಲಾಮೂರ್ತಿಗೆ ಅನುದಾನ ಕೋರಿಕೆ

ಹೊಸದುರ್ಗ ತಾಲ್ಲೂಕಿನ ಬ್ರಹ್ಮವಿದ್ಯಾನಗರದ ಮಠದ ಆವರಣದಲ್ಲಿ ಸ್ಥಾಪಿಸಲು ಉದ್ದೇಶಿಸಿದ 60 ಅಡಿ ಎತ್ತರದ ಭಗೀರಥ ಮಹರ್ಷಿ ಏಕಶಿಲಾಮೂರ್ತಿಗೆ ₹ 12 ಕೋಟಿ ಅನುದಾನ ಒದಗಿಸಬೇಕು ಎಂದು ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಮನವಿ ಮಾಡಿದರು.

‘ಭಗೀರಥ ಮಹರ್ಷಿಯ ಏಕಶಿಲಾಮೂರ್ತಿ ಶ್ರವಣಬೆಳಗೊಳದ ಗೊಮ್ಮಟೇಶ್ವರ ಮೂರ್ತಿಗಿಂತ ಎತ್ತರ ಇರಲಿದೆ. ಈ ಸ್ಥಳದಲ್ಲಿ ಥೀಮ್‌ಪಾರ್ಕ್‌ ನಿರ್ಮಾಣ ಮಾಡುವ ಉದ್ದೇಶವಿದ್ದು ಅಗತ್ಯ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದೆ. ಅನುದಾನ ಬಿಡುಗಡೆ ಮಾಡಿದರೆ ಅನುಕೂಲವಾಗಲಿದೆ’ ಎಂದು ಮನವಿ ಮಾಡಿದರು.

‘ಎಸ್‌.ನಿಜಲಿಂಗಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಠಕ್ಕೆ ಜಮೀನು ನೀಡಲಾಗಿತ್ತು. 45 ವರ್ಷಗಳ ಗುತ್ತಿಗೆ ಅವಧಿ ಪೂರ್ಣಗೊಂಡಿದ್ದು ಸಮಸ್ಯೆ ಸೃಷ್ಟಿಸಿದೆ. ಈ ಜಮೀನಿನ ಗುತ್ತಿಗೆ ಅವಧಿಯನ್ನು ವಿಸ್ತರಿಸಬೇಕು. ಹಿಂದುಳಿದ ಉಪ್ಪಾರ ಸಮುದಾಯವನ್ನು ಮುಖ್ಯವಾಹಿನಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು. ಸಮುದಾಯದ ಒಬ್ಬರಿಗೆ ವಿಧಾನಪರಿಷತ್‌ ಸ್ಥಾನ ಕಲ್ಪಿಸಿ ನಿಗಮ ಹಾಗೂ ಮಂಡಳಿಗಳಲ್ಲಿ ಮುಖಂಡರಿಗೆ ಅವಕಾಶ ಕಲ್ಪಿಸಬೇಕು’ ಎಂದು ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.