ADVERTISEMENT

ಎತ್ತಿನಹೊಳೆ ನೀರು ಜುಲೈ ವೇಳೆ ಗುಬ್ಬಿಗೆ: ಮಾಧುಸ್ವಾಮಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2023, 16:22 IST
Last Updated 14 ಫೆಬ್ರುವರಿ 2023, 16:22 IST
   

ಬೆಂಗಳೂರು: ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗಳನ್ನು ಎರಡು ವರ್ಷದೊಳಗೆ ಪೂರ್ಣಗೊಳಿಸಲಾಗುವುದು. ಈ ವರ್ಷದ ಜುಲೈ ವೇಳೆಗೆ ತುಮಕೂರು ಜಿಲ್ಲೆಯ ಗುಬ್ಬಿವರೆಗೆ ನೀರು ಹರಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ವೆಂಕಟರಮಣಯ್ಯ ಟಿ. ಪ್ರಶ್ನೆಗೆ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಪರವಾಗಿ ಮಂಗಳವಾರ ಉತ್ತರಿಸಿದ ಅವರು, ‘ಬೈರಗೊಂಡ್ಲು ಜಲಾಶಯದ ಗಾತ್ರವನ್ನು ತಗ್ಗಿಸಲಾಗಿದೆ. ಮೊದಲು ಗುಬ್ಬಿಯವರೆಗೆ ನೀರು ಹರಿಸಲಾಗುವುದು. ಡಿಸೆಂಬರ್‌ ವೇಳೆಗೆ ಬೈರಗೊಂಡ್ಲು ಜಲಾಶಯಕ್ಕೆ ನೀರು ಹರಿಸಲಾಗುವುದು’ ಎಂದರು.

‘ಎತ್ತಿನಹೊಳೆ ಯೋಜನೆಯ ವ್ಯಾಪ್ತಿಯಲ್ಲಿ ಆರಂಭದಲ್ಲಿ ಸಿಗುವುದೇ ಅರಸೀಕೆರೆ ಕ್ಷೇತ್ರ. ನಮ್ಮ ಕ್ಷೇತ್ರದಲ್ಲೇ ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ಜುಲೈ ವೇಳೆಗೆ ನೀರು ಹರಿಸಲು ಸಾಧ್ಯವೆ’ ಎಂದು ಜೆಡಿಎಸ್‌ನ ಕೆ.ಎಂ. ಶಿವಲಿಂಗೇಗೌಡ ಪ್ರಶ್ನಿಸಿದರು.

ADVERTISEMENT

‘ಕಾಮಗಾರಿ ಚುರುಕಾಗಿ ನಡೆಯುತ್ತಿದೆ. ಮುಖ್ಯಮಂತ್ರಿಯವರು ₹ 1,000 ಕೋಟಿ ಅನುದಾನವನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದಾರೆ. ಕೆಲವು ಸ್ಥಳಗಳಲ್ಲಿ ಮಾತ್ರ ಕಾಮಗಾರಿ ನಿಧಾನಗತಿಯಲ್ಲಿದ್ದು, ಅಲ್ಲಿಯೂ ವೇಗ ನೀಡಲಾಗುವುದು’ ಎಂದು ಸಚಿವರು ತಿಳಿಸಿದರು.

ಪರಿಷ್ಕೃತ ಡಿಪಿಆರ್‌ ಸಿದ್ಧ: ಬಿಜೆಪಿಯ ಕುಮಾರ್ ಬಂಗಾರಪ್ಪ ಪ್ರಶ್ನೆಗೆ ಉತ್ತರಿಸಿದ ಮಾಧುಸ್ವಾಮಿ, ‘ದಂಡಾವತಿ ನದಿಗೆ ‘ಬ್ರಿಡ್ಜ್‌ ಕಂ ಬ್ಯಾರೇಜ್‌’ ನಿರ್ಮಿಸಿ ಸೊರಬ ಮತ್ತು ಶಿಕಾರಿಪುರ ತಾಲ್ಲೂಕಿನ 9,700 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಕಲ್ಪಿಸಲು ಹಾಗೂ ಸುತ್ತಲಿನ ಕೆರೆಗಳನ್ನು ಭರ್ತಿ ಮಾಡಲು ಪರಿಷ್ಕೃತ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲಾಗಿದೆ. ಕರ್ನಾಟಕ ನೀರಾವರಿ ನಿಗಮವು ಡಿಪಿಆರ್‌ ಪರಿಶೀಲಿಸುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.