ಬೆಳಗಾವಿ: ಮೀಸಲಾತಿ ಪಟ್ಟಿಯಲ್ಲಿನ ಸ್ಥಾನಪಲ್ಲಟಕ್ಕೆ ಸುದೀರ್ಘ ಹೋರಾಟ ನಡೆಸಿದ್ದ ಲಿಂಗಾಯತ ಪಂಚಮಸಾಲಿ ಸಮುದಾಯ ಹಾಗೂ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕೆಂಬ ಒಕ್ಕಲಿಗರ ಬೇಡಿಕೆಗೆ ಮನ್ನಣೆ ನೀಡಿರುವ ಸರ್ಕಾರ, ಈ ಎರಡೂ ಸಮುದಾಯಗಳಿಗೆ ಹೊಸ ಪ್ರವರ್ಗವನ್ನೇ ಸೃಷ್ಟಿಸಿದೆ.
ವಿಧಾನಮಂಡಲ ಅಧಿವೇಶನ ಮುಗಿಯುತ್ತಿದ್ದಂತೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಪರಿಶಿಷ್ಟ ಜಾತಿ–ಪಂಗಡದವರ ಮೀಸಲು ಪ್ರಮಾಣದ ಹೆಚ್ಚಳದ ನಿರ್ಧಾರ ಪ್ರಕಟಿಸಿದ್ದ ಬೆನ್ನಲ್ಲೇ, ಉಳಿದ ಸಮುದಾಯಗಳು ಮೀಸಲಾತಿ ಬೇಡಿಕೆಯನ್ನು ಮುಂದಿಟ್ಟು ಹೋರಾಟಕ್ಕೆ ಅಣಿಯಾಗಿದ್ದವು. ವಿಧಾನಸಭೆ ಚುನಾವಣೆ ಹೊತ್ತಿನಲ್ಲಿ ಮೀಸಲಾತಿ ಬೇಡಿಕೆಗಳು ಕಾವು ಪಡೆಯುತ್ತಿರುವುದನ್ನು ಅರಿತ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ, ಎರಡು ಪ್ರಬಲ ಸಮುದಾಯಗಳ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ನಿರ್ಣಯ ಕೈಗೊಂಡಿದೆ. ನಾಲ್ಕು ತಿಂಗಳಿನಲ್ಲಿ ನಡೆಯಲಿರುವ ಚುನಾವಣೆಗೆ ಮತಬ್ಯಾಂಕ್ ಅನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವತ್ತ ದೃಷ್ಟಿ ನೆಟ್ಟಿದೆ.
ಮೀಸಲಾತಿ ಪ್ರವರ್ಗ ಪುನರ್‌ರಚನೆ ಮಾಡಿದ್ದು, ‘ಪ್ರವರ್ಗ 3 ಎ’ನಲ್ಲಿದ್ದ ಒಕ್ಕಲಿಗ ಸಮುದಾಯವನ್ನು ಹೊಸದಾಗಿ ರೂಪಿಸಿರುವ ‘2 ಸಿ’ ಪ್ರವರ್ಗದಡಿ ತರಲಾಗಿದೆ. ಪ್ರವರ್ಗ 2 ಎಗೆ ಪಟ್ಟು ಹಿಡಿದಿದ್ದ ಪಂಚಮಸಾಲಿ ಸಮುದಾಯಕ್ಕೆ ಅದನ್ನು ನೀಡಿಲ್ಲ.
