ನವದೆಹಲಿ: ಹಿರಿಯ ಸಚಿವ ಕೆ.ಎಸ್ ಈಶ್ವರಪ್ಪ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಹೀಗೆ ಬಹಿರಂಗವಾಗಿ ಪತ್ರ ಬರೆಯಬಾರದಿತ್ತು ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏನೇ ಮನಸ್ತಾಪವಿದ್ದರೂ ಸಂಬಂಧಿಸಿದವರಜೊತೆಗೆ ಚರ್ಚಿಸಬೇಕಿತ್ತು ಎಂದರು.
ಪಕ್ಷದ ವೇದಿಕೆಯಲ್ಲಿ ಇಂಥ ವಿಷಯ ಪ್ರಸ್ತಾಪ ಮಾಡಬೇಕು. ರಾಜ್ಯಪಾಲರಿಗೆ ಈಗೆ ದಿಢೀರ್ ಪತ್ರ ಬರೆಯಬಾರದಿತ್ತು ಎಂದು ಅವರು ಈಶ್ವರಪ್ಪ ವಿರುದ್ಧ ಹರಿಹಾಯ್ದರು.
ಪಕ್ಷವು ಸದ್ಯ, ಐದು ರಾಜ್ಯಗಳ ಹಾಗೂ ಕರ್ನಾಟಕದ ಉಪ ಚುನಾವಣೆ ಮೇಲೆ ಗಮನ ಹರಿಸಿದೆ. ಈಗ ಈಶ್ವರಪ್ಪ ಅವರು ಬರೆದ ಪತ್ರದ ಬಗ್ಗೆ ನಂತರವೇ ಚರ್ಚೆ ಮಾಡುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.
ಗೋಕಾಕ ಶಾಸಕ ರಮೇಶ ಜಾರಕಿಹೋಳಿ ಬಂಧನಕ್ಕೆ ಕಾಂಗ್ರೆಸ್ ಆಗ್ರಹಿಸಿರುವ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅರುಣ್ ಸಿಂಗ್, ಸಿದ್ದರಾಮಯ್ಯ ನಡೆಸಿದ್ದು ಭ್ರಷ್ಟ ಸರ್ಕಾರವಾಗಿತ್ತು. ಕಾಂಗ್ರೆಸ್ ಪಕ್ಷವು ಷಡ್ಯಂತ್ರ ನಡೆಸುತ್ತಲೇ ಇರುತ್ತದೆ. ಬರೀ ಸುಳ್ಳಿನ ಮೇಲೆ ನಂಬಿಕೆ ಇರಿಸಿಕೊಂಡ ಸರ್ಕಾರವಾಗಿತ್ತು ಎಂದರು.
ಜಾರಕಿಹೊಳಿ ಸಿ.ಡಿ. ಬಹಿರಂಗದಲ್ಲಿ ಡಿ.ಕೆ. ಶಿವಕುಮಾರ್ ಪಾತ್ರವೂ ಇದೆ ಎನ್ನಲಾಗುತ್ತಿದೆ. ಇದರ ಪರಿಣಾಮ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಲಿದೆ ಎಂದು ಅವರು ಹೇಳಿದರು.
ಯುವತಿ ದೂರು ಆಧರಿಸಿ ತನಿಖೆ ನಡೆಯುತ್ತಿದೆ. ಮುಂದೆ ಏನಾಗುತ್ತದೆದೆಯೋ ನೋಡೋಣ. ತನಿಖಾ ವರದಿ ಬರಲಿ ಎಂದಷ್ಟೇ ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.