ಮೈಸೂರು: ‘ಮಾಹಿತಿ ತಂತ್ರಜ್ಞಾನ ವಹಿವಾಟು ಮತ್ತು ರಫ್ತಿನಲ್ಲಿ ರಾಜ್ಯವು ಮೊದಲ ಸ್ಥಾನದಲ್ಲಿದೆ. ಉದ್ಯಮವನ್ನು ವಿಸ್ತರಿಸಿಸಶಕ್ತಗೊಳಿಸಲು ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿ–ಧಾರವಾಡ ನಗರಗಳು ಪ್ರಶಸ್ತವಾಗಿವೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.
ನಗರದಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ‘ಬಿಯಾಂಡ್ ಬೆಂಗಳೂರು’ ಅಭಿಯಾನದಡಿಯಲ್ಲಿ ಸೋಮವಾರ ಆಯೋಜಿಸಿದ್ದ ‘ದಿ ಬಿಗ್ ಟೆಕ್ ಶೋ’ ಉದ್ಘಾಟಿಸಿ ಮಾತನಾಡಿದ ಅವರು, ‘ರಾಜ್ಯದ ಎರಡನೇ ಹಾಗೂ ಮೂರನೇ ಶ್ರೇಣಿಯ ನಗರಗಳಲ್ಲಿ ಹೂಡಿಕೆ ಮಾಡಲು ಜಾಗತಿಕ ಕಂಪನಿಗಳು ಉತ್ಸುಕವಾಗಿವೆ. ರಾಜ್ಯ ಸರ್ಕಾರ ಮೂಲಸೌಕರ್ಯ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಲು ಬದ್ಧವಾಗಿದೆ’ ಎಂದರು.
‘ತಂತ್ರಜ್ಞಾನದ ಸೇವೆಗಳು ರಾಜ್ಯದ ಪ್ರತಿಯೊಬ್ಬರಿಗೆ ಲಭ್ಯವಾಗಬೇಕಾದರೆ ಉದ್ದಿಮೆಗಳು ರಾಜ್ಯದ ಇತರಡೆಯೂ ಸ್ಥಾಪನೆಯಾಗಬೇಕು. ಹೀಗಾಗಿ ಎಲೆಕ್ಟ್ರಾನಿಕ್ ಸಿಸ್ಟಂ ಡಿಸೈನ್ ಆ್ಯಂಡ್ ಮ್ಯಾನುಫ್ಯಾಕ್ಚರಿಂಗ್ (ಇಎಸ್‌ಡಿಎಂ) ಘಟಕಗಳ ಸ್ಥಾಪನೆಗೆ ಶೇ 20ರಷ್ಟು ಸಬ್ಸಿಡಿ ನೀಡುತ್ತಿದೆ. ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ₹ 600 ಕೋಟಿ ಮೀಸಲಿಟ್ಟಿದೆ’ ಎಂದು ಮಾಹಿತಿ ನೀಡಿದರು.
‘ಬ್ಯಾಂಕಿಂಗ್‌ನಲ್ಲಿ ಡಿಜಿಟಲ್ ಕ್ರಾಂತಿ ಆಗಿರುವಂತೆ ಐಟಿ, ಬಿಟಿ ಉದ್ಯೋಗಗಳು ಎಲ್ಲ ನಗರಗಳಲ್ಲಿ ದೊರೆಯಬೇಕು. ಇದಕ್ಕಾಗಿಯೇ ಭೂಸುಧಾರಣಾ ಕಾಯ್ದೆ ಮತ್ತು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಜಾರಿಗೊಳಿಸಲಾಗಿದೆ. ಶೇ 50ರಷ್ಟು ಕೃಷಿ ಆಧಾರಿತ ಉದ್ಯಮಗಳು ರಾಜ್ಯದಲ್ಲಿವೆ. ರೈತರು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳು ಈ ತಂತ್ರಜ್ಞಾನ ಆಧರಿತ ಉದ್ಯಮ ವಿಸ್ತರಣೆಯ ಪ್ರಯೋಜನವನ್ನು ಪಡೆಯಲಿದ್ದಾರೆ. ಉದ್ಯಮ ಕ್ಷೇತ್ರಕ್ಕೆ ಪೂರಕವಾಗಿ ಶಿಕ್ಷಣ ವ್ಯವಸ್ಥೆ ಸುಧಾರಿಸಲಾಗುತ್ತಿದೆ’ ಎಂದರು.
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಜೊತೆ ಭೇರುಂಡ ಫೌಂಡೇಶನ್, ಐಎಸ್‌ಎಸಿ ಒಪ್ಪಂಡ ಮಾಡಿಕೊಂಡರೆ, ಕೆಎಟಿಎಸ್ ಜೊತೆ ವಿಎಂವೇರ್ ಒಪ್ಪಂದ ಮಾಡಿಕೊಂಡಿತು.
ಮೇಯರ್ ಸುನಂದಾ ಫಾಲನೇತ್ರ, ರಾಜ್ಯ ಐಟಿ, ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ಕೆಡಿಇಎಂ ಮುಖ್ಯಸ್ಥ ಬಿ.ವಿ.ನಾಯ್ಡು, ಲಹರಿ ಕಂಪನಿ ಸಿಇಒ ಸಂಜೀವ್ ಗುಪ್ತಾ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ನಿರ್ದೇಶಕಿ ಮೀನಾ ನಾಗರಾಜ್, ಜಿಲ್ಲಾಧಿಕಾರಿ ಬಗಾದಿ ಗೌತಮ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.