ರಾಜ್ಯದಲ್ಲಿ ಮೀಸಲಾತಿ– ಲೆಕ್ಕಾಚಾರ
ಪ್ರವರ್ಗ; ಮೀಸಲಾತಿ ಪ್ರಮಾಣ (ಶೇ)
ಪರಿಶಿಷ್ಟ ಜಾತಿ;17
ಪರಿಶಿಷ್ಟ ಪಂಗಡ;7
ಪ್ರವರ್ಗ–1;4
ಪ್ರವರ್ಗ–2ಎ;15
ಪ್ರವರ್ಗ–2ಬಿ;4
ಪ್ರವರ್ಗ–2ಸಿ;7
ಪ್ರವರ್ಗ–2ಡಿ;9
ಇಡಬ್ಲ್ಯುಎಸ್ (ಬ್ರಾಹ್ಮಣ, ಆರ್ಯ ವೈಶ್ಯ, ನಾಯರ್, ಮೊದಲಿಯಾರ್); 3
ಒಟ್ಟು; 66
ಯಾವ ಪ್ರವರ್ಗದಲ್ಲಿ ಯಾವ ಜಾತಿ
l ಪರಿಶಿಷ್ಟ ಜಾತಿ (ಹೊಲೆಯ, ಮಾದಿಗ, ಬೋವಿ, ಲಂಬಾಣಿ, ಕೊರಚ, ಕೊರಮ ಸೇರಿ 101 ಜಾತಿಗಳು)
l ಪರಿಶಿಷ್ಟ ಪಂಗಡ (ವಾಲ್ಮೀಕಿ, ನಾಯಕ, ಸೋಲಿಗರು, ಕುರುಮಾನ್ ಸೇರಿದಂತೆ 50 ಜಾತಿಗಳು)
l ಹಿಂದುಳಿದ ವರ್ಗಗಳ ಪ್ರವರ್ಗ 1 (ಗಂಗಾಮತಸ್ಥ, ಉಪ್ಪಾರ, ಗೊಲ್ಲ ಸೇರಿ 95 ಜಾತಿಗಳು)
l ಹಿಂದುಳಿದ ವರ್ಗಗಳ ಪ್ರವರ್ಗ 2ಎ (ಕುರುಬ, ಈಡಿಗ, ವಿಶ್ವಕರ್ಮ, ಕುಂಬಾರ, ಸವಿತಾ ಸಮಾಜ, ದೇವಾಂಗ, ನೇಕಾರ, ಮಡಿವಾಳ ಸೇರಿ 102 ಜಾತಿಗಳು)
l ಹಿಂದುಳಿದ ವರ್ಗಗಳ ಪ್ರವರ್ಗ 2ಬಿ (ಮುಸ್ಲಿಂ ಮತ್ತು ಅದರಲ್ಲಿರುವ ಉಪ ಜಾತಿಗಳು),
l ಹಿಂದುಳಿದ ವರ್ಗಗಳ ಪ್ರವರ್ಗ 2ಸಿ (ಒಕ್ಕಲಿಗ, ಒಕ್ಕಲಿಗರ ಉಪಜಾತಿಗಳು, ರೆಡ್ಡಿ, ಕಮ್ಮ,ನಾಯ್ಡು, ಬಲಿಜ, ಬಂಟ, ಕೊಡಗರು)
l ಹಿಂದುಳಿದ ವರ್ಗಗಳ ಪ್ರವರ್ಗ 2 ಡಿ ( ವೀರಶೈವ ಲಿಂಗಾಯತ,
ಪಂಚಮಸಾಲಿ, ಲಿಂಗಾಯತ ಉಪಜಾತಿಗಳು, ಕ್ರಿಶ್ಚಿಯನ್ )
ಇಡಬ್ಲ್ಯುಎಸ್ ಹಂಚಿಕೆ ಮೊದಲು ಅಧ್ಯಯನ
‘ಇಡಬ್ಲ್ಯುಎಸ್ ವರ್ಗದ ಶೇ 10 ಮೀಸಲಾತಿಯನ್ನು ವಿಭಜಿಸಿ ಹಂಚಿಕೆ ಮಾಡುವುದಕ್ಕೂ ಮೊದಲು ಯಾವುದೇ ಮೀಸಲಾತಿ ವರ್ಗದಲ್ಲಿ ಇಲ್ಲದ ಬ್ರಾಹ್ಮಣ, ವೈಶ್ಯ, ಜೈನ, ನಾಯರ್, ಮೊದಲಿಯಾರ್ ವರ್ಗದ ಜನಸಂಖ್ಯೆಯಲ್ಲಿ ಮೀಸಲಾತಿಗೆ ಅರ್ಹರಿರುವ ಸಂಖ್ಯೆಯ ಅಧ್ಯಯನ ನಡೆಸಲಾಗುವುದು. ಎರಡು ತಿಂಗಳಲ್ಲಿ ವರದಿ ಪಡೆದು ಹಂಚಿಕೆಯನ್ನು ನಿರ್ಧರಿಸಲಾಗುವುದು’ ಎಂದು ಸಚಿವ ಮಾಧುಸ್ವಾಮಿ ವಿವರಿಸಿದರು.
‘ಇಡಬ್ಲ್ಯುಎಸ್ ವರ್ಗದ ಶೇ 10 ಮೀಸಲಾತಿಯನ್ನು ವಿಭಜಿಸಿ ಶೇ 4ನ್ನು ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ, ಶೇ 3 ನ್ನು ಒಕ್ಕಲಿಗ ಸಮುದಾಯಕ್ಕೆ ಮತ್ತು ಉಳಿದ ಶೇ 3ರನ್ನು ಕೇಂದ್ರದ ಇತರ ಹಿಂದುಳಿದ ವರ್ಗಗಳ (ಒಬಿಸಿ) ಜಾತಿ ಪಟ್ಟಿಯಲ್ಲಿ ಇಲ್ಲದ ಆರ್ಥಿಕವಾಗಿ ದುರ್ಬಲ ವರ್ಗದ ಸಮುದಾಯಕ್ಕೆ ನೀಡಲು ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ’ ಎಂದು ಹಿರಿಯ ಸಚಿವರೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.