ADVERTISEMENT

ದಂಡ ವಿಧಿಸಿದ ಬಳಿಕವೂ ರಾಜ್ಯದಲ್ಲಿ ನಿತ್ಯ ಸಂಸ್ಕರಣೆ ಆಗದ 4,423 ಟನ್‌ ಕಸ

ಎನ್‌ಜಿಟಿ ದಂಡ ಹಾಗೂ ನಿರ್ದೇಶನ ಬಳಿಕವೂ ಸುಧಾರಣೆಯಾಗದ ಸ್ಥಿತಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2024, 0:50 IST
Last Updated 14 ಆಗಸ್ಟ್ 2024, 0:50 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ₹2,900 ಕೋಟಿ ದಂಡ ವಿಧಿಸಿ ಹಲವು ಸಲ ಎಚ್ಚರಿಕೆ ನೀಡಿದ ಬಳಿಕವೂ ಕರ್ನಾಟಕದಲ್ಲಿ ಪ್ರತಿದಿನ 4,423 ಟನ್‌ ಕಸ ಸಂಸ್ಕರಣೆ ಆಗುತ್ತಿಲ್ಲ. 

ಪರಿಸರಕ್ಕೆ ಹಾನಿ ಉಂಟು ಮಾಡುವ ಘನ ಹಾಗೂ ದ್ರವ್ಯ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸದ ಕಾರಣಕ್ಕೆ ಕರ್ನಾಟಕ ಸರ್ಕಾರಕ್ಕೆ ಪರಿಸರ ಪರಿಹಾರದಲ್ಲಿ ₹2,900 ಕೋಟಿ ದಂಡ ವಿಧಿಸಿ ಎನ್‌ಜಿಟಿ ಪ್ರಧಾನ ಪೀಠವು 2022ರ ಅಕ್ಟೋಬರ್‌ನಲ್ಲಿ ಆದೇಶಿಸಿತ್ತು. ಪ್ರತ್ಯೇಕ ಖಾತೆ ತೆರೆದು ಈ ಹಣವನ್ನು ಕಸದ ವೈಜ್ಞಾನಿಕ ವಿಲೇವಾರಿಗೆ ಬಳಸಬೇಕು ಎಂದು ತಾಕೀತು ಮಾಡಿತ್ತು. ಕಸ ವಿಲೇವಾರಿಗೆ ಕೈಗೊಂಡ ಉಪಕ್ರಮಗಳ ಬಗ್ಗೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಎನ್‌ಜಿಟಿಗೆ ಪ್ರಮಾಣಪತ್ರ ಸಲ್ಲಿಸಿದ್ದಾರೆ. 

ADVERTISEMENT

316 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ರತಿದಿನ 12,140 ಟನ್‌ ಕಸ ಸಂಗ್ರಹವಾಗುತ್ತಿದೆ. 2022ರಲ್ಲಿ 5,741 ಟನ್‌ ಮಾತ್ರ ಸಂಸ್ಕರಣೆ ಆಗುತ್ತಿತ್ತು. 6,339 ಟನ್‌ ಸಂಸ್ಕರಣೆ ಆಗುತ್ತಿರಲಿಲ್ಲ. ಇದೀಗ 7,717 ಟನ್‌ ಸಂಸ್ಕರಣೆ ಆಗುತ್ತಿದೆ ಎಂದು ಅವರು ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ. 

ಈ ಕಾಮಗಾರಿಗಳ ಮೇಲ್ವಿಚಾರಣೆಗೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಉನ್ನತಾಧಿಕಾರಿಗಳ ಸಮಿತಿಯನ್ನು ರಾಜ್ಯ ರಚಿಸಿದೆ. ಈ ಸಮಿತಿಯು ಹಲವು ಸಭೆಗಳನ್ನು ನಡೆಸಿ ಕಸ ವೈಜ್ಞಾನಿಕ ವಿಲೇವಾರಿಗೆ ರೂಪುರೇಷೆ ಸಿದ್ಧಪಡಿಸಿದೆ. ರಾಜ್ಯ ಸರ್ಕಾರವು 2022–23ನೇ ಸಾಲಿನಲ್ಲಿ ₹1,947 ಕೋಟಿಯನ್ನು ಪ್ರತ್ಯೇಕ ಖಾತೆಗೆ ವರ್ಗಾವಣೆ ಮಾಡಿದೆ ಎಂದು ಅವರು ಹೇಳಿದ್ದಾರೆ. 

