ಹುಬ್ಬಳ್ಳಿ: ಗ್ರಾಮಗಳಲ್ಲಿ ಕೆರೆ, ಕಲ್ಯಾಣಿ , ನಾಲಾ ಪುನಶ್ಚೇತನ, ಗೋಕಟ್ಟೆ ನಿರ್ಮಾಣ ಸೇರಿದಂತೆ ಸಾಂಪ್ರದಾಯಿಕ ಹಾಗೂ ಇತರೆ ಜಲಮೂಲಗಳ ಸಂರಕ್ಷಣೆ ಹಾಗೂ ಪುನಶ್ಚೇತನಕ್ಕಾಗಿ ರಾಜ್ಯದಲ್ಲಿ 3 ಲಕ್ಷಕ್ಕೂ ಅಧಿಕ ಕಾಮಗಾರಿಗಳನ್ನು ಕೈಗೊಳ್ಳುವ ಯೋಜನೆ ರೂಪಿಸಿ,ಇದಕ್ಕಾಗಿ ₹4,310 ಕೋಟಿ ವಿನಿಯೋಗಿಸಲು ಉದ್ದೇಶಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ,ಧಾರವಾಡ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಏರ್ಪಡಿಸಿರುವ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ರಾಜ್ಯಮಟ್ಟದ ಜಲಶಕ್ತಿ ಅಭಿಯಾನ ಚಾಲನೆ ಹಾಗೂ ರಾಜ್ಯಮಟ್ಟದ ಪ್ರಶಸ್ತಿಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಬೇಸಿಗೆ ಸಂದರ್ಭದಲ್ಲಿ ಜನ, ಜಾನುವಾರುಗಳು ನೀರಿಗಾಗಿ ಪರಿತಪಿಸುವುದನ್ನು ತಪ್ಪಿಸಲು ಜಲಸಂರಕ್ಷಣೆಯ ಪ್ರಥಮ ಆದ್ಯತೆಯಾಗಿ ಮುಂಗಾರು ಪ್ರಾರಂಭವಾಗುವ ಮೊದಲೇ ಮಳೆ ನೀರನ್ನು ಸಂಗ್ರಹಿಸುವ ಉದ್ದೇಶದಿಂದ ಸಾಂಪ್ರದಾಯಿಕ ಜಲಮೂಲಗಳನ್ನು ಪುನಶ್ಚೇತನಗೊಳಿಸಲಾಗುತ್ತಿದೆ ಎಂದರು.
ಜಲಸಂರಕ್ಷಣೆ ಕಾರ್ಯಗಳು ರಾಜ್ಯದಲ್ಲೆಡೆ ಬೃಹತ್ ಪ್ರಮಾಣದಲ್ಲಿ ನಡೆಯಲಿವೆ ಎಂದರು.
ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಉದ್ಯೋಗ ಅರಸಿ ಬರುವವರಿಗೆ ತ್ವರಿತವಾಗಿ ಜಾಬ್ ಕಾರ್ಡ ನೀಡಿ ಉದ್ಯೋಗ ಒದಗಿಸುವ ಕಾರ್ಯಕ್ಕೆ ರಾಜ್ಯದಲ್ಲಿ ಉತ್ತಮ ಸ್ಪಂದನೆವ್ಯಕ್ತವಾಗುತ್ತಿದೆ. ರಾಜ್ಯದ ಸಾಧನೆಯನ್ನು ಕೇಂದ್ರ ಸರ್ಕಾರ ಪ್ರಶಂಸೆ ಮಾಡಿ ₹800 ಕೋಟಿ ಅನುದಾನ ಹೆಚ್ಚುವರಿಯಾಗಿ ನೀಡಿದೆ ಎಂದರು.
ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅವರು ನರೇಗಾ ರಥಕ್ಕೆ ಚಾಲನೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರು "ಆಸರೆ" ಪುಸ್ತಕ ಬಿಡುಗಡೆ ಮಾಡಿದರು.
ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀಪಾಟೀಲ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ, ವಾಕರಸಾಸಂ ಅಧ್ಯಕ್ಷ ವಿ.ಎಸ್.ಪಾಟೀಲ ಇದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.