ಬೆಂಗಳೂರು/ಶಿವಮೊಗ್ಗ: ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಮೊದಲನೇ ಆರೋಪಿ ಯಾಗಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ಶುಕ್ರವಾರ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಬಿಜೆಪಿ ವರಿಷ್ಠರು ನೀಡಿದ್ದ ಸೂಚನೆಯನ್ನು ಕಡೆಗಣಿಸಿ ಶಿವಮೊಗ್ಗದಲ್ಲಿ ಉಳಿದುಕೊಂಡಿದ್ದ ಈಶ್ವರಪ್ಪ, ಪ್ರಾಥಮಿಕ ತನಿಖೆಯ ವರದಿ ಬರುವವರೆಗೂ ಮುಂದುವರಿಯುವುದಾಗಿ ಪಟ್ಟು ಹಿಡಿದಿದ್ದರು. ಕಾಂಗ್ರೆಸ್ ಮುಖಂಡರು ವಿಧಾನಸೌಧದ ಮುಂದೆ ಅಹೋರಾತ್ರಿ ಧರಣಿ ಆರಂಭಿಸುತ್ತಿದ್ದಂತೆಯೇ ಪುನಃ ಮಧ್ಯಪ್ರವೇಶ ಮಾಡಿದ ಬಿಜೆಪಿ ವರಿಷ್ಠರು, ತಕ್ಷಣ ರಾಜೀನಾಮೆ ಕೊಡುವಂತೆ ಸಂದೇಶ ರವಾನಿಸಿದರು. ಅದರ ಬೆನ್ನಲ್ಲೇ ಗುರುವಾರ ಸಂಜೆ ಶಿವಮೊಗ್ಗದಲ್ಲಿ ದಿಢೀರ್ ಪತ್ರಿಕಾಗೋಷ್ಠಿ ನಡೆಸಿದ ಈಶ್ವರಪ್ಪ ನಿರ್ಧಾರ ಪ್ರಕಟಿಸಿದರು.
‘ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರ ತಪ್ಪಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಶುಕ್ರವಾರ ಭೇಟಿಯಾಗಿ ರಾಜೀನಾಮೆ ನೀಡುತ್ತಿದ್ದೇನೆ’ ಎಂದರು.
‘ನಾನು ಯಾವ ತಪ್ಪನ್ನೂ ಮಾಡಿಲ್ಲ. ಸಣ್ಣ ತಪ್ಪು ಮಾಡಿದ್ದರೂ ನನ್ನ ಮನೆ ದೇವರಾದ ಚೌಡೇಶ್ವರಿ ನೋಡಿಕೊಳ್ಳುತ್ತಾಳೆ’ ಎಂದು ಹೇಳುತ್ತಾ ಈಶ್ವರಪ್ಪ ಗದ್ಗದಿತರಾದರು.
‘ಬಾಕಿ ಬಿಲ್ ಪಾವತಿಗೆ ಶೇಕಡ 40ರಷ್ಟು ಲಂಚಕ್ಕೆ ಈಶ್ವರಪ್ಪ ಬೇಡಿಕೆ ಇಟ್ಟಿದ್ದಾರೆ’ ಎಂದು ಆರೋಪಿಸಿದ್ದ ಸಂತೋಷ್ ಉಡುಪಿಯ ಲಾಡ್ಜ್ ಒಂದರಲ್ಲಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿರುವುದು ಮಂಗಳವಾರ ಬಹಿರಂಗವಾಗಿತ್ತು. ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ವಿರೋಧ ಪಕ್ಷಗಳಾದ ಕಾಂಗ್ರೆಸ್, ಎಎಪಿ ಪ್ರತಿಭಟನೆ ಆರಂಭಿಸಿದ್ದವು.
ಮೈಸೂರಿನಲ್ಲಿ ಪಕ್ಷದ ವಿಭಾಗೀಯ ಮಟ್ಟದ ಸಭೆಯಲ್ಲಿದ್ದ ಈಶ್ವರಪ್ಪ ಅವರನ್ನು ಸಂಪರ್ಕಿಸಿದ್ದ ಪಕ್ಷದ ವರಿಷ್ಠರು ಬೆಂಗಳೂರಿಗೆ ತೆರಳಿ ರಾಜೀನಾಮೆ ಸಲ್ಲಿಸುವಂತೆ ಸೂಚಿಸಿದ್ದರು. ಆದರೆ, ಮೈಸೂರಿನಿಂದ ಹೊರಟ ಬಳಿಕ ನಿಲುವು ಬದಲಿಸಿದ್ದ ಸಚಿವರು, ಶಿವಮೊಗ್ಗಕ್ಕೆ ತೆರಳಿದ್ದರು. ಮೃತ ಗುತ್ತಿಗೆದಾರ ಸಾವಿಗೂ ಮುನ್ನ ವಾಟ್ಸ್ ಆ್ಯಪ್ ಮೂಲಕ ಕಳುಹಿಸಿದ ಸಂದೇಶ ಹಾಗೂ ಕುಟುಂಬದವರು ನೀಡಿದ ದೂರನ್ನು ಆಧರಿಸಿ ಈಶ್ವರಪ್ಪ ಮತ್ತು ಇತರರ ವಿರುದ್ಧ ಬುಧವಾರ ಪ್ರಕರಣ ದಾಖಲು ಮಾಡಲಾಗಿತ್ತು. ಆ ಬಳಿಕ ರಾಜೀನಾಮೆಗೆ ಒತ್ತಡ ಮತ್ತಷ್ಟು ಹೆಚ್ಚಿತ್ತು.
ಕೈ ನಾಯಕರ ಪಟ್ಟು: ಪ್ರಕರಣದ ಕುರಿತು ಪ್ರಾಥಮಿಕ ತನಿಖೆಯ ವರದಿ ಬರುವವರೆಗೂ ತಮ್ಮ ರಾಜೀನಾಮೆ ಕೇಳಬಾರದು ಎಂದು ಈಶ್ವರಪ್ಪ ಪಟ್ಟು ಹಿಡಿದಿದ್ದರು. ‘ಮೂರು ದಿನ ಈ ಪ್ರಕರಣ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಗುರುವಾರ ಬೆಳಿಗ್ಗೆ ಹೇಳಿಕೆ ನೀಡಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಪ್ರಾಥಮಿಕ ತನಿಖೆ ಬಳಿಕವೇ ಈಶ್ವರಪ್ಪ ರಾಜೀನಾಮೆ ಕುರಿತು ನಿರ್ಧಾರವಾಗಲಿದೆ ಎಂದಿದ್ದರು.
ಈಶ್ವರಪ್ಪ ರಾಜೀನಾಮೆ ಮತ್ತು ಪ್ರಕರಣದ ಎಲ್ಲ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಮುಖ್ಯಮಂತ್ರಿಯವರ ಮನೆಗೆ ಮುತ್ತಿಗೆ ಹಾಕಲು ಹೊರಟಿದ್ದ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರನ್ನು ಪೊಲೀಸರು ತಡೆದರು. ಅಲ್ಲಿಂದ ಮಾರ್ಗ ಬದಲಿಸಿದ ಅವರು ವಿಧಾನಸೌಧಕ್ಕೆ ಬಂದು ಧರಣಿ ಕುಳಿತರು. ಅಹೋರಾತ್ರಿ ಧರಣಿ ಮುಂದುವರಿಸುವುದಾಗಿಯೂ ಘೋಷಿಸಿದರು.
ರಾಜೀನಾಮೆಗೆ ವರಿಷ್ಠರ ತಾಕೀತು: ‘ರಾಜ್ಯದಲ್ಲೇ ಇರುವ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ತಕ್ಷಣವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವರ ಜತೆ ಚರ್ಚಿಸಿದರು. ಈಶ್ವರಪ್ಪ ರಾಜೀನಾಮೆ ಪಡೆಯದಿದ್ದರೆ ಸರ್ಕಾರ ಮತ್ತು ಪಕ್ಷದ ವರ್ಚಸ್ಸಿಗೆ ಹಾನಿಯಾಗುತ್ತದೆ ಎಂಬುದನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಜತೆ ಚರ್ಚಿಸಿದರು. ಈ ಬೆಳವಣಿಗೆಗಳ ಮರು ಕ್ಷಣದಲ್ಲೇ ಈಶ್ವರಪ್ಪ ಅವರನ್ನು ಸಂಪರ್ಕಿಸಿದ ಬಿಜೆಪಿಯ ಕೇಂದ್ರದ ಪ್ರಭಾವಿ ನಾಯಕರೊಬ್ಬರು ರಾಜೀನಾಮೆಗೆ ಸೂಚಿಸಿದರು’ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಇನ್ನೊಂದು ವರ್ಷದಲ್ಲಿ ವಿಧಾನಸಭಾ ಚುನಾವಣೆಯ ಎದುರಿಸಬೇಕಾಗಿರುವ ಹೊತ್ತಿನಲ್ಲಿ ಪ್ರಕರಣ ಎದುರಾಗಿರುವುದರಿಂದ ರಾಜೀನಾಮೆ ಪಡೆಯದಿದ್ದರೆ ಕಾಂಗ್ರೆಸ್‌ಗೆ ಪ್ರಬಲ ಅಸ್ತ್ರ ನೀಡಿದಂತಾಗುತ್ತದೆ ಎಂಬ ಅಳುಕು ಬಿಜೆಪಿ ನಾಯಕರನ್ನು ಕಾಡುತ್ತಿದೆ. ಶನಿವಾರ ಮತ್ತು ಭಾನುವಾರ ಹೊಸಪೇಟೆಯಲ್ಲಿ ಪಕ್ಷದ ರಾಜ್ಯ ಕಾರ್ಯಕಾರಿಣಿ ಕೂಡ ನಿಗದಿಯಾಗಿದೆ. ಈ ಸಂದರ್ಭದಲ್ಲಿ ಮತ್ತಷ್ಟು ಮುಜುಗರಕ್ಕೆ ಸಿಲುಕಬಹುದು ಎಂಬುದೂ ಸಚಿವರ ರಾಜೀನಾಮೆ ಪಡೆಯಲು ಕಾರಣ ಎಂದು ಗೊತ್ತಾಗಿದೆ.