ರಾಜ್ಯದ ಮಹಾನಗರ ಪಾಲಿಕೆ ವ್ಯಾಪ್ತಿಗಳ ಭೂಭರ್ತಿ ಘಟಕಗಳಲ್ಲಿ ವರ್ಷಗಳಿಂದ ಕೊಳೆಯುತ್ತಿರುವ 180 ಲಕ್ಷ ಟನ್ ಹಳೆಯ ಕಸ ಇದೆ. ಇದರ ವೈಜ್ಞಾನಿಕ ವಿಲೇವಾರಿಗಾಗಿ ಸ್ವಚ್ಛ ಭಾರತ್‌ ಮಿಷನ್ 2.0 ಅಡಿಯಲ್ಲಿ ₹ 954 ಕೋಟಿ ಮೀಸಲಿಡಲಾಗಿದೆ. ನೀರಿನ ನಿರ್ವಹಣೆಗಾಗಿ ₹ 2,252 ಕೋಟಿ ಬಳಸಲಾಗುತ್ತಿದೆ ಎಂದು ಮುಖ್ಯ ಕಾರ್ಯದರ್ಶಿ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ. 

ಪ್ರಮಾಣಪತ್ರದಲ್ಲಿ ಏನಿದೆ?: 

315 ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಿತ್ಯ 6,278 ಟನ್‌ ಕಸ ಉತ್ಪತ್ತಿಯಾಗುತ್ತಿದೆ. ಒಣ ಕಸ, ಹಸಿ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತಿದ್ದು, 4,827 ಟನ್ ಸಂಸ್ಕರಣೆ ಆಗುತ್ತಿದೆ. ಉಳಿದ 1,436 ಟನ್‌ ಸಂಸ್ಕರಣೆಗೆ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಸ ಸಂಸ್ಕರಣೆಗಾಗಿ ₹ 2,006 ಕೋಟಿ ವೆಚ್ಚ ಮಾಡಲಾಗುತ್ತಿದೆ. 

ಬಿಬಿಎಂಪಿ ವ್ಯಾಪ್ತಿಯಲ್ಲಿ 3,025 ಟನ್‌ ಹಸಿ ತ್ಯಾಜ್ಯ ಸಂಗ್ರಹವಾಗುತ್ತಿದೆ. ಸಂಸ್ಕರಣೆ ಆಗುತ್ತಿರುವುದು 2,150 ಟನ್‌ ಮಾತ್ರ. 1,925 ಟನ್‌ ಒಣ ತ್ಯಾಜ್ಯದ ಪೈಕಿ ಸಂಸ್ಕರಣೆ ಆಗುತ್ತಿರುವುದು 650 ಟನ್‌. ಒಣ ಕಸ ಸಂಸ್ಕರಣೆ, ಕಸದಿಂದ ವಿದ್ಯುತ್‌ ಉತ್ಪಾದಿಸಲು ಯೋಜನೆಗಳನ್ನು ರೂಪಿಸಲಾಗಿದ್ದು, ಸಚಿವ ಸಂಪುಟದ ಅನುಮೋದನೆ ಬಾಕಿ ಇದೆ.

ನಗರ ವ್ಯಾಪ್ತಿಯಲ್ಲಿ ನಿತ್ಯ 4,750 ಟನ್‌ ಕಟ್ಟಡ ಅವಶೇಷಗಳ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ವೈಜ್ಞಾನಿಕವಾಗಿ ವಿಲೇವಾರಿ ಆಗುತ್ತಿರುವುದು 1,750 ಟನ್‌. ಉಳಿದ 3 ಸಾವಿರ ಟನ್‌ ತ್ಯಾಜ್ಯದ ಸಂಸ್ಕರಣೆಗಾಗಿ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗಿದೆ. ರಾಜ್ಯದಲ್ಲಿ ಕಸ ಸಂಸ್ಕರಣಾ ಘಟಕಗಳ ನಿರ್ಮಾಣಕ್ಕಾಗಿ 281 ಜಾಗಗಳನ್ನು ಗುರುತಿಸಲಾಗಿದೆ. ಎನ್‌ಜಿಟಿ ನಿರ್ದೇಶನ ನೀಡಿದ ಬಳಿಕ ಕಸ ಸಂಸ್ಕರಣೆಯಲ್ಲಿ ಗಣನೀಯ ಸುಧಾರಣೆ ಆಗಿದೆ. 2,373 ಟನ್ ಹಸಿ ತ್ಯಾಜ್ಯ ವಿಲೇವಾರಿಗಾಗಿ ಸ್ವಚ್ಛ ಭಾರತ್‌ ಮಿಷನ್‌ನಲ್ಲಿ ₹ 814 ಕೋಟಿಯ ಯೋಜನೆ ರೂಪಿಸಿ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.