ಈ ಸರ್ಕಾರದಲ್ಲಿ ಮೂರನೇ ರಾಜೀನಾಮೆ
2019ರ ಜುಲೈನಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಬಳಿಕ ಆರೋಪ ಹೊತ್ತು ರಾಜೀನಾಮೆ ನೀಡುತ್ತಿರುವ ಸಚಿವರಲ್ಲಿ ಕೆ.ಎಸ್. ಈಶ್ವರಪ್ಪ ಮೂರನೆಯವರು. ಅಬಕಾರಿ ಸಚಿವರಾಗಿದ್ದ ಎಚ್. ನಾಗೇಶ್ ಭ್ರಷ್ಟಾಚಾರದ ಆರೋಪದ ಮೇಲೆ 2021ರ ಜನವರಿಯಲ್ಲಿ ರಾಜೀನಾಮೆ ನೀಡಿದ್ದರು. ಜಲ ಸಂಪನ್ಮೂಲ ಸಚಿವರಾಗಿದ್ದ ರಮೇಶ ಜಾರಕಿಹೊಳಿ ಲೈಂಗಿಕ ಹಗರಣದಲ್ಲಿ ಸಿಲುಕಿ 2021ರ ಮಾರ್ಚ್ 3ರಂದು ರಾಜೀನಾಮೆ ನೀಡಿದ್ದರು.
ಬಂಧನದವರೆಗೂ ಹೋರಾಟ: ಕಾಂಗ್ರೆಸ್
ಬೆಂಗಳೂರು: ಸಚಿವ ಕೆ.ಎಸ್. ಈಶ್ವರಪ್ಪ ರಾಜೀನಾಮೆ ನೀಡುವುದಾಗಿ ಘೋಷಿಸಿದ ಬೆನ್ನಲ್ಲೆ, ಸುದ್ದಿಗಾರರ ಜೊತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಈಶ್ವರಪ್ಪ ಅವರನ್ನು ಬಂಧಿಸುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ’ ಎಂದು ಘೋಷಿಸಿದ್ದಾರೆ. ‘ನಮ್ಮ ಹೋರಾಟ ರಾಜೀನಾಮೆ ಕೇಳುವುದಕ್ಕಷ್ಟೆ ಸೀಮಿತವಾಗಿಲ್ಲ. ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಈಶ್ವರಪ್ಪ ಅವರನ್ನು ಬಂಧಿಸುವವರೆಗೆ ಹೋರಾಟ ಮುಂದುವರಿಯಲಿದೆ’ ಎಂದರು.
ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಪ್ರಕರಣದ ವರ್ಗಾವಣೆ
ಉಡುಪಿ: ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣದ ವಿಚಾರಣೆಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ ಎಂದು ಎಸ್‌ಪಿ ಎನ್.ವಿಷ್ಣುವರ್ಧನ್ ತಿಳಿಸಿದರು.
ಚುನಾಯಿತ ಪ್ರತಿನಿಧಿಗಳು ಆರೋಪಿಗಳಾಗಿರುವ ಮತ್ತು ಅವರು ದೂರುದಾರರಾಗಿರುವ ಎಲ್ಲ ಪ್ರಕರಣಗಳ ವಿಚಾರಣೆ ಜನ ಪ್ರತಿನಿಧಿಗಳ ಪ್ರಕರಣಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯಬೇಕು. ಹೀಗಾಗಿ, ಸಂತೋಷ್ ಪ್ರಕರಣವನ್ನು ಉಡುಪಿಯ ಒಂದನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿಜೆಎಂ ನ್ಯಾಯಾಲಯದಿಂದ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ.
ಸ್ವಯಂಪ್ರೇರಣೆಯಿಂದ ರಾಜೀನಾಮೆ: ಬೊಮ್ಮಾಯಿ
‘ಈಶ್ವರಪ್ಪ ಅವರು ನೈತಿಕ ಹೊಣೆ ಹೊತ್ತು ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನಿರ್ಧಾರ ಕೈಗೊಂಡಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಈಶ್ವರಪ್ಪ ಅವರು ನಿರ್ಧಾರ ಪ್ರಕಟಿಸುವ ಮುನ್ನ ನನ್ನೊಂದಿಗೆ ಮಾತನಾಡಿದ್ದರು. ನಾನು ಯಾವುದೇ ತಪ್ಪು ಮಾಡಿಲ್ಲ, ಆದರೆ ಸಚಿವನಾಗಿ ಮುಂದುವರಿದರೆ ಪಕ್ಷ, ಸರ್ಕಾರಕ್ಕೆ ಇರಿಸುಮುರಿಸಾಗುತ್ತದೆ ಎಂದರು. ಆರೋಪ ಮುಕ್ತನಾಗಿ ಬರುವವರೆಗೂ ಸಚಿವ ಸ್ಥಾನದಲ್ಲಿ ಇರುವುದಿಲ್ಲ ಎಂಬ ಮಾತು ಹೇಳಿದ್ದರು